ಮಂಜೇಶ್ವರ: ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧ?......... ಹೌದು! ಎಲ್ಲಿನ ಬಂಗಾಲ, ಎಲ್ಲಿನ ತಿರುವನಂತಪುರ, ಎಲ್ಲಿನ ಮಂಗಳೂರು ಮಾರ್ನಮಿಕಟ್ಟೆ............... ಪಶ್ಚಿಮ ಬಂಗಾಲದಿಂದ ದಕ್ಷಿಣ ಕೇರಳದ ತಿರುವನಂತಪುರಕ್ಕೆ ಕೆಲಸವರಸಿ ಬಂದ ಯುವಕ ಮನೋವ್ಯಥೆಗೊಳಗಾಗಿ ತನಗರಿವಿಲ್ಲದೆಯೇ ಬಂದು ಬಿದ್ದದ್ದು ಮಾತ್ರ ಮಂಗಳೂರಿನಲ್ಲಿ. ಹೀಗೆ ಮಾನಸಿಕ ಸ್ಥಿಮಿತ ಕಳೆದು ಎಲ್ಲೋ ಬಿದ್ದು ಕಮರಿ ಹೋಗುವ ಬಡ ಜೀವಗಳೆಷ್ಟು? ಆದರೆ, ತನಗೆ ಸಂಬಂಧವಿಲ್ಲದ ಮಂಗಳೂರಿಗೆ ತಲುಪಿದ್ದರಿಂದಲೇ ಆತ ಸ್ನೇಹದ ಬೀಡಿನ ಆಶ್ರಯ, ಆರೈಕೆ ಹೊಂದುವಂತಾದ. ಇದರಿಂದಾಗಿಯೇ ಪೂರ್ಣ ಗುಣಮುಖನಾಗಿ ಸಂಬಂಧಿಕರನ್ನು ಮರಳಿ ಗಳಿಸಿ ಸುಂದರ ಬದುಕು ರೂಪಿಸುವಂತಾದ.........
ಆತ ವಿಕ್ರಮ್ ಮಂಡಾಲ. 28 ರ ಹರೆಯ. ವಿವಾಹಿತನಾಗಿ ಮೂರು ವರ್ಷ ಹಾಗೂ ಎರಡು ತಿಂಗಳ ಪುಟಾಣಿಯರ ಅಪ್ಪ. ತಂದೆ, ತಾಯಿ ಒಳಗೊಂಡ ಮಧ್ಯಮ ವರ್ಗದ ಕುಟುಂಬ ನಡೆಸುವ ಹೊಣೆಗಾರಿಕೆ ಆ ಯುವಕನ ಮೇಲೆ. ಮೇಸ್ತ್ರಿ ಕೆಲಸ ಮಾಡುತ್ತಿದ್ದ, ಮೈಮುರಿದು ದುಡಿಯುತ್ತಿದ್ದ. ನಿರ್ಮಾಣ ಕೆಲಸಕ್ಕೆ ಕೇರಳದಲ್ಲಿ ಉತ್ತಮ ವೇತನ ದೊರಕುತ್ತಿರುವುದಾಗಿ ಅರಿತು ಆರು ತಿಂಗಳ ಹಿಂದೆ ಸಂಗಡಿಗರ ಜೊತೆಗೆ ಕೇರಳದ ತಿರುವನಂತಪುರಕ್ಕೆ ಬಂದಿದ್ದ. ಪುಟಾಣಿಯರನ್ನು ಬಿಟ್ಟು ಒಲ್ಲದ ಮನಸ್ಸಿನಿಂದಲೇ ಬಂದಾತನಿಗೆ ಕುಟುಂಬದ ನೆನಪು ಬಲವಾಗಿ ಕಾಡುತ್ತಿತ್ತು. ಹೀಗಿರಲೊಂದು ದಿನ ತಿರುವನಂತಪುರದಿಂದ ದಿಢೀರ್ ನಾಪತ್ತೆಯಾಗಿದ್ದ. ಸಹ ಕಾರ್ಮಿಕರು ಹುಡುಕಾಡಿಯೂ ಫಲಕಾರಿಯಾಗಿರಲಿಲ್ಲ. ಊರಿಗೆ ಸಂದೇಶ ರವಾನಿಸಿದ್ದರು. ಆದರೆ, ಆತ ಹುಟ್ಟೂರಿಗೂ ತಲುಪಿರಲಿಲ್ಲ........
ಇತ್ತ..... ಮಂಗಳೂರು ನಗರದ ಮಾರ್ನಮಿಕಟ್ಟೆಯಲ್ಲಿ ಕೊಳಕು ಬಟ್ಟೆ ಧರಿಸಿ ಯುವಕನೋರ್ವ ಅಂಗಡಿ ವರಾಂಡದಲ್ಲಿ ಕುಳಿತು ಗೊಣಗಾಡುತ್ತಿರುವ ಬಗ್ಗೆ ಮಾಹಿತಿಯರಿತು ಇದೇ ಕಳೆದ ಜೂನ್ 25 ರಂದು ಸ್ನೇಹಾಲಯ ರೂವಾರಿ ಜೋಸೆಫ್ ಕ್ರಾಸ್ತಾರು ಅತ್ತ ತೆರಳುತ್ತಾರೆ. ಆತನ ಸ್ಥಿತಿಯಿಂದ ಮರುಕಗೊಂಡು ತಕ್ಷಣವೇ ಕರೆ ತರುತ್ತಾರೆ. ಆತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ತಜ್ಞ ಚಿಕಿತ್ಸೆಗೆ ಒಳಪಡಿಸುತ್ತಾರೆ. ಬಳಿಕ ಸ್ನೇಹ ಮನೆಯಲ್ಲಿ ಸೂಕ್ತ ಉಪಚಾರ, ಆಪ್ತ ಸಮಾಲೋಚನೆ ನೀಡಲಾಯಿತು. ದಿನಗಳ ಹಿಂದೆ ಮನೋಸ್ಥಿತಿ ಮರಳಿ ಗಳಿಸಿದಾತ ನಡೆದದ್ದೆಲ್ಲವನ್ನೂ ಸ್ಮರಿಸಿದ್ದ. ಹಾಗೆ, ಸ್ನೇಹಾಲಯವು ಹುಟ್ಟೂರಿಗೆ ಮಾಹಿತಿ ನೀಡಿದೆ. ಬುಧವಾರ ಆತನ ಭಾವ ಸಹಿತ ಸಂಬಂಧಿಕರು ತಲುಪಿ ಬದುಕಿಸಿದ ಸ್ನೇಹಾಲಯಕ್ಕೆ ಸಹಸ್ರ ಕೃತಜ್ಞತೆ ಅರ್ಪಿಸಿ ವಿಕ್ರಂ ಮಂಡಾಲನನ್ನು ಊರಿಗೆ ಕರೆದುಕೊಂಡು ಹೋಗಿದ್ದಾರೆ. ಹಾಗೆ, ಸ್ನೇಹಮನೆಯ ಪುನಶ್ಚೇತನ ಚಟುವಟಿಕೆಯಲ್ಲಿ ಇದು ಮತ್ತೊಂದು ಗರಿಯಾಯಿತು.


