ಮುಳ್ಳೇರಿಯ: ವ್ಯಕ್ತಿಯ ವರ್ತನೆ, ಯೋಚನೆ, ಮತ್ತು ಭಾವನೆಗಳನ್ನು ಒಟ್ಟು ಸೇರಿಸಿ ವ್ಯಕ್ತಿತ್ವ ಎನ್ನಬಹುದು. ವ್ಯಕ್ತಿ ಬೆಳೆದು ಬಂದ ಪರಿಸರ ಆತನ ವ್ಯಕ್ತಿತ್ವದ ಮೇಲೆ ನೇರ ಪ್ರಭಾವ ಬೀರುವುದು.ಹಾಗೂ ವ್ಯಕ್ತಿಯನ್ನು ಇನ್ನೊಬ್ಬನಿಂದ ಭಿನ್ನವಾಗಿಸುವುದು ಎಂದು ಚಾಲಕ್ಕುಡಿ ಚಾವರ ಸಂಶೋಧನಾ ಅಕಾಡೆಮಿಯ ಫಾದರ್ ವಿಲ್ಸನ್ ಹೇಳಿದರು.
ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಲಾದ ವ್ಯಕ್ತಿತ್ವ ವಿಕಸನ ತರಗತಿ ನೀಡಿ ಮಾತನಾಡಿದರು.
ನಮ್ಮನ್ನು ಇತರರು ಇಷ್ಟ ಪಡಲು ಅಥವಾ ಇಷ್ಟ ಪಡದಿರಲು ನಮ್ಮ ವ್ಯಕ್ತಿತ್ವ ಮುಖ್ಯ ಕಾರಣ.ಮಹಾನ್ ವ್ಯಕ್ತಿಗಳ ಜೀವನದ ಬಗೆಗಿನ ಅರಿವು ನಮ್ಮ ವ್ಯಕ್ತಿತ್ವವನ್ನು ಚೆನ್ನಾಗಿ ರೂಪಿಸಿಕೊಳ್ಳಲು, ನಮ್ಮನ್ನು ನಾವು ತಿಳಿಯಲು ಸಹಕಾರಿ. ಉತ್ತಮ ವ್ಯಕ್ತಿತ್ವ ಹೊಂದಿದವರನ್ನು ಜನರು ವಿಶೇಷವಾಗಿ ಗುರುತಿಸುತ್ತಾರೆ. ನಮ್ಮ ವ್ಯಕ್ತಿತ್ವವನ್ನು ಚೆನ್ನಾಗಿ ರೂಪಿಸಿದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕೊನೆಯ ಹಂತದ ಸಂದರ್ಶನದ ವೇಳೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸಾಧನೆ ತೋರ್ಪಡಿಸಬಹುದು ಎಂದವರು ತಿಳಿಸಿದರು. ಉತ್ತಮ ವ್ಯಕ್ತಿತ್ವ ಹೊಂದುವುದು ಅಥವಾ ಉತ್ತಮರಾಗಿ ಕಾಣಿಸುವುದು ಎಂದರ್ಥವಲ್ಲ.ಬಾಹ್ಯ ಸೌಂದರ್ಯ, ಆಸ್ತಿ ಅಂತಸ್ತುಗಳಿಗಿಂತ ವ್ಯಕ್ತಿತ್ವ ಎನ್ನುವುದು ಬಲು ಮುಖ್ಯ. ಇತರರನ್ನು ಅವಲೋಕಿಸುವುದರಲ್ಲಿ ಕಾಲ ಕಳೆಯುವುದಕ್ಕಿಂತ ನಮ್ಮನ್ನು ನಾವು ಸರಿಪಡಿಸಿಕೊಳ್ಳಬೇಕು. ನಮ್ಮ ಬದಲಾವಣೆ ಇತರರಿಗೆ ಮಾದರಿಯಾಗುವಂತೆ ಇರಬೇಕು ಎಮದು ಅವರು ಈ ಸಂದರ್ಭ ಹೇಳಿದರು. ಹೆಚ್ಚಿನ ಓದು, ಕಲಿಕೆ, ಹೊಸತನ್ನು ಕಲಿಯುವ ಆಸಕ್ತಿ ಇತರರನ್ನು, ಅವರ ಅಭಿಪ್ರಾಯಗಳನ್ನು ಗೌರವಿಸುವ ಗುಣಗಳನ್ನು ನಮ್ಮದಾಗಿಸಿದಲ್ಲಿ ನಾವು ಉತ್ತಮ ವ್ಯಕ್ತಿ ಎನಿಸಿಕೊಳ್ಳ ಬಹುದು. ವ್ಯಕ್ತಿ ತಾನು ಗಳಿಸಿದ ಅರಿವಿನಿಂದ ಧೈರ್ಯ ಹಾಗೂ ನಗು ನಗುತ್ತಾ ಮಾತನಾಡುತ್ತಾನೆ ಎಂದರೆ ಉಳಿದೆಲ್ಲವೂ ನಗಣ್ಯವಾಗಿ ಸಹಜವಾಗಿ ಆತನಿಗೆ ಗೌರವ ಕೊಡುತ್ತಾರೆ ಹಾಗೂ ಆತ ಸರ್ವ ಮಾನ್ಯನಾಗುತ್ತಾನೆ ಎಂದರಲ್ಲದೆ ಓದಿನ ಕೋಣೆ, ಅಧ್ಯಯನ ರೀತಿ ಹಾಗೂ ಸಿದ್ಧತೆ ಪರೀಕ್ಷೆಗಳನ್ನು ಎದುರಿಸುವ ರೀತಿಗಳನ್ನು ತಿಳಿಸಿದರು.
ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಫಾದರ್ ಜಿಯಾಂಟೋ ಕ್ರಿಯಾತ್ಮಕ ಚಟುವಟಿಕೆಗಳ ತರಗತಿ ನೀಡಿದರು.ಶಿಕ್ಷಕಿ ಮೇರಿ ವಿರೋನಿ ನೀತು ವಂದಿಸಿದರು.


