ಕಾಸರಗೋಡು: ಕೇರಳ ರಸ್ತೆ ಸಾರಿಗೆ ನಿಗಮದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಂ ಪ್ಯಾನೆಲ್ ನೌಕರರನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಎಸ್ಸಾರ್ಟಿಸಿ ಸೇವೆ ಅಸ್ತವ್ಯಸ್ತಗೊಂಡಿದೆ. ಸುಪ್ರೀಂ ಕೋರ್ಟು ತೀರ್ಪಿನ ಹಿನ್ನೆಲೆಯಲ್ಲಿ ತಾತ್ಕಾಲಿಕ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.
ಕೇರಳಾದ್ಯಂತ 2108ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದು, ಇದರಿಂದ ರಾಜ್ಯದಲ್ಲಿ 376 ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಲ್ಲಿ ಕಾಸರಗೋಡು ಜಿಲ್ಲೆಯ 49ಮಂದಿ ಸಿಬ್ಬಂದಿ ಒಳಗೊಂಡಿದ್ದು, ಜಿಲ್ಲೆಯಲ್ಲೂ ಬಸ್ ಸಂಚಾರಕ್ಕೆ ಬಾ„ಸಿದೆ. ಮಂಗಳೂರು, ಸುಳ್ಯ, ಪುತ್ತೂರು ಒಳಗೊಂಡಂತೆ ವಿವಿಧ ರೂಟ್‍ಗಳಲ್ಲಿ ಕೆಲವು ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಕೋಯಿಕ್ಕೋಡ್, ಕಣ್ಣೂರು ಸಹಿತ ವಿವಿಧೆಡೆಯಿಂದ ಕಾಸರಗೋಡಿಗೆ ಬರಬೇಕಾದ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿತ್ತು. ಇದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಬೇಕಾಯಿತು.
ಈಗಾಗಲೇ ರಜೆಯಲ್ಲಿ ತೆರಳಿರುವ ಕಾಯಂ ಸಿಬ್ಬಂದಿ ತಕ್ಷಣ ಕೆಲಸಕ್ಕೆ ಹಾಜರಾಗುವಂತೆ ನಿಗಮ ಅ„ಕಾರಿಗಳು ನಿರ್ದೇಶ ನೀಡಿದ್ದಾರೆ. ಪ್ರಸಕ್ತ ಕೆಎಸ್ಸಾರ್ಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕರ ನೇಮಕಾತಿಗಾಗಿ ಲೋಕಸೇವಾ ಆಯೋಗ ಪರೀಕ್ಷೆ ನಡೆಸಿದ್ದು, 3861ಮಂದಿ ರ್ಯಾಂಕ್ ಲಿಸ್ಟ್‍ನಲ್ಲಿ ಹೆಸರು ಒಳಗೊಂಡಿದೆ. ಈ ಮಧ್ಯೆ ಕೆಎಸ್ಸಾರ್ಟಿಸಿ ತಾತ್ಕಾಲಿಕ ನೇಮಕಾತಿ ನಡೆಸಿರುವುದನ್ನು ಪ್ರಶ್ನಿಸಿ, ರ್ಯಾಂಕ್‍ಲಿಸ್ಟ್‍ನಲ್ಲಿ ಹೆಸರು ಹೊಂದಿರುವವರು ಸಲ್ಲಿಸಿದ್ದ ಮನವಿ ಪರಿಗಣಿಸಿ, ರಾಜ್ಯ ಹೈಕೋರ್ಟ್ ಪಿಎಸ್‍ಸಿ ರ್ಯಾಂಕ್‍ದಾರರನ್ನು ನೇಮಿಸಿಕೊಳ್ಳುವಂತೆ ಆದೇಶ ನೀಡಿತ್ತು. ಈ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು.
ದಿನವೇತನ ಆಧಾರದಲ್ಲಿ ನೇಮಕ:
ವಜಾಗೊಳಿಸಿರುವ ಸಿಬ್ಬಂದಿಯನ್ನು ದಿನವೇತನ ಆಧಾರದಲ್ಲಿ ಮತ್ತೆ ನೇಮಕಗೊಳಿಸಿ, ತಕ್ಷಣ ಎದುರಾಗಿರುವ ಸಮಸ್ಯೆ ಬಗೆಹರಿಸಲು ಕೆಎಸ್ಸಾರ್ಟಿಸಿ ತುರ್ತು ಸಭೆ ತೀರ್ಮಾನಿಸಿದೆ. ಆದರೆ, ರ್ಯಾಂಕ್‍ಲಿಸ್ಟ್‍ನಲ್ಲಿ ಹೆಸರು ಹೊಂದಿರುವವರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದರೆ, ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.


