HEALTH TIPS

ಶ್ರೀಧರ ಏತಡ್ಕ ಅವರಿಗೆ ಡಾಕ್ಟರೇಟ್ ಪದವಿ

   
     ಬದಿಯಡ್ಕ: ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀಧರ ಏತಡ್ಕ ಅವರು ಕಣ್ಣೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
     `ತೀಯರ ಆರಾಧನೆಗಳಲ್ಲಿ ದ್ರಾವಿಡ ಪರಿಕಲ್ಪನೆ' ಎಂಬ ವಿಷಯವನ್ನು ಆಯ್ದುಕೊಂಡು ಡಾ.ರಾಧಾಕೃಷ್ಣ  ಬೆಳ್ಳೂರು ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪಿ.ಹೆಚ್.ಡಿ. ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ.
    ಶ್ರೀಧರ ಏತಡ್ಕ ಅವರು ಕುಂಬ್ಡಾಜೆ ಗ್ರಾಮದ ನಿಡುವಣಬಯಲು ದಿ.ಕರ್ತಕುಟ್ಟಿ ಆಯತ್ತಾರ್ ಮತ್ತು ದಿ. ಚೋಯಿಚ್ಚಿ ದಂಪತಿಗಳ ಪುತ್ರ. ಪತ್ನಿ ರಶ್ಮಿ ಕೆ.ಎಂ., ಶ್ರೀಪರ್ಣ ಮತ್ತು ಸೃಜನ್‍ಕೃಷ್ಣ ಇಬ್ಬರು ಮಕ್ಕಳು. ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಸ್ಕೂಲು ಮತ್ತು ಕಾಸರಗೋಡು ಸರಕಾರಿ ಕಾಲೇಜಿನ ಹಳೆ ವಿದ್ಯಾರ್ಥಿ. ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ಅಧ್ಯಯನವನ್ನು ನಡೆಸಿ ಕನ್ನಡದಲ್ಲಿ ಎಂ.ಫಿಲ್ ಪದವಿಯನ್ನು 2003ರಲ್ಲಿ ಪಡೆದುಕೊಂಡಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದಲ್ಲಿ `ಯಕ್ಷಗಾನದಲ್ಲಿ ಆಹಾರ್ಯ' ಎಂಬ ವಿಷಯದಲ್ಲಿ ನಡೆದ ಯುಜಿಸಿ ಪ್ರಧಾನ ಸಂಶೋಧನ ಯೋಜನೆಯಲ್ಲಿ ಸಂಶೋಧನ ಸಹಾಯಕರಾಗಿ ಎರಡು ವರ್ಷಗಳ ಕಾಲ ದುಡಿದ ಅನುಭವ. ಕೇರಳ ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕ ಹುದ್ದೆಯಲ್ಲಿ ಎರಡು ವರ್ಷಗಳ ಕಾಲ ದುಡಿದಿದ್ದಾರೆ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿಯೂ ದುಡಿದ ಅವರು ಸದ್ಯ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಹನ್ನೊಂದು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
      ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ `ದಕ್ಷಿಣ ಭಾರತೀಯ ಜಾನಪದ ವಿಶ್ವಕೋಶ'ದಲ್ಲಿ ಅನುವಾದಕನಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ 'ದೇಸಿ ಕೃಷಿ ವಿಜ್ಞಾನ ಕೋಶ'ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕøತಿ ಅಧ್ಯಯನ ವಿಭಾಗದ ಅಶ್ರಯದಲ್ಲಿ ನಡೆದ `ಮಲಯಾಳ ಸಾಹಿತ್ಯ ಚರಿತ್ರೆ' ಯೋಜನೆಯಲ್ಲಿ ಅನುವಾದಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರ ಬೆಂಗಳೂರು ನಡೆಸಿದ `ಮಲಯಾಳಂ ಶ್ರೇಷ್ಠ ಬರಹಗಳ ಅನುವಾದ' ಯೋಜನೆಯಲ್ಲಿ ಭಾಗಿಯಾಗಿದ್ದಾರೆ. ಕೇರಳ ಸರಕಾರದ ಕನ್ನಡ ಪಠ್ಯಪುಸ್ತಕ ರಚನಾ ಮಂಡಳಿಯ ಸದಸ್ಯರಾಗಿ, ಕೇರಳ ಸರಕಾರದ ಶಾಲಾ ಪರೀಕ್ಷಾ ಮಂಡಳಿಯ ಸದಸ್ಯರಾಗಿ, ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮಂಡಳಿಯ ಸದಸ್ಯರಾಗಿ, ಕಣ್ಣೂರು ವಿ.ವಿ. ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ದುಡಿಯುತ್ತಿದ್ದಾರೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ವಿಷಯಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ವಿಶ್ವವಿದ್ಯಾಲಯ ಮಟ್ಟದ ಸಂಶೋಧನ ಪತ್ರಿಕೆಗಳಲ್ಲಿ ಹಲವಾರು ಸಂಶೋಧನ ಲೇಖನಗಳು ಪ್ರಕಟಗೊಂಡಿವೆ. ಹಳಗನ್ನಡ ಸಾಹಿತ್ಯ ಮತ್ತು ಪ್ರಾದೇಶಿಕ ಸಂಸ್ಕøತಿ ಅಧ್ಯಯನ ಇವರ ಆಸಕ್ತಿಯ ಕ್ಷೇತ್ರವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries