ಕಾಸರಗೋಡು: ಶಿಕ್ಷಣಕ್ಕಾಗಿ ನೃತ್ಯ `ತಕಜಣುತಾ' ಮಕ್ಕಳ ಮನಸ್ಸಿನಲ್ಲಿ ಭಾರತೀಯ ಸಂಸ್ಕøತಿ ಪ್ರಜ್ಞೆ ಮೂಡಿಸುವಂತೆ ಮಾಡುವುದಲ್ಲದೆ, ಆರೋಗ್ಯಕರವಾದ ಮನಸ್ಸನ್ನು ನಿರ್ಮಾಣ ಮಾಡುತ್ತದೆ. ಈ ನಿಟ್ಟಿನಲ್ಲಿ ಕಾಸರಗೋಡಿನ ಸಾಂಸ್ಕøತಿಕ, ಸಾಹಿತ್ಯಿಕ ಸಂಸ್ಥೆ ರಂಗಚಿನ್ನಾರಿಯು ಮಾಡುವಂತಹ ಕೆಲಸ ನಿಜಕ್ಕೂ ಅನುಕರಣೀಯ ಎಂದು ಬೇಕಲ ಸರಕಾರಿ ಫಿಶರೀಸ್ ಹೈಯರ್ ಸೆಕೆಂಡರಿ ಶಾಲೆಯ ಪಿಟಿಎ ಅಧ್ಯಕ್ಷ ಕೆ.ವಿ.ಶ್ರೀಧರ್ ಹೇಳಿದರು.
ಅವರು ರಂಗಚಿನ್ನಾರಿ ಹಾಗು ಮೇಘರಂಜನಾ ಚಂದ್ರಗಿರಿ ಸಹಯೋಗದಲ್ಲಿ ಏರ್ಪಡಿಸಿದ ತಕಜಣುತಾ ಕಾರ್ಯಕ್ರಮವನ್ನು ಫಿಶರೀಸ್ ಹೈಸ್ಕೂಲ್‍ನಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಕೀಬೋರ್ಡ್ ವಾದಕ, ಮೇಘರಂಜನಾ ನಿರ್ದೇಶಕ ಪುರುಷೋತ್ತಮ ಕೊಪ್ಪಲ್ ಅವರು ಚಂದ್ರಗಿರಿ, ಕಾಂಞಂಗಾಡ್ ಪರಿಸರದಲ್ಲಿ ಕನ್ನಡ ಪರ ಸಾಂಸ್ಕøತಿಕ ಚಟುವಟಿಕೆಗಳನ್ನು ನಿರಂತರವಾಗಿ ಮಾಡುವುದರ ಮುಖಾಂತರ ಕನ್ನಡ ಮಕ್ಕಳ ಮನಸ್ಸಿಗೆ ಆತ್ಮಸ್ಥೈರ್ಯ ತುಂಬ ಬೇಕಾಗಿದೆ ಎಂದರು. ಈ ನಿಟ್ಟಿನಲ್ಲಿ ರಂಗಚಿನ್ನಾರಿ ಕೈಗೊಳ್ಳುವ ಎಲ್ಲಾ ಅಭಿಯಾನದ ಜೊತೆ ಮೇಘರಂಜನಾ ಕೈಜೋಡಿಸುವುದಾಗಿ ತಿಳಿಸಿದರು.
ಅಭಿಯಾನದ ರೂವಾರಿ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕ ಮಾತನಾಡುತ್ತಾ ರಂಗಚಿನ್ನಾರಿ ಇದುವರೆಗೆ ಸಾವಿರದ ಮುನ್ನೂರು ವಿದ್ಯಾರ್ಥಿಗಳನ್ನು `ತಕಜಣುತಾ' ಮುಖಾಂತರ ತಲುಪಿದೆ. ಇನ್ನು ಮೂರುವರೆ ಸಾವಿರ ವಿದ್ಯಾರ್ಥಿಗಳನ್ನು ತಲುಪುವ ಗುರಿ ಬಗ್ಗೆ ತಿಳಿಸಿದರು.
ಅಧ್ಯಕ್ಷತೆಯನ್ನು ಅನಿತಾ ಟೀಚರ್ ವಹಿಸಿದ್ದರು. ರಾಜೇಶ್ವರಿ ಕುಮಾರಿ ಸ್ವಾಗತಿಸಿದರು. ಖ್ಕಾತ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ನೃತ್ಯ ಪ್ರಾತ್ಯಕ್ಷಿಕೆಯನ್ನು ನೀಡಿದರು. ಭವ್ಯಾ ಬಾಡೂರು ಸಹಕರಿಸಿದರು. ತುಳಸಿ ಹಾಗು ನಟಿ ಮಂಗಳ ಅವರು ಉಪಸ್ಥಿತರಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ತಕಜಣುತಾ ಕಾರ್ಯಕ್ರಮ ಪ್ರದರ್ಶಿಸಲಾಯಿತು.


