ಕಾಸರಗೋಡು: ಬಿರುಸಿನ ಗಾಳಿಮಳೆಗೆ ಶುಕ್ರವಾರ ಜಿಲ್ಲೆಯಲ್ಲಿ 10 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಹೊಸದುರ್ಗ ತಾಲೂಕಿನಲ್ಲಿ 4 ಮನೆಗಳು ಹಾನಿಗೀಡಾಗಿವೆ. ಅಜಾನೂರು ಗ್ರಾಮದಲ್ಲಿ 2, ಚಿತ್ತಾರಿ ಗ್ರಾಮದಲ್ಲಿ 2 ಮನೆಗಳಿಗೆ ಹಾನಿಯಾಗಿದೆ. ಕೊನ್ನಕ್ಕಾಡು ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಬುಡಕಳಚಿಕೊಂಡು ಉರುಳಿ ನಾಶವಾಗಿದೆ. ಮಂಜೇಶ್ವರ ತಾಲೂಕಿನಲ್ಲಿ ಮೂರು ಮನೆಗಳು ಭಾಗಶಃ ಹಾನಿಗೀಡಾಗಿವೆ. ಕೊಯಿಪ್ಪಾಡಿ, ಕಯ್ಯಾರು, ಎಡನಾಡು ಪ್ರದೇಶಗಳಲ್ಲಿ ಬಿರುಸಿನಗಳಿಮಳೆಗೆ ಮನೆಗಳಿಗೆ ಹಾನಿಯಾಗಿದ್ದು, ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ತಾಣಗಳಿಗೆ ತಲಪಿಸಲಾಗಿದೆ. ಕೊಯಿಪ್ಪಾಡಿ ಕರಾವಳಿಯಲ್ಲಿ ಕಡಲ್ಕರೆತದ ಪರಿಣಾಮ ವಿದ್ಯುತ್ ಕಂಭಗಳು ಅಪಾಯದ ಅಂಚಿನಲ್ಲಿವೆ.
ಕಾಸರಗೋಡು ತಾಲೂಕಿನ ಬೇಳದಲ್ಲಿ ಮನೆಯೊಂದರ ಮೇಲ್ಛಾವಣಿ ಮಳೆಯ ಪರಿಣಾಮಹಾನಿಗೊಂಡಿದೆ. ಮುಳಿಯಾರು ಪಾಣೂರಿನಲ್ಲಿ ಹೆಂಚಿನಮನೆಯೊಂದರ ಮೇಲ್ಪಾವಣಿಗೆ ಹಾನಿಯಾಗಿದೆ.
ಮುಳಿಯಾರಿನಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದ ಮರವೊಂದನ್ನು ಅಗ್ನಿಶಾಮಕದಳ ಆಗಮಿಸಿ ತುಂಡರಿಸಿ ತೆರವುಗೊಳಿಸಿದೆ. ಎಡನಿರಿನಲ್ಲಿ ಅಪಾಯ ಸೂಚಿಸುವಂತಿದ್ದ ಮರವೊಂದನ್ನು ಅಗ್ನಿಶಾಮಕದಳ ಆಗಮಿಸಿ ಕಡಿದು ತೆರವುಗೊಳಿಸಿದೆ. ಎಡನೀರಿನಲ್ಲಿ ಗುಡ್ಡದಿಂದ ಮಣ್ಣುಕುಸಿತದ ಭೀತಿಯಿದೆ ಎಂದು ಗ್ರಾಮಕಚೇರಿ ಅಧಿಕಾರಿಗಳು ವರದಿ ಮಾಡಿದ್ದಾರೆ.
ಕಯ್ಯೂರು , ಪೂಕೋಡ್ ಪ್ರದೇಶಗಳಲ್ಲಿ ನದಿ ಉಕ್ಕಿ ಹರಿದು ತಲೆದೋರಿದ ನೆರೆಹಾವಳಿಯ ಪರಿಣಾಮ 50 ಮಂದಿಯನ್ನು ಸುರಕ್ಷಿತ ತಾಣಗಳಿಗೆ ವರ್ಗಾಯಿಸಲಾಗಿದೆ. ಕ್ಲಾಯಿಕೋಡ್ ಗ್ರಾಮದಲ್ಲಿ ಮನೆಗಳು ಜಲಾವೃತವಾದ ಕಾರಣ 14 ಮಂದಿಯನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಕೊನನ್ಕ್ಕಾಡ್ ಮಂಜಿಚ್ಚಾಲ್ ಎಂಬಲ್ಲಿ ಜಲಾವೃತದ ಪರಿಣಾಮ ಪ್ರದಾನವಾಹಿನಿಯಿಂದ ಬೇರ್ಪಟ್ಟಿದ್ದ 4 ಕುಟುಂಬಗಳನ್ನು, ಅಶೋಕಚ್ಚಾಲ್ ಎಂಬಲ್ಲಿ ಇದೇ ರೀತಿ ಒಂದುಕುಟುಂಬವನ್ನು ರಕ್ಷಿಸಿ ಸುರಕ್ಷಿತ ತಾಣಗಳಿಗೆ ತಲಪಿಸಲಾಗಿದೆ.
ವೆಳ್ಳರಿಕುಂಡ್ ಕೋಡೋತ್ ಗ್ರಾಮದಲ್ಲಿ ಗುಡ್ಡದ ಮಣ್ಣು ಕುಸಿದು ಕಾಂಕ್ರೀಟು ಮನೆ ಹಾನಿಗೊಂಡಿದೆ. ಜಿಲ್ಲೆಯಲ್ಲಿ ಈ ವರೆಗೆ 19 ಮನೆಗಳು ಪೂರ್ಣರೂಪದಲ್ಲಿ, 261 ಮನೆಗಳು ಬಾಗಶಃ ಹಾನಿಗೊಂಡಿವೆ. ಕಳೆದ 24 ತಾಸುಗಳಲ್ಲಿ 5 ಮನೆಗಳು ಪೂರ್ಣರೂಪದಲ್ಲಿ, 39 ಮನೆಗಳು ಭಾಗಶಃ ಹಾನಿಗೀಡಾಗಿವೆ.
ಕೋರೆ ಇತ್ಯಾದಿ ನಿಲುಗಡೆ
ಬಿರುಸಿನ ಮಳೆಯ ಹಿನ್ನೆಲೆಯಲ್ಲಿ ಮೈನಿಂಗ್ ಆಂಡ್ ಜಿಯಾಲಜಿ ಡೈರೆಕ್ಟರ್ ಅವರ ಆದೇಶ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಕೆಂಗಲ್ಲು,ಕರ್ಗಲ್ಲು, ಕೋರೆಗಳ ಚಟುವಟಿಕೆ, ಮನೆ/ಕಟ್ಟಡ ನಿರ್ಮಾಣ ಸಂಬಮಧ ,ಮಣ್ಣು ತೆರವು ಚಟುವಟಿಕೆಗಳನ್ನು, ಎಲ್ಲ ರೀತಿಯ ಉತ್ಖನನ ಗಳನ್ನು ಮುಂದೆ ಸೂಚನೆ ನೀಡುವ ಅವಧಿಯ ವರೆಗೆ ನಿಲುಗಡೆ ಮಾಡಲಾಗಿದೆ ಎಂದು ಜಿಲ್ಲಾ ಜಿಯಾಲಜಿಸ್ಟ್ ತಿಳಿಸಿದರು.
ನೆರೆ ಸಂತ್ರಸ್ತರಿಗಾಗಿ ಸಾಮಾಗ್ರಿಗಳ ಸ್ವೀಕಾರ
ರಾಜ್ಯ ಯುವಜನ ಕಲ್ಯಾಣ ಮಂಡಳಿಯ ಕಾಸರಗೋಡು ಜಿಲ್ಲಾ ಯುವಜನಕೇಂದ್ರದಲ್ಲಿ ನೆರೆ ಹಾವಳಿಯಿಂದ ಕಂಗೆಟ್ಟ ಜನತೆಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಕಲೆಕ್ಷನ್ ಸೆಂಟರ್ ಒಂದನ್ನು ಆರಂಭಿಸಲಾಗುವುದು. ಬಟ್ಟೆ(ಹೊಸತು), ಇತರ ಅನಿವಾರ್ಯ ಸಾಮಾಗ್ರಿಗಳು ಇತ್ಯಾದಿಗಳನ್ನು ಇಲ್ಲಿ ಸ್ವೀಕರಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಸಂಕೀರ್ಣದಲ್ಲಿ ಇಂದು(ಆ.10) ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಸಾಮಾಗ್ರಿಗಳನ್ನು ಸ್ವೀಕರಿಸಲಾಗುವುದು. ಮಾಹಿತಿಗೆ ದೂರವಾಣಿ ಸಂಖ್ಯೆ: 9947603420, 9446660037.


