ಕುಂಬಳೆ: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಿಳಾ ಮಂಡಲ ಸಹಯೋಗದಲ್ಲಿ ಪ್ರತಿವರ್ಷ ಅಖಿಲ ಭಾರತ ಮಟ್ಟದಲ್ಲಿ ಹವ್ಯಕ ಮಹಿಳೆಯರಿಗಾಗಿ ಆಯೋಜಿಸಲಾಗುವ ಸಣ್ಣಕತಾ ಸ್ಪರ್ಧೆ ಈ ಬಾರಿಯ ಫಲಿತಾಂಶ ಪ್ರಕಟಿಸಲಾಗಿದ್ದು, ಪ್ರಥಮ ಬಹುಮಾನ ಜ್ಯೋತಿ ರವಿರಾಜ್ ವಿಟ್ಲ ಇವರ ಆರುಹೊಣೆ ಎಂಬ ಕತೆಗೆ ದೊರಕಿದೆ. ರವಿರಾಜ ಭಟ್ ಅವರ ಮಡದಿಯಾಗಿ,ಇಬ್ಬರು ಮಕ್ಕಳ ತಾಯಿಯಾದ ಇವರ ಹೆಸರು ಸರ್ವಮಂಗಳ ಎಂಬುದಾಗಿದ್ದು ಜ್ಯೋತಿರವಿರಾಜ್ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡು ಬರೆಯುವುದಲ್ಲದೆ; ಪುತ್ತೂರು ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಹಿಂದಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಇವರ ಹಲವು ಕಾರ್ಯಕ್ರಮಗಳು ಬಿತ್ತರಗೊಂಡಿದ್ದು, ಜನಪದೀಯ ಗುಂಪುಗಾಯನ ವಿಬಾಗದಲ್ಲಿ ಬಿ ಗ್ರೇಡ್ ಪಡೆದಿರುತ್ತಾರೆ. ಅಲ್ಲದೆ ವಿವಿಧ ಪತ್ರಿಕೆಗಳಿಗೆ ಕಥೆ,ಕವನ,ಅಡುಗೆ, ಮೊದಲಾದುವುಗಳನ್ನು ಬರೆಯುತ್ತಿದ್ದಾರೆ.
ರತ್ನಕುಮಾರಿ ಕಾಕುಂಜೆ ಇವರ ಸಿರಿ ಎಂಬ ಕತೆಗೆ ದ್ವಿತೀಯ ಬಹುಮಾನ ದೊರಕಿದೆ. ಕಟ್ಟಕತೆ ಎಂಬ ತನ್ನ ತವರಿನ ವಂಶಾವಳಿಯ ಕುರಿತು ಬರೆದಿರುವ ಇವರು ಇಳಿವಯಸ್ಸಿಗೆ ಸಾಹಿತ್ಯಕ್ಷೇತ್ರದಲ್ಲಿ ತೊಡಗಿಸಿಕೊಂಡು ಬರೆಯುತ್ತಿರುವುದು ವಿಶೇಷ.
ಶಿರಸಿಯ ಭವ್ಯಾ ಹಳೆಯೂರು ಇವರ ಬಯಲು ಸೀಮೆಯ ಸುಂದ್ರಿ ಕತೆ ಮೂರನೆ ಬಹುಮಾನ ಗೆದ್ದುಕೊಂಡಿದೆ. ಡಾ.ವಿನಾಯಕ ಭಟ್ ಅವರ ಪತ್ನಿಯಾದ ಇವರು ಗಂಡುಮಗುವಿನ ತಾಯಿ. ಕನ್ನಡ ಎಂ.ಎ. ಬಿ.ಎಡ್ ಪದವೀಧರೆಯಾದ ಇವರು ಶಿರಸಿಯ ಮಾರಿಕಾಂಬ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಮೊಗ್ಗಿನಮನಸ್ಸು ಎಂಬ ವ್ಯಕ್ತಿತ್ವ ವಿಕಸನದ ಬಗ್ಗೆ ಹಾಗೂ ಮತ್ತೆ ನೆನಪಾಗುತ್ತಾಳೆ ರಾಧೆ ಎಂಬ ಕವನಸಂಕಲನವನ್ನೂ ಪ್ರಕಟಗೊಳಿಸಿದ್ದಾರೆ.
ಕಥಾ ಸ್ಪರ್ಧೆಯ ತೀರ್ಪುಗಾರರಾಗಿ ಸಾಹಿತಿ, ನಿವೃತ್ತ ಅಧ್ಯಾಪಕ, ಶಿಕ್ಷಣತಜ್ಞ ವಿ.ಬಿ.ಕುಳಮರ್ವ, ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ ವಿಭಾಗ ಮುಖ್ಯಸ್ಥ ಡಾ. ಹರಿಕೃಷ್ಣ ಭರಣ್ಯ ಹಾಗೂ ಮಂಜೇಶ್ವರ ಎಸ್.ಎ.ಟಿ ಹೈಸ್ಕೂಲಿನ ಶಿಕ್ಷಕ ನಾರಾಯಣ ಹೆಗ್ಡೆ ಖರ್ವಾ,ಹೊನ್ನಾವರ ಇವರುಗಳು ಸಹಕರಿಸಿರುತ್ತಾರೆ.




