ಇಂದಿನ ಮೂರು ಟಿಪ್ಪಣಿಗಳು:
೧. `ತನ್ನ’ತನವ ತೊರೆದರೇನು ಸೊಗಸಿದೆ?
ತಾವು, ತಮ್ಮನ್ನು, ತಮ್ಮಿಂದ, ತಮಗೆ, ತಮ್ಮ ದೆಸೆಯಿಂದ, ತಮ್ಮ, ತಮ್ಮಲ್ಲಿ... ಇವುಗಳನ್ನು ಮಧ್ಯಮಪುರುಷ ಸರ್ವನಾಮ (ನೀನು, ನೀವು)ಗಳ ಬದಲಿಗೆ ಗೌರವಪೂರ್ವಕವಾಗಿ ಬಳಸುತ್ತೇವೆ. ಮಾತನಾಡುತ್ತಿರುವುದು ಒಬ್ಬ ವ್ಯಕ್ತಿಯ ಬಳಿಯೇ ಆದರೂ ಗೌರವಭಾವದಿಂದ ಬಹುವಚನ ಬಳಸುತ್ತೇವೆ. ಶಿಷ್ಟ ಸಂಭಾಷಣೆ ಮತ್ತು ಬರವಣಿಗೆಯಲ್ಲಿ ಇದು ಒಳ್ಳೆಯ ಸಂಪ್ರದಾಯ. ಯಾರು ಮಾತನಾಡುತ್ತಿದ್ದಾರೋ, ಯಾರನ್ನುದ್ದೇಶಿಸಿಮಾತನಾಡುತ್ತಿದ್ದಾರೋ- ಅವರಿಬ್ಬರಿಗೂ, ಮತ್ತು ಕೇಳುತ್ತಿರುವ ಮೂರನೆಯವರಿಗೂ ಗೌರವದ ಭಾವನೆ ತರಿಸುತ್ತದೆ. ಅಷ್ಟೊಂದು ಗೌರವ ತನಗೆ ಬೇಡ ಎನ್ನುವವರಿಗೆ ಮುಜುಗರ ಆಗುವುದೂ ಇದೆಯೆನ್ನಿ.
ಇವೇ ಪದಗಳನ್ನು ಇನ್ನೊಂದು ಸಂದರ್ಭದಲ್ಲಿಯೂ ಬಳಸುತ್ತೇವೆ. ಆಗ ಇವುಗಳನ್ನು ಆತ್ಮಾರ್ಥಕ ಸರ್ವನಾಮಗಳೆಂದು ಹೇಳುವುದು ವಾಡಿಕೆ. ಉದಾಹರಣೆಗೆ-
‘ತಮ್ಮಿಂದ ತೊಂದರೆಯಾಗಿದೆ ಎಂದರೆ ಚಿತ್ರರಂಗ ಬಿಡುತ್ತೇನೆಂದ ಶಿವರಾಜಕುಮಾರ್’
‘ತಮಗಾಗಿ ದೇಗುಲ ನಿರ್ಮಿಸಿದ ಸುದ್ದಿಗೆ ಮೋದಿ ದಿಗಿಲು.’
‘ತಮಗೆ ಹೆಣ್ಣು ಮಗುವಾಗಲೆಂದು ಬಯಸಿದ ಚಿತ್ರನಟ ಯಶ್’
‘ತಮ್ಮ ಹಳೆ ಖದರ್ ಕಳೆದುಕೊಂಡಿರುವ ಧೋನಿ ’
‘ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ರಾಜಕೀಯ ವೈರಿಗಳನ್ನು ಕೊಂದಿರಬಹುದು’
‘ತಮ್ಮಲ್ಲಿ ಕಪ್ಪು ಹಣ ಚಿಕ್ಕಾಸೂ ಇಲ್ಲ ಎಂದ ರಾಜಕಾರಣಿ’
ಇಲ್ಲೆಲ್ಲ ಬಹುವಚನ ರೂಪ ಅಗತ್ಯವಿಲ್ಲ. ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಕುರಿತಾಗಿ ಇರುವುದರಿಂದ ಈ ವಾಕ್ಯಗಳಲ್ಲಿ ಅನುಕ್ರಮವಾಗಿ ತನ್ನಿಂದ, ತನಗಾಗಿ, ತನಗೆ, ತನ್ನ, ತನ್ನ, ತನ್ನಲ್ಲಿ ಎಂದು ಏಕವಚನ ರೂಪ ಬಳಸುವುದೇಒಳ್ಳೆಯದು. ‘ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ’ ಎಂದ ಬಸವಣ್ಣನನ್ನು, ‘ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು’ ಎಂದ ಸರ್ವಜ್ಞನನ್ನು ನೆನಪಿಸಿಕೊಳ್ಳುತ್ತ ‘ತನ್ನ’ತನವ ಉಳಿಸಿಕೊಳ್ಳುವುದು ಒಳ್ಳೆಯದು.
===
೨. ಮೊರೆ ‘ಹೋಗು’ವುದು ಅಲ್ಲ, ಮೊರೆ ‘ಹೊಗು’ವುದು!
‘ಕೊಲ್ಲೂರಮ್ಮನ ಮೊರೆ ಹೋದ ಡಿಕೆಶಿ ಕುಟುಂಬ’
‘ಜ್ಯೋತಿಷಿ ಮೊರೆ ಹೋಗಿ ಕುರಿಯಾದ ನಟ ನಿರ್ದೇಶಕ’
‘ಪದ್ಮಾವತಿ ವಿವಾದ : ಸೆನ್ಸಾರ್ ಮಂಡಳಿ ಮೊರೆ ಹೋಗುವಂತೆ ಕೋರ್ಟ್ ಸೂಚನೆ’
‘ಒತ್ತಡದ ಮನಸ್ಸುಗಳು ಸಂಗೀತದ ಮೊರೆ ಹೋಗುವುದರಿಂದ ಬದುಕಿನ ಹುಮ್ಮಸ್ಸು ಚಿಗುರೊಡೆಯುತ್ತದೆ’
‘ಅಣಕಕ್ಕೆ ಪ್ರಾಸಗಳ ಮೊರೆ ಹೋದ ರಾಹುಲ್ ಗಾಂಧಿ!’
ಮೊರೆ ಅಂದರೆ ಪ್ರಾರ್ಥನೆ, ದೂರು, ಅಹವಾಲು ಮುಂತಾದುವುಗಳಂತೆಯೇ, ಆಸರೆ, ಆಶ್ರಯ ಎಂಬ ಅರ್ಥವೂ ಇದೆ. ‘ಹೊಗು’ (ಪೊಗು) ಅಂದರೆ ಒಳಸೇರು, ಪ್ರವೇಶಿಸು, ಸ್ಪರ್ಶಿಸು ಎಂಬ ಅರ್ಥ. ‘ಮೊರೆ ಹೊಗುವುದು’ ಎಂದರೆ ಆಸರೆಯ ಒಳಗೆ ಸೇರುವುದು. ಮೇಲಿನ ಎಲ್ಲ ವಾಕ್ಯಗಳಲ್ಲೂ ‘ಹೊಗು’ ಬದಲಿಗೆ ‘ಹೋಗು’ ಕ್ರಿಯಾಪದದ ರೂಪಗಳನ್ನು ತಪ್ಪಾಗಿ ಬಳಸಿರುವುದರಿಂದ ವಿರೋಧಾರ್ಥ ಬಂದಿದೆ! ಉದಾಹರಣೆಗೆ ಮೊದಲನೆಯದು:ಕೊಲ್ಲೂರಮ್ಮನ ಆಶ್ರಯದೊಳಕ್ಕೆ ಹೊಕ್ಕ ಡಿಕೆಶಿ ಕುಟುಂಬ ಎಂದು ಧ್ವನಿಸಬೇಕಾದದ್ದು ‘ಡಿಕೆಶಿ ಕುಟುಂಬಕ್ಕೆ ಕೊಲ್ಲೂರಮ್ಮನ ಆಶ್ರಯ ಇಲ್ಲಿಯತನಕ ಇದ್ದದ್ದು ಈಗ ಅದೂ ಹೋಯ್ತು’ ಎಂಬ ಅರ್ಥ ಕೊಡುತ್ತಿದೆ!
ಹೋಗು ಮತ್ತು ಹೊಗು ಬಗ್ಗೆ ಅರ್ಥವ್ಯತ್ಯಾಸ ಇನ್ನೂ ಮನವರಿಕೆ ಆಗಿಲ್ಲವಾದರೆ ಪುಣ್ಯಕೋಟಿಯ ಪದ್ಯದ ಸಾಲುಗಳನ್ನು ನೆನಪಿಸಿಕೊಳ್ಳಬಹುದು: ‘ತಬ್ಬಲಿಯು ನೀನಾದೆ ಮಗನೆ| ಹೆಬ್ಬುಲಿಯ ಬಾಯನ್ನು ಹೊಗುವೆನು|ಇಬ್ಬರಾ ಋಣ ತೀರಿತೆಂದು| ತಬ್ಬಿಕೊಂಡಿತು ಕಂದನ’. ಇದರಲ್ಲಿ ಹೆಬ್ಬುಲಿಯ ಬಾಯಿಯನ್ನು ಪ್ರವೇಶಿಸುವೆನು ಎಂದು ಹೇಳುವುದಕ್ಕೆ ‘ಹೊಗುವೆನು’ ಎನ್ನುತ್ತಿದೆ ಪುಣ್ಯಕೋಟಿ.
ಹಸುವಿಗೆ ಶುದ್ಧ ಭಾಷೆ ಇದೆ, ಮನುಷ್ಯರಿಗೆ ಇಲ್ಲ. ಛೇ!
====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:
ಅ) ಉಚ್ಚಾರ ಸರಿ. ಉಚ್ಛಾರ ತಪ್ಪು. ಉಚ್ಚರಿಸು ಕ್ರಿಯಾಪದ ರೂಪ, ಅದನ್ನು ನಾಮಪದವಾಗಿ ಬರೆಯುವುದಾದರೆ ಉಚ್ಚರಣೆ (the act of pronunciation) ಎಂದು ಬರೆಯಬಹುದು. ಉಚ್ಚಾರ (the pronunciation itself) ಎಂದು ಸಹ ಬರೆಯಬಹುದು. ಆದರೆ ‘ಉಚ್ಚಾರಣೆ’ ಎಂದು ಬರೆಯುವುದು ಒಳ್ಳೆಯದಲ್ಲ.
ಆ) ಉಚ್ಚಾಟನೆ ಸರಿ. ಕನ್ನಡ ಪದದಂತೆ ತೋರುವ ಇದು ಸಂಸ್ಕೃತದ ‘ಉಚ್ಚಾಟನ’ದಿಂದ ಬಂದದ್ದು. ಅಲ್ಲಿಯೂ ಅಲ್ಪಪ್ರಾಣ ವ್ಯಂಜನಗಳಿಂದಾದ ಸಂಯುಕ್ತಾಕ್ಷರ ಈ ಪದದಲ್ಲಿರುವುದು. ಹಾಗಾಗಿ ಉಚ್ಛಾಟನೆ, ಉಛ್ಛಾಟನೆಅಂತೆಲ್ಲ ಬರೆದರೆ ತಪ್ಪು.
ಇ) ಸಂದಿಗ್ಧ ಸರಿ. ಇಕ್ಕಟ್ಟಿನ, ಕ್ಲಿಷ್ಟಕರ ಎಂಬ ಅರ್ಥ. ಸಂಧಿಗ್ದ, ಸಂಧಿಗ್ಧ, ಸಂದಿಗ್ದ ಇವೆಲ್ಲ ತಪ್ಪು.
ಈ) ಜನಾರ್ದನ ಸರಿ. ಜನಾರ್ಧನ ತಪ್ಪು.
ಉ) ನಡೆ ಸರಿ. (ನಡಗೆ, ನಡವಳಿಕೆ, ನಡತೆ ಮುಂತಾದ ಅರ್ಥಗಳಿವೆ). ನೆಡೆ ತಪ್ಪು.
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.



