HEALTH TIPS

ಸಮರಸ ಈ ಹೊತ್ತಿಗೆ-ಹೊಸ ಹೊತ್ತಗೆ-ಪುಸ್ತಕ-ಸಂಚಿಕೆ-31-ಸುಪ್ತ ಸಿಂಚನ-ಬರಹ:ಚೇತನಾ ಕುಂಬಳೆ


     ಪುಸ್ತಕ : ಸುಪ್ತ ಸಿಂಚನ
      ಲೇಖಕರು: ಪರಿಣಿತ ರವಿ
       ವಿಮರ್ಶಾ ಬರಹ: ಚೇತನಾ ಕುಂಬಳೆ
     ಕವಿಯತ್ರಿ ಪರಿಣಿತ ರವಿ ಅವರು ಕವಿತೆ, ಕತೆ, ಹನಿಗವನಗಳ ಮೂಲಕ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡವರು. ಬಹುಮುಖ ಪ್ರತಿಭಾವಂತರಾದ ಇವರು ಆಂಗ್ಲ ಭಾಷಾ ಶಿಕ್ಷಕಿಯಾಗಿದ್ದರೂ ಕನ್ನಡ ಭಾಷೆಯ ಬಗೆಗೆ ಅಪಾರ ಪ್ರೀತಿ ಅಭಿಮಾನ ಹೊಂದಿದವರು. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ತೋರಿದವರು. ಬರವಣಿಗೆಗೆ ತೊಡಗಿಕೊಂಡವರು. ಮೂಲತಃ ಪಾಣೆಮಂಗಳೂರಿನ ನಂದಾವರದವರಾದ ಇವರು ಈಗ ಉದ್ಯೋಗ ನಿಮಿತ್ತ ಎರ್ನಾಕುಳಂನಲ್ಲಿ ವಾಸವಾಗಿದ್ದಾರೆ.
      ಇತ್ತೀಚೆಗಷ್ಟೇ ಸಿಂಪರ ಪ್ರಕಾಶನದಿಂದ ಪ್ರಕಟಗೊಂಡ 'ಸುಪ್ತ ಸಿಂಚನ' ಕವನ ಸಂಕಲನದಲ್ಲಿ ಒಟ್ಟು 50 ಕವಿತೆಗಳಿವೆ. ಈ ಸಂಕಲನಕ್ಕೆ ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿಯಾದ ಡಾ. ಮಹೇಶ್ವರಿ ಯು. ಅವರು ಮುನ್ನುಡಿ ಬರೆದಿದ್ದಾರೆ. "ಕವಿ ಜೀವದ ತುಡಿತ ಒಳಗಿದ್ದರೆ ಅದನ್ನು ಅದುಮಿಟ್ಟುಕೊಳ್ಳಲಾಗದು. ಪಂಜರದಲ್ಲಿಟ್ಟ ಹಕ್ಕಿಗೆ ಹಾರುವುದು ಮರೆತಂತೆ ಅನಿಸಿದರೂ ಹಾರುವುದು ಅದರ ಜೀವ ಗುಣ. ಆ ಒಳಗಿನ ತುಡಿತ ಮರೆಯಾಗಲಾರದು. ಹಾಗೆಯೇ ಹಾಡುವುದು, ತನ್ನೊಳಗಿನ ಭಾವದ್ರವ್ಯಕ್ಕೆ ಮಾತಿನ ಆಕೃತಿಯನ್ನು ನಿರ್ಮಿಸುವುದು ಕವಿಯ ಜೀವಗುಣ. ಕವಿತೆಗೆ ವಸ್ತು ಹೊರಗಿನದೇ ಇರಬಹುದು, ಅಂತರಂಗದ ಒಳಗಿನದೂ ಇರಬಹುದು. ಏನಿದ್ದರೂ ಅದರ ಜೀವ ದ್ರವ್ಯ ಕವಿಯ ಒಡಲೊಳಗೆ ಕುದಿದು ಪಾಕವಾಗಬೇಕು. ಆ ಪಾಕದ ಹದ ಹಾಳಿತ ಕವಿತೆಯ ಆಕೃತಿಯಲ್ಲಿ ಭಾವ ಭಾಷೆಯ ಬಂಧದಲ್ಲಿ ಗೋಚರಿಸುವಂಥದ್ದು ಎಂದು ಕವಿತೆಯ ಬಗ್ಗೆ ಡಾ. ಮಹೇಶ್ವರಿ ಹೇಳುತ್ತಾರೆ. ಈ ಕವನ ಸಂಕಲನಕ್ಕೆ ಹಿರಿಯ ಕವಿ, ಪತ್ರಕರ್ತರಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಬೆನ್ನುಡಿ ಬರೆದು ಪ್ರೋತ್ಸಾಹ ನೀಡಿದ್ದಾರೆ. ಆಕರ್ಷಕವಾದ ಮುಖಪುಟವನ್ನು ರಂಗಕರ್ಮಿ ಹಾಗೂ ಚಿತ್ರಕಲಾ ಶಿಕ್ಷಕ ಸದಾಶಿವ ಶಿವಗಿರಿ ಕಲ್ಲಡ್ಕ ಅವರು ಮನೋಹರವಾಗಿ ರಚಿಸಿದ್ದಾರೆ.
      ಇಲ್ಲಿನ ಹಲವು ಕವಿತೆಗಳಿಗೆ ಅದರ ಆಶಯವನ್ನು ವ್ಯಕ್ತಪಡಿಸುವ ಚಿತ್ರಗಳನ್ನು ಅಳವಡಿಸಲಾಗಿದೆ.  'ಹೊಸ ಬೆಳಕು' ಕವಿತೆಯ ಮೂಲಕ ಇಲ್ಲಿನ ಕವಿತೆಗಳು ಪ್ರಾರಂಭವಾಗುತ್ತವೆ. ಬೇರೆ ಊರಿಗೆ ಹೋಗಿ ಅನ್ಯ ಭಾಷಿಗರ ನಡುವೆ ಹೊಸ ಬದುಕು ಕಟ್ಟಿಕೊಳ್ಳವ ನಡುವೆ ಹಾರಲು ಮರೆತ ಪಂಜರದ ಹಕ್ಕಿ ತಾನಾಗಿದ್ದೆ ಎಂದೂ, ಜೊತೆಗಿದ್ದವರು ಸಹಕಾರ ನೀಡಿದಾಗ ತನ್ನೊಳಗಿದ್ದ ಸುಪ್ತ ಭಾವಗಳು ಜೀವ ಪಡೆದ ಸನ್ನಿವೇಶವನ್ನು ಹೇಳಿಕೊಳ್ಳುತ್ತಾರೆ. 'ಜನನಿ' ಕವಿತೆಯಲ್ಲಿ ಮಕ್ಕಳ ಒಳಿತನ್ನು ಬಯಸುವ ತಾಯಿ, ತ್ಯಾಗಮಯಿ, ಸಹನಾಮಯಿ, ಕ್ಷಮಯಾ ಧರಿತ್ರಿ, ಮಮತೆಯ ಸಾಕಾರಮೂರ್ತಿ ಎಂದೂ ಹೊಗಳುತ್ತಾರೆ.
     'ಅಡಿಪಾಯ' ಕವಿತೆಯಲ್ಲಿ ಸಕ್ಕರೆಯ ಮಾತಿಗೆ ಮರುಳಾಗದೆ, ಹೊಗಳುಭಟ್ಟರನ್ನು ದೂರವಿರಿಸಬೇಕೆಂದೂ, ಮಾನವೀಯತೆಯನ್ನು ಮರೆಯದೆ, ಸಹಜೀವಿಗಳಲ್ಲಿ ಪ್ರೀತಿ, ಮಮತೆ ತೋರಬೇಕೆಂದೂ, ಗುರು ಹಿರಿಯರನ್ನು ಗೌರವಿಸಬೇಕೆಂದು ಬದುಕಿನ ಆದರ್ಶಗಳನ್ನು ಹೇಳುತ್ತಾರೆ. 'ಅರ್ಥವಾಗದೇ' ಕವನದಲ್ಲಿ, ಜೀವನ ಎನ್ನುವುದು ನೀರ ಮೇಲಿನ ಗುಳ್ಳೆಯಂತೆ ಹಾಗೆಯೇ ಮನುಷ್ಯನ ಜೀವವೂ ನಶ್ವರವಾದದ್ದು ಎಂಬ ಕಟು ವಾಸ್ತವದ ಅರಿವು ಮೂಡಿಸುತ್ತಾರೆ. 'ಅತಂತ್ರ' ಹಾಗೂ 'ಆರ್ತನಾದ'  ಕವನಗಳಲ್ಲಿ  ಕರ್ನಾಟಕದಿಂದ ಬೇರ್ಪಟ್ಟ ಕಾಸರಗೋಡಿನ ಇಂದಿನ ದುಸ್ಥಿತಿಯನ್ನೂ ಕನ್ನಡದ ಮೇಲಿನ ಪ್ರೀತಿ, ಕನ್ನಡಿಗರ ಅಳಲನ್ನು ಮನಕಲಕುವಂತೆ ಚಿತ್ರಿಸಿದ್ದಾರೆ. 'ಹುಡುಕಾಟ' ಕವನದಲ್ಲಿ ಈ ಬಣ್ಣದ ಜಗದಲ್ಲಿ, ಮಾಸಿ ಹೋಗದ ಬಣ್ಣವನ್ನು, ಮಾಯದ ಜಗದಲ್ಲಿ ನೈಜತೆಯ ನಗುಮೊಗವನ್ನು , ನೋವಿಗೆ ಸ್ಪಂದಿಸುವವರನ್ನು ಜಗ ಬೆಳಗುವವರನ್ನು ಹುಡುಕುತ್ತಾರೆ. 'ಹುಲು ಮಾನವ ಕವಿತೆಯಲ್ಲಿ, ಭೋರ್ಗರೆವ ಸಮುದ್ರಕ್ಕೂ, ಬೆಳಕ ನೀಡುವ ಸೂರ್ಯನಿಗೂ ತಂಪು ನೀಡುವ ಚಂದ್ರನಿಗೂ ಭೂಮಿಗೂ ಹೀಗೆ ಎಲ್ಲಾ ಚರಾಚರಗಳಿಗೂ ಕಷ್ಟಗಳು ತಪ್ಪಿಲ್ಲ ಹಾಗಿರುವಾಗ ಪ್ರಕೃತಿಯ ಮುಂದೆ ಮನುಷ್ಯ ಯಾವ ಲೆಕ್ಕ ಅವನಿಗೂ ಕಷ್ಟಗಳು ಬಂದೇ ಬರುತ್ತವೆ.ಎಂಬುದನ್ನು ಸಾದೋಹರಣವಾಗಿ ವಿವರಿಸುವರು. 'ಆ ಅರಳದ ಹೂಗಳು' ಕವಿತೆಯಲ್ಲಿ ಕಾಮದ ದಾಹಕ್ಕೋ, ಹೆತ್ತವರ ಒತ್ತಡಕ್ಕೋ ಸಮಾಜದ ಅಪೇಕ್ಷೆಗೋ  ಅರಳುವ ಮೊದಲೇ ಅಥವಾ ಬದುಕು ಕಟ್ಟಿಕೊಳ್ಳುವ ಮೊದಲೇ ಹೆಣ್ಣು ಮಕ್ಕಳ ಜೀವ ಬಾಡಿ ಹೋಗುವುದಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ.
'ಅವನಾಟ' ಕವಿತೆಯಲ್ಲಿ ಭಗವಂತನೇ ಸೂತ್ರಧಾರಿ, ನಾವು ಅವನಾಡಿಸುವ ಬೊಂಬೆಗಳಷ್ಟೇ ಎಂದು ಬದುಕಿನ ವಿಚಿತ್ರಗಳನ್ಧು ತೆರೆದಿಡುತ್ತಾರೆ.   'ಅಳಿಯದಂತೆ ಮಾಡಿರೋ' ಕವಿತೆಯಲ್ಲಿ ನೀತಿ ಪಾಠ ಕಲಿಸಿ ಬದುಕು ಭದ್ರಗೊಳಿಸುವ ಅಜ್ಜಿ, ಹೆತ್ತು ಹೊತ್ತು ಪೊರೆಯುವ ಅಮ್ಮ ಅರಿವಿನ ದೀಪ ಬೆಳಗುವ ಗುರು ಹೆಣ್ಣು ಎನ್ನುತ್ತಾ ಮಗು ಹೆಣ್ಣು ಎಂದೊಡನೆ ಮೂಗು ಮುರಿವ ಮೂಢರಿಗೆ ಹೆಣ್ಣಿನ ಮಹತ್ವವನ್ನು, ಬದುಕಿನಲ್ಲಿ ಆಕೆಯ ಪಾತ್ರವನ್ನು ತಿಳಿಸಿಕೊಡುತ್ತಾರೆ. 'ಕಂಡಿಹೆನು' ಕವಿತೆಯಲ್ಲಿ, ಒಬ್ಬ ಭಕ್ತೆ ಮತ್ತು ಭಗವಂತನ ನಡುವಿನ ಸಂಬಂಧವನ್ನು, ಅವರ ನಡುವಿರುವ  ಸಲಿಗೆಯನ್ನು ಕಾಣಬಹುದು. ಒಳ್ಳೆಯವರಿಗೆ ಒಳಿತಾಗುತ್ತದೆ ಕೆಡುಕರಿಗೆ ಸೋಲಾಗುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳನ್ನು ನೀಡುತ್ತಾರೆ. ಕೊನೆಗೆ
"ಕೃಷ್ಣ ನಿನ್ನಲ್ಲಿ ನಾನೇನು ಕೇಳಲಾರೆ
ನಿನಗೇನು ಬೇಕೋ ಅದನ್ನೇ ಕೊಡು
ಧನ್ಯತೆಯಿಂದಲೇ ಅದನ್ನು ಸ್ವೀಕರಿಸುತ್ತೇನೆ"
ಎನ್ನುವಲ್ಲಿ  ವಿರಕ್ತಿ ಭಾವವೊಂದು ಮೂಡಿದೆ. 'ಮಾನವೀಯತೆ ಇನ್ನೂ ಉಸಿರಾಡುತ್ತಿದೆ' ಹಾಗೂ 'ನೋಡಿದೆಯಾ' ಕವಿತೆಯಲ್ಲಿ ಕೇರಳದಲ್ಲಿ ನಡೆದ ಜಲಪ್ರಳಯದ ಚಿತ್ರಣದಲ್ಲಿ ಯಾರೂ, ಯಾವುದೂ ಶಾಶ್ವತವಲ್ಲ ಎಂಬುದನ್ನೂ, ಅಲ್ಲಿ ಕಂಡು ಬಂದ ಮನುಷ್ಯರಲ್ಲಿ ಹುದುಗಿರುವ ಮಾನವೀಯತೆಯ ಕುರಿತು ಹೇಳುತ್ತಾರೆ.
"ಇರಲಿ ಆಶಾಭಾವ
ಮೆಟ್ಟಿ ನಿಲ್ಲು ಎಲ್ಲವ" ಎನ್ನುವಲ್ಲಿ ಲೇಖಕಿಯೊಳಗಿನ ಆತ್ಮಸ್ಥೈರ್ಯವನ್ನು ಗಮನಿಸಬಹುದು. 'ರಹಸ್ಯ' ಕವಿತೆಯಲ್ಲಿ, ಸಾವು ಎಂಬುದು ಬದುಕಿನ ರಹಸ್ಯ. ಅದಕ್ಕೆ ಮೇಲು-ಕೀಳು, ಬಡವ - ಶ್ರೀಮಂತ ಎಂಬ ಭೇದಭಾವವಿಲ್ಲ, ಅದರ ಕಣ್ಣಿಗೆ ಎಲ್ಲರೂ ಸಮಾನರೆಂಬ ಕಹಿ ಸತ್ಯದ ದರ್ಶನ ಮಾಡಿಸುತ್ತದೆ. ಈ ಸಂಕಲನದ ಕೊನೆಯ ಕವಿತೆ 'ಸುಪ್ತ ಸಿಂಚನ' ಲೇಖಕಿಯ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ.
       ಒಟ್ಟಿನಲ್ಲಿ ಇಲ್ಲಿನ ಕವಿತೆಗಳಲ್ಲಿ, ಬದುಕಿನ ಅನುಭವಗಳಿಂದ ಅರಿತ ಸತ್ಯಾಸತ್ಯತೆಗಳಿವೆ. ಜೀವನದ ಆದರ್ಶಗಳಿವೆ, ಒಳಿತು-ಕೆಡುಕುಗಳ ಅವಲೋಕನವಿದೆ, ಭಾಷೆಯ,ನಾಡಿನ ಬಗೆಗೆ ಪ್ರೀತಿ ಅಭಿಮಾನವಿದೆ, ಯೋಧರಿಗೆ ಅರ್ಪಿಸಿದ ಅಕ್ಷರದ ನಮನವಿದೆ. ಇನಿಯನ ಬಗೆಗಿನ ಒಲವಿದೆ,  ಮನುಷ್ಯ- ಪ್ರಕೃತಿಯ ನಡುವಿನ ಅನುಸಂಧಾನವಿದೆ. ಇಲ್ಲಿನ ಕೆಲವು ಕವಿತೆಗಳಲ್ಲಿ ಸ್ತ್ರೀ ಸಂವೇದನೆ ಇರುವುದನ್ನು ಗಮನಿಸಬಹುದು.  ಸಂಬಂಧಗಳ ನಡುವೆ ಒಂದು ಆತ್ಮೀಯತೆಯಿದೆ.   ಇಲ್ಲಿನ ಹಲವು ಕವಿತೆಗಳೂ ಸಮಾಜಕ್ಕೊಂದು ಸಂದೇಶವನ್ನು ನೀಡುತ್ತವೆ. ಹೀಗೆ ಅವರ ಅಂತರಾಳದ ಭಾವಗಳು ಕವಿತೆಗಳಾಗಿ ಹೊರಹೊಮ್ಮಿ ಒಂದಷ್ಟು ವಿಷಯಗಳು ಚಿಂತನೆಗೆ ಒರೆ ಹಚ್ಚಲು ಸಹಕಾರಿಯಾಗಿವೆ.

                                              ವಿಮರ್ಶಾ ಬರಹ:ಚೇತನಾ ಕುಂಬ್ಳೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries