ಇಂದಿನ ಮೂರು ಟಿಪ್ಪಣಿಗಳು
೧. ಕುಶಾಗ್ರಮತಿ ಅಂದರೆ ಯಾರು?
ಕುಶ ಎಂಬ ಪದಕ್ಕೆ ಸಂಸ್ಕೃತದಲ್ಲಿ ದರ್ಭೆಹುಲ್ಲು ಎಂಬ ಅರ್ಥ. ಶ್ರೀರಾಮಚಂದ್ರನ ಅವಳಿಮಕ್ಕಳಲ್ಲಿ ಒಬ್ಬನ ಹೆಸರು ಕುಶ ಎಂದು ಇರುವುದಕ್ಕೂ ದರ್ಭೆಯೇ ಕಾರಣ. ದೋಷ ಪರಿಹಾರಕ್ಕಾಗಿ ಸೀತೆಯ ಗರ್ಭವನ್ನು ಕುಶ ( = ದರ್ಭೆ) ಮತ್ತು ಲವ (= ಗೋಪುಚ್ಛ ಅಥವಾ ಹಸುವಿನ ಬಾಲದ ಕೂದಲು)ಗಳಿಂದ ಸವರಲಾಗಿತ್ತಂತೆ. ಗರ್ಭದಿಂದ ಹುಟ್ಟಿದ ಮಕ್ಕಳಿಗೆ ಕುಶ ಮತ್ತು ಲವ ಎಂದು ಹೆಸರಾಯಿತು.
ಕುಶ ಎಂಬ ಮೂಲ ಪದದಿಂದ ರೂಪುಗೊಂಡ ಅನೇಕ ಪದಗಳು ಸಂಸ್ಕೃತದಲ್ಲಿವೆ. ಉದಾ: ಕುಶಾಕ್ಷ = ದರ್ಭೆಯಂತೆ ತೀಕ್ಷ್ಣವಾದ ದೃಷ್ಟಿಯುಳ್ಳ ವಾನರ. ಕುಶಾಸನ = ದರ್ಭೆಯಿಂದ ಮಾಡಿದ ಚಾಪೆಯಂಥ ಆಸನ. ಕುಶಿನ್ = ದರ್ಭೆ ಹಿಡಿದಿರುವವನು, ವಾಲ್ಮೀಕಿ ಮಹರ್ಷಿ. ಕುಶೋದಕ = ದಾನ ಮಾಡುವಾಗ ದರ್ಭೆಯೊಡನೆ ಬಿಡುವ ನೀರು. ಕುಶಿ = ಕಾಗೆ.
ಈ ಪದಗಳು ಹೆಚ್ಚಾಗಿ ಸಂಸ್ಕೃತದಲ್ಲಷ್ಟೇ ಬಳಕೆಯಾಗುತ್ತವೆ. ಆದರೆ ಒಂದು ಪದ, ಕನ್ನಡ ಬರವಣಿಗೆಯಲ್ಲೂ ವ್ಯಾಪಕವಾಗಿ ಬಳಕೆಯಾಗುತ್ತದೆ, ಅದೇ ‘ಕುಶಾಗ್ರಮತಿ’
ಕುಶಾಗ್ರ ಅಂದರೆ ಕುಶದ ಅಗ್ರ, ದರ್ಭೆಯ ತುದಿ; ಸೂಜಿಮೊನೆಯಂತೆ ಚೂಪಾದದ್ದು ಮತ್ತು ಹರಿತವಾದದ್ದು. ತೀಕ್ಷ್ಣವಾದದ್ದು ಎಂಬ ಅರ್ಥವೂ ಇದೆ. ಆದ್ದರಿಂದ ಕುಶಾಗ್ರಮತಿ ಅಂದರೆ ತೀಕ್ಷ್ಣವಾದ ಅಥವಾ ಹರಿತವಾದ ಬುದ್ಧಿಯುಳ್ಳವನು. ಉದಾ: ರಣಬೀರ್ ಸಿಂಗ್ ಭಾರತದ ಅತ್ಯಂತ ಕುಶಾಗ್ರಮತಿ ಮಿಲಿಟರಿ ಡೈರೆಕ್ಟರ್ ಜನರಲ್ ಎಂದೇ ಖ್ಯಾತರಾದವರು. ಬಲಿ ಚಕ್ರವರ್ತಿಯು ವಾಮನನಿಗೆ ದಾನ ಕೊಡಲು ಮುಂದಾದಾಗ ತಡೆಯುವ ಕೊನೆಯ ಪ್ರಯತ್ನವಾಗಿ ಅರ್ಘ್ಯಕ್ಕೆ ಕಮಂಡಲುವಿನಿಂದ ನೀರು ಸುರಿಯದಂತೆ ಶುಕ್ರಾಚಾರ್ಯನು ನೊಣದ ರೂಪ ಧರಿಸಿ ಕಮಂಡಲುವಿನ ಮೂತಿಯೊಳಗೆ ಕುಳಿತದ್ದು, ನೀರು ಸುರಿಯದಿದ್ದಾಗ ವಾಮನನ ಸಲಹೆಯಂತೆ ಬಲಿ ಚಕ್ರವರ್ತಿಯು ದರ್ಭೆಯ ತುದಿಯನ್ನು ಕಮಂಡಲುವಿನ ಮೂತಿಯೊಳಗೆ ತೂರಿಸಿದ್ದು, ಅದು ನೊಣ ರೂಪದ ಶುಕ್ರಾಚಾರ್ಯನ ಕಣ್ಣಿಗೆ ತಾಗಿ ಅವನು ಒಕ್ಕಣ್ಣನಾದದ್ದು- ಒಂದು ಪೌರಾಣಿಕ ಕಥೆ. ಇಲ್ಲಿ ವಾಮನನೇ ಕುಶಾಗ್ರಮತಿ!

ಇಂತಿರುವ ಕುಶಾಗ್ರಮತಿ ಪದ ಮೊನ್ನೆ ಆಗಸ್ಟ್ ೨೫ರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ, ಪಿ.ಚಿದಂಬರಂ ಅವರನ್ನು ಕುರಿತ ಅಂಕಣಬರಹವೊಂದರಲ್ಲಿ, ‘ಖುಷಾಗ್ರಮತಿ’ ಎಂದು ತಪ್ಪಾಗಿ ಕಾಣಿಸಿಕೊಂಡಿತ್ತು. ಅದೂ ಒಂದಲ್ಲ ಎರಡು ಸಲ! ಅಂಕಣಕಾರರು ಬೇರಾರೂ ಅಲ್ಲ, ಸಂಯುಕ್ತ ಕರ್ನಾಟಕದ ಸಂಪಾದಕರೇ. ಬಂಧನದಿಂದ ಚಿದಂಬರಂ ಅವರಿಗೇ ಖುಷಿಯಾಯ್ತೇ, ಅಥವಾ, ಅಂಕಣಕಾರ ಸಂಪಾದಕರಿಗೆ ಖುಷಿಯಾಯ್ತೇ, ಗೊತ್ತಿಲ್ಲ.
[ಸಂಯುಕ್ತ ಕರ್ನಾಟಕದ ‘ಖುಷಾಗ್ರಮತಿ’ಯನ್ನು ಗಮನಿಸಿ ಕಳುಹಿಸಿದವರು: ಮೈಸೂರಿನಿಂದ ಕೆ.ಲೀಲಾವತಿ.]
====
೨. ಸುದ್ದಿಯನ್ನು ಅಶುದ್ಧಗೊಳಿಸುವ ಅಸಂಬದ್ಧ ವಾಕ್ಯಗಳು
====
೨. ಸುದ್ದಿಯನ್ನು ಅಶುದ್ಧಗೊಳಿಸುವ ಅಸಂಬದ್ಧ ವಾಕ್ಯಗಳು
ಅ) “ನಿಜವಾದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಆಶೀರ್ವಾದ ಬೆಳ್ಳಿಯನ್ನು ಚಿನ್ನವಾಗಿಸಿದ ಪಿ.ವಿ.ಸಿಂಧು" [ಮಂಗಳೂರು ಮಿರರ್. ೨೬ ಆಗಸ್ಟ್ ೨೦೧೯. ಗಮನಿಸಿ ಕಳಿಸಿದವರು: ಕಾರ್ತಿಕ ಜಾಲ್ಸೂರು].
“ಪಿ.ವಿ ಸಿಂಧು ಚಿನ್ನದ ಪದಕ ಗೆದ್ದದ್ದು ರಾಘವೇಶ್ವರ ಸ್ವಾಮೀಜಿಯವರ ಆಶೀರ್ವಾದವನ್ನು ನಿಜವಾಗಿಸಿತು" ಎಂಬ ಅರ್ಥ ಬರಬೇಕೆಂದು ಈ ಮೇಲಿನ ವಾಕ್ಯವನ್ನು ಬರೆದದ್ದು. ಆದರೆ ಆ ಅರ್ಥ ಬಂದಿಲ್ಲ. ಮಾತ್ರವಲ್ಲ, ನಿಜವಾದ ರಾಘವೇಶ್ವರ ಭಾರತೀ ಮತ್ತು ಮಿಥ್ಯೆಯ ರಾಘವೇಶ್ವರ ಭಾರತೀ ಎಂದು ಇಬ್ಬರು ಸ್ವಾಮೀಜಿಗಳಿದ್ದಾರೆಯೇ ಎಂದು ಅನುಮಾನ ಬರುವಂತೆ ಇದೆ ವಾಕ್ಯದ ರಚನೆ.

ಆ) “ದೇವೇಗೌಡರ ಬಳಿಕ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಕುಮಾರಸ್ವಾಮಿ" [ಉದಯವಾಣಿ. ೨೬ ಆಗಸ್ಟ್ ೨೦೧೯. ಗಮನಿಸಿ ಕಳಿಸಿದವರು: ಸಂದೇಶ ನಾಯ್ಕ್ ಹಕ್ಲಾಡಿ]. “ಸಿದ್ದರಾಮಯ್ಯ ವಿರುದ್ಧ ಮೊದಲು ದೇವೇಗೌಡರು ಮುಗಿಬಿದ್ದರು, ಆಮೇಲೆ ಈಗ ಕುಮಾರಸ್ವಾಮಿ ಮುಗಿಬಿದ್ದಿದ್ದಾರೆ" ಎಂಬ ಅರ್ಥ ಬರಬೇಕೆಂದು ಈ ಮೇಲಿನ ವಾಕ್ಯವನ್ನು ಬರೆದದ್ದು. ಆದರೆ ಆ ಅರ್ಥ ಬಂದಿಲ್ಲ. ಮಾತ್ರವಲ್ಲ, ಕುಮಾರಸ್ವಾಮಿ ಅವರು ಮೊದಲು ದೇವೇಗೌಡರ ವಿರುದ್ಧ ಮುಗಿಬಿದ್ದರು, ಈಗ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದಾರೆ ಎಂಬರ್ಥ ಬರುವಂತೆ ಇದೆ ವಾಕ್ಯದ ರಚನೆ. (ನಿಜ ಸಂಗತಿ ಅದೇ ಇರಬಹುದು ಆ ವಿಚಾರ ಬೇರೆ).
ಇ) “ನ್ಯೂಜಿಲೆಂಡ್ ಸಂಸತ್ ಸದಸ್ಯೆ ತಮತಿ ಕಾಫಿ ಸದನದಲ್ಲಿ ಚರ್ಚೆ ನಡೆಸುವಾಗ ಸಂಸತ್ ಸ್ಪೀಕರ್ ಟ್ರಿವರ್ ಮಲ್ಲಾರ್ಡ್ ತಮತಿ ಅವರ ಮಗುವನ್ನು ಎತ್ತಿಕೊಂಡು ಬಾಟಲ್ ಮೂಲಕ ಹಾಲುಣಿಸಿದರು" [ವಿಜಯವಾಣಿ. ೨೪ ಆಗಸ್ಟ್ ೨೦೧೯. ಗಮನಿಸಿ ಕಳಿಸಿದವರು: ರತ್ನಾಕರ ಮೈರ, ಮಂಗಳೂರು]. ಸಂಸತ್ ಸದಸ್ಯೆಯ ಹೆಸರು ‘ತಮತಿ ಕಾಫಿ’. ಅವರು ಸದನದಲ್ಲಿ ಚರ್ಚೆ ನಡೆಸಿದವರು. ತನ್ನ ಪುಟ್ಟ ಮಗುವನ್ನೂ ಸದನಕ್ಕೆ ಕರೆದುಕೊಂಡು ಬಂದಿದ್ದರು. ಸಂಸತ್ತಿನ ಸ್ಪೀಕರ್ ಹೆಸರು ‘ಟ್ರಿವರ್ ಮಲ್ಲಾರ್ಡ್’. ಆ ಸ್ಪೀಕರ್ ಮಹಾಶಯರು ‘ತಮತಿ ಕಾಫಿ’ಯವರ ಮಗುವನ್ನು ಎತ್ತಿಕೊಂಡು ಬಾಟಲ್ ಮೂಲಕ ಹಾಲುಣಿಸಿದರು. ನ್ಯೂಜಿಲೆಂಡ್‌ನ ಸಂಸತ್ತಿನಲ್ಲಿ ಹೀಗೊಂದು ಮನೋಜ್ಞ ದೃಶ್ಯ. ಅದನ್ನು ಚಿತ್ರಸಮೇತ ಪ್ರಕಟಿಸಿದೆ ವಿಜಯವಾಣಿ. ಚಿತ್ರಕ್ಕೆ ಕೊಟ್ಟಿರುವ ಅಡಿಬರಹ 19 ಪದಗಳದ್ದು, ಉದ್ಧರಣ ಚಿಹ್ನೆ ಅಲ್ಪವಿರಾಮ ಇತ್ಯಾದಿಗಳನ್ನು ಬಳಸದೆ ಬರೆದಿರುವುದು, ನಿಧಾನವಾಗಿ ಒಂದೊಂದೇ ಪದವನ್ನು ಓದಿ ಅರ್ಥ ಮಾಡಿಕೊಳ್ಳದಿದ್ದರೆ ಯಾರ ಮಗು, ಯಾರು ಹಾಲುಣಿಸಿದ್ದು, ಕಾಫಿ ಸದನದಲ್ಲಿ ಹಾಲು ಉಣಿಸಿದ್ದೇಕೆ, ಅಂತೆಲ್ಲ ಭಯಂಕರ ಗೊಂದಲವಾಗುವ ಸ್ಥಿತಿಯನ್ನು ತಂದೊಡ್ಡಿದೆ.
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ಆವಶ್ಯಕತೆ ಸರಿ. ಈ ಪದದ ರಚನೆ ಹೇಗೆಂದರೆ- ‘ವಶ್ಯ’ ( ಅಧೀನವಾಗಿರುವ, ವಶಪಡಿಸಿಕೊಳ್ಳಲು ಸಾಧ್ಯವಾದ ಎಂಬರ್ಥದ) ಪದಕ್ಕೆ ವಿರುದ್ಧಾರ್ಥದ ಪದ ‘ಅವಶ್ಯ’. ಈ ಪದಕ್ಕೆ ಕ ಪ್ರತ್ಯಯ ಸೇರಿದಾಗ ನಿಯಮದಂತೆ ಆರಂಭದ ಸ್ವರಾಕ್ಷರ ದೀರ್ಘವಾಗುತ್ತದಾದ್ದರಿಂದ ಆವಶ್ಯಕ ಎಂದಾಗುತ್ತದೆ. ಅದಕ್ಕೆ ತೆ ಪ್ರತ್ಯಯ ಸೇರಿದಾಗ ಆವಶ್ಯಕತೆ ಎಂದಾಗುತ್ತದೆ. ಅವಶ್ಯಕತೆ ಎಂದೇ ಅನೇಕರು ಬರೆಯುತ್ತಾರೆ, ಅದು ಸರಿಯಲ್ಲ.
ಆ) ವಧೂವರರು ಸರಿ. ಮದುವೆಹೆಣ್ಣು, ಮದುವಣಗಿತ್ತಿ ಎಂಬ ಅರ್ಥದಲ್ಲಿ ಸಂಸ್ಕೃತ ಪದ ಇರುವುದು ‘ವಧೂ’ ಎಂದೇ ಹೊರತು ವಧು ಎಂದಲ್ಲ. ಆದರೆ ‘ವಧು’ ಮತ್ತು ‘ವಧುವರರು’ ಎಂದು ಬರೆಯುವುದು ಕನ್ನಡದಲ್ಲಿ ರೂಢಿಯಾಗಿಬಿಟ್ಟಿದೆ.
ಇ) ಡಿಂಡಿಮ ಸರಿ. ಒಂದು ವಾದ್ಯದ ಹೆಸರು. ಅದನ್ನು ಡಿಂಢಿಮ, ಢಿಂಢಿಮ ಅಂತೆಲ್ಲ ತಪ್ಪಾಗಿ ಬರೆಯಬಾರದು. ಬಾರಿಸು ಕನ್ನಡ ಡಿಂಡಿಮವ ಎಂದಿದ್ದಾರೆ ಕುವೆಂಪು. ‘ಭಾರಿಸು ಕನ್ನಡ ಢಿಂಢಿಮವ’ ಅಂತಲ್ಲ.
ಈ) ಪುತ್ರಕಾಮೇಷ್ಟಿ ಸರಿ. ಇಷ್ಟಿ ಅಂದರೆ ಯಜ್ಞ. ಪುತ್ರಸಂತಾನವನ್ನು ಬಯಸಿ ಮಾಡುವ ಯಜ್ಞವೇ ಪುತ್ರಕಾಮೇಷ್ಟಿ. ಅದನ್ನು ಪುತ್ರಕಾಮೇಷ್ಠಿ ಎಂದು ತಪ್ಪಾಗಿ ಬರೆಯಬಾರದು. ಹಾಗೆಯೇ, ‘ಪುತ್ರಕಾಮೇಷ್ಟಿ’ ಎಂದರೆ ಸಾಕು, ಮತ್ತೆ ಯಜ್ಞ ಎಂದು ಸೇರಿಸದಿದ್ದರೂ ನಡೆಯುತ್ತದೆ.
ಉ) ಬೃಹಸ್ಪತಿ ಸರಿ. ದೇವತೆಗಳ ಗುರು. ಒಂದು ಗ್ರಹ (ಗುರು ಗ್ರಹ). ಒಟ್ಟಾರೆಯಾಗಿ ಅತಿ ಬುದ್ಧಿವಂತರನ್ನು ಬೃಹಸ್ಪತಿ ಎನ್ನುವುದು ವಾಡಿಕೆ. ಅದನ್ನು ಬ್ರಹಸ್ಪತಿ ಎಂದು ತಪ್ಪಾಗಿ ಬರೆಯುವವರು ಬೃಹಸ್ಪತಿ ಆಗಿರಲಾರರು (ತಿದ್ದಿಕೊಂಡರೆ ಆಗಲೂಬಹುದು)! ಹುರಿಗಡಲೆ ಹಿಟ್ಟಿನ ಪಂಚಕಜ್ಜಾಯ ಪ್ರಸಾದವನ್ನು ಬಾಯಿಗೆ ಹಾಕಿದ ಕೂಡಲೇ ‘ಬೃಹಸ್ಪತಿ’ ಎಂದು ಹೇಳಿದರೆ ಅದು ಧಸಧಸನೆ ಬಾಯಿಯಿಂದ ಹೊರಗೆ ಹಾರುತ್ತದೆ. ಆದ್ದರಿಂದ ನಮ್ಮಲ್ಲಿ ಹುರಿಗಡಲೆ ಹಿಟ್ಟಿನ ಪ್ರಸಾದಕ್ಕೆ ‘ಬೃಹಸ್ಪತಿವಾರ’ ಎಂದು ಕೋಡ್‌ವರ್ಡ್ ಬಳಕೆ ಇದೆ!.

ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
===========