ಪೆರ್ಲ: ಆರೋಗ್ಯ ಸಮಾಜದ ನಿರ್ಮಾತೃ 'ಅಭಿವನ ಧನ್ವಂತರಿ', ಆಯುರ್ವೇದ ಶಿರೋಮಣಿ ಪ್ರಸಿದ್ದ ಆಯುರ್ವೇದ ವೈದ್ಯ ಡಾ. ಕಂಗಿಲ ಕೃಷ್ಣ ಭಟ್(96) ಗುರುವಾರ ಮುಂಜಾನೆ, ಪುತ್ರ ಕಾಸರಗೋಡಿನಲ್ಲಿರುವ ಪ್ರಸಿದ್ದ ಹೃದ್ರೋಗ ತಜ್ಞ ಡಾ.ಜಯದೇವ ಕಂಗಿಲ ಅವರ ಮನೆಯಲ್ಲಿ ನಿಧನರಾದರು. ಪ್ರಸಿದ್ದ ಸಮಸ್ಕøತ ವಿದ್ವಾಂಸರಾಗಿದ್ದ ಕೃಷ್ಣ ಭಟ್ ಅಲ್ಪ ಕಾಲ ಪೆರ್ಲದ ಸತ್ಯನಾರಾಯಣ ಫ್ರೌಢಶಾಲೆಯಲ್ಲಿ ಸಂಸ್ಕøತ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಪಾರಂಪರಿಕವಾಗಿ ಬಂದ ಆಯುರ್ವೇದ ವೈದ್ಯಕೀಯವನ್ನು ಮುಂದುವರಿಸಿ ಖ್ಯಾತರಾಗಿದ್ದರು. ಮೃತರ ಪತ್ನಿ ಪರಮೇಶ್ವರಿ ಅಮ್ಮ ಈ ಹಿಂದೆಯೇ ನಿಧನರಾಗಿದ್ದರು.ಮಕ್ಕಳಾದ ಕಾಸರಗೋಡಿನ ಖ್ಯಾತ ಹೃದ್ರೋಗ ತಜ್ಞ ಡಾ.ಜಯದೇವ ಕಂಗಿಲ, ಸುಬ್ರಹ್ಮಣ್ಯ ಭಟ್ (ಬೆಂಗಳೂರು), ವೆಂಕಟರಮಣ ಭಟ್(ದೆಹಲಿ), ಮಹಾಬಲೇಶ್ವರ ಭಟ್ (ಬೆಂಗಳೂರು), ಪುತ್ರಿಯರಾದ ಶ್ರೀಮತಿ, ಲಲಿತಾ, ಸರಸ್ವತಿ, ಮಾಲತಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇಡೀ ಸಮಾಜಕ್ಕೆ ಸ್ಫೂರ್ತಿದಾಯಕರಾಗಿದ್ದ ಕೃಷ್ಣ ಭಟ್ಟರು ಉತ್ತಮ ಓದುಗರು ಮಾತ್ರವಲ್ಲ ಶ್ರೇಷ್ಠ ವಿಮರ್ಶಕರು ಕೂಡಾ ಆಗಿದ್ದರು. ಕಂಗಿಲದ ಅವರ ಹಿತ್ತಿಲು ಒಂದು ನಂದನೋದ್ಯಾನವೇ ಸರಿ. ಜಗತ್ತಿನ ಎಲ್ಲ ಜಾತಿಯ ಗುಲಾಬಿ ಗಿಡಗಳೂ ಅಲ್ಲಿವೆ; ಔಷಧೀಯ ಗಿಡಗಳೂ ಅಪಾರ ಸಂಖ್ಯೆಯಲ್ಲಿವೆ.
ಸದಾ ಶುಭ್ರ ಶ್ವೇತ ವಸನಧಾರಿಯಾಗಿರುವ ಆಜಾನುಬಾಹು ಕೃಷ್ಣ ಭಟ್ಟರು ಮಗುವಿನ ಮನಸ್ಸಿನ ಹಿರಿಯರು. ಮುಗ್ಧತೆ, ಸರಳ ಜೀವನ, ನಿಷ್ಕಲ್ಮಶ ಮನಸ್ಸು ಮೊದಲಾದವುಗಳಿಗೆ ಇವರೇ ಮೊದಲಿಗರು.
ಇವರ ಕೈಗುಣ ಬಹಳ ದೊಡ್ಡದು. ಸಮಾಜದ ಆರೋಗ್ಯ ರಕ್ಷಣೆಯಲ್ಲಿ ಮುಂಚೂಣಿಯ ಸರದಾರರಿವರು. ಬಡರೋಗಿಗಳಿಗೆ ಉಚಿತವಾಗಿ ಔಷಧೋಪಚಾರಗಳನ್ನು ನಡೆಸುತ್ತಿದ್ದ ಋಷಿಗಳು. ಅವರ ಇಂತಹಾ ಗುಣಗಳು ಅವರ ಚಿರಂಜೀವಿಗಳಲ್ಲಿಯೂ ರಕ್ತಗತವಾಗಿಯೇ ಬಂದಿದೆ.
'ವೈದ್ಯೋನಾರಾಯಣೋ ಹರಿ:' ಈ ಮಾತಿಗೆ ಕೃಷ್ಣ ಭಟ್ಟರು ದೃಷ್ಟಾಂತ.ಅವರ ವೈದ್ಯಪುತ್ರ ದ್ವಯರೂ ಇದಕ್ಕೆ ಹೊರತಲ್ಲ. ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರಗಳಲ್ಲಿಯೂ ಶ್ರೀಯುತರ ಸಾಧನೆಗೆ ಎಣೆಯೇ ಇಲ್ಲ. ಎಲ್ಲವನ್ನೂ ತಿಳಿದಿರುವ ಪಂಡಿತರಾದರೂ ಸಾಮಾನ್ಯರಂತೆ ವ್ಯವಹರಿಸುವ ಅವರೊಂದು 'ತುಂಬಿದ ಕೊಡ'!
ಇನ್ನೇನು, ಶತಮಾನೋತ್ಸವದ ಅಂಚಿನಲ್ಲಿ ಸಾಗುತ್ತಿದ್ದ ಕೃಷ್ಣ ಭಟ್ಟರು ಸಾಧನೆಯ ಪಥದಲ್ಲಿ ಸದ್ದುಗದ್ದಲವಿಲ್ಲದೆ ಮೇಲಕ್ಕೇರಿ ಲೋಕಕ್ಕೆ ಮಾರ್ಗದರ್ಶನದ ಬೆಳಕನ್ನಿತ್ತವರು. ಇಷ್ಟು ದೊಡ್ಡ ವಿದಗ್ಧರಾದರೂ ಅದನ್ನು ತೋರಿಸಿಕೊಳ್ಳದೆ ಜನ ಸಾಮಾನ್ಯರಲ್ಲಿ ಒಂದಾಗುತ್ತಿದ್ದ ಇವರು ಆಗಸದೆತ್ತರಕ್ಕೇರಿದ್ದರೂ 'ಏರಿದವನು ಚಿಕ್ಕವನಿರಬೇಕು' ಎಂಬ ಮಾತಿಗೆ ಸಾಕ್ಷಿಯಾಗಿದ್ದಾರೆ.ಅವರ ನಿಧನ ಕನ್ನಡಿಗರಿಗೆ ಮಾತ್ರವಲ್ಲ ಸಮಸ್ತ ಸಮಾಜಕ್ಕೆ ತುಂಬಲಾರದ ನಷ್ಟ.



