HEALTH TIPS

ಸವಾಲುಗಳ ಮಧ್ಯೆ ಕರಿಂಬಿಲದಲ್ಲಿ ಪೂರ್ಣಪ್ರಮಾಣದಲ್ಲಿ ವಾಹನ ಸಂಚಾರ ಮತ್ತೆ ಆರಂಭ-ಭೀತಿ ದೂರವಾಗಿಲ್ಲ!


             ಬದಿಯಡ್ಕ: ಕುಸಿದು ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯವನ್ನು ಪೂರ್ತಿಗೊಳಿಸಿದಾಗ ಸಂಪೂರ್ಣ ಕೆಸರುಮಯವಾಗಿರುವ ಚೆರ್ಕಳ ಕಲ್ಲಡ್ಕ ಅಂತಾರಾಜ್ಯ ಸಂಪರ್ಕ ರಸ್ತೆಯ ಕರಿಂಬಿಲದಲ್ಲಿ ಗುರುವಾರ ಮಧ್ಯಾಹ್ನದಿಂದಲೇ ವಾಹನ ಸಂಚಾರ ಮತ್ತೆ ಆರಂಭಗೊಂಡಿದೆ. ಕಳೆದ ಒಂದು ತಿಂಗಳಿನಿಂದ ಧಾರಾಕಾರ ಮಳೆಗೆ ಗುಡ್ಡಕುಸಿತದಿಂದಾಗಿ ವಾಹನ ಸಂಚಾರವೇ ನಿಂತುಹೋಗಿತ್ತು. ಬದಿಯಡ್ಕ ಪೆರ್ಲ ಸಂಚಾರಕ್ಕೆ ಸುತ್ತುಬಳಸಿ ಹೋಗಬೇಕಾಯಿತು.
        ಜುಲೈ 23 ರಂದು ಗುಡ್ಡಕುಸಿತ ಆರಂಭವಾಗಿದ್ದು, ಅಪಾಯದ ಮುನ್ಸೂಚನೆಯಿಂದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಲೋಕೋಪಯೋಗಿ ಇಲಾಖೆಯ ಮಂದಗತಿಯ ನಿರ್ಧಾರಗಳಿಂದ ಬರೋಬರಿ ಒಂದು ತಿಂಗಳುಗಳ ಕಾಲ ಸಾರ್ವಜನಿಕರು ಸಂಕಷ್ಟವನ್ನನುಭವಿಸುಂತಾಯಿತು.
ಗುರುವಾರ ಬೆಳಗ್ಗಿನಿಂದ ಸಾಮಾನ್ಯ ರೀತಿಯ ವಾಹನ ಸಂಚಾರ ಆರಂಭವಾಗಿದ್ದರೂ, ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್‍ಗಳು ಆರಂಭವಾಗಿರಲಿಲ್ಲ. ಮಧ್ಯಾಹ್ನ ವೇಳೆ ಬಸ್‍ಗಳು ಪ್ರಯಾಣ ಆರಂಭಿಸಿದ್ದರೂ ಕೇರಳ ರಾಜ್ಯ ಸಾರಿಗೆ ಬಸ್‍ಗಳು ಶುಕ್ರವಾರ (ಇಂದು) ಸಂಚಾರ ಪ್ರಾರಂಭಿಸಲಿವೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
          ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಬಿಜೆಪಿ ಹಾಗೂ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೇತೃತ್ವದಲ್ಲಿ ಬದಿಯಡ್ಕ ಪ್ರಧಾನ ವೃತ್ತದ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. 2 ದಿನಗಳ ನಂತರ ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಮತ್ತು ಬಿಜೆಪಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಊರವರು ಲೋಕೋಪಯೋಗಿ ಇಲಾಖೆಯ ಮುಂಭಾಗದಲ್ಲಿ ಮುಷ್ಕರವನ್ನೂ ಕೈಗೊಂಡಿದ್ದರು. ಜಿಲ್ಲಾಧಿಕಾರಿ ಡಾ. ಕೆ.ಸಜಿತ್ ಬಾಬು, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರೂ ಲೋಕೋಪಯೋಗಿ ಇಲಾಖೆಯು ಮಾತ್ರ ಮಂದಗತಿಯಿಂದ ಕೆಲಸಕಾರ್ಯವನ್ನು ಕೈಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು.
   ತೊಂದರೆಗೊಳಗಾದವರು:
   ಕರಿಂಬಿಲದಲ್ಲಿ ಗುಡ್ಡೆ ಕುಸಿತದಿಂದ ಕಳೆದ ಒಂದು ತಿಂಗಳಿಂದ ಉಕ್ಕಿನಡ್ಕ, ಪರ್ತಿಕ್ಕಾರ್, ಕಾಡಮನೆ, ಪಳ್ಳತ್ತಡ್ಕ ಪ್ರದೇಶದ ನೂರಾರು ನಾಗರಿಕರು, ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದರು. ಕಾಸರಗೋಡು ಪುತ್ತೂರು ಅಂತರ್ ರಾಜ್ಯ ಬಸ್ ಗಳು ತಮ್ಮ ರೂಟ್ ಬದಲಿಸಿ ಉಳಿಯತ್ತಡ್ಕ, ಮಾಯಿಪ್ಪಾಡಿ, ಸೀತಾಂಗೋಳಿ, ಪುತ್ತಿಗೆ,ಶೇಣಿ, ಇಡಿಯಡ್ಕ ರಸ್ತೆಯಾಗಿ ಪೆರ್ಲದ ಮೂಲಕ ಪುತ್ತೂರಿಗೆ ಸಂಚರಿಸುತ್ತಿದ್ದವು. ಅತ್ತ ಕುಸಿದ ರಸ್ತೆಯ ಮಧ್ಯೆ ಸಿಲುಕಿಕೊಂಡಿದ್ದ ಆ ಪರಿಸರದ ನಾಗರಿಕರು ತೊಂದರೆ ಅನುಭವಿಸಿದ್ದರು.
    ಜಾಗರೂಕತೆ ಅಗತ್ಯ:
      ರಸ್ತೆಯು ವಾಹನಸಂಚಾರಕ್ಕೆ ತೆರೆದುಕೊಂಡಿದ್ದರೂ ಸಂಪೂರ್ಣ ಕೆಸರುಮಯವಾಗಿದೆ. ಅಜಾಗರೂಕತೆಯಿಂದ ವಾಹನ ಸಂಚಾರ ಕೈಗೊಂಡರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಲಿದೆ. ಧಾರಾಕಾರ ಮಳೆ ಸುರಿದರೂ ವಾಹನ ಸಂಚಾರಕ್ಕೆ ತೊಡಕುಂಟಾಗುವ ಸಾಧ್ಯತೆಯಿದೆ. ವಾಹನಸಂಚಾರ ಪುನರಾರಂಭಗೊಂಡಿರುವುದು ಸಾರ್ವಜನಿಕರ ನಿರಾಳತೆಗೆ ಕಾರಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries