ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬದಿಯಡ್ಕ ಘಟಕದ ವತಿಯಿಂದ ಶುಕ್ರವಾರ ವ್ಯಾಪಾರಿ ದಿನವನ್ನು ಆಚರಿಸಲಾಯಿತು. ಬದಿಯಡ್ಕ ವ್ಯಾಪಾರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬದಿಯಡ್ಕ ಘಟಕದ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ಧ್ವಜಾರೋಹಣಗೈದು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಳೆಗಾಲ ಈ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಭೀಕರ ಪರಿಸ್ಥಿತಿ ಮತ್ತೊಮ್ಮೆ ತಲೆದೋರುವತ್ತ ಸಾಗುತ್ತಿದೆ. ಕಳೆದ ವರ್ಷ ರಾಜ್ಯದ ಜನತೆಗೆ ವ್ಯಾಪಾರಿಗಳು ಸಹಾಯಹಸ್ತವಾಗಿ ನಿಂತಿರುತ್ತಾರೆ. ಬಟ್ಟೆಬರೆಗಳನ್ನು, ಆರ್ಥಿಕ ಸಹಾಧನವನ್ನು ಪರಿಹಾರ ನಿಧಿಗೆ ಕಳುಹಿಸಿರುತ್ತೇವೆ. ಮುಂದೆಯೂ ಇಂತಹ ಸಂದರ್ಭಗಳು ಎದುರಾದಲ್ಲಿ ಜನತೆಯೊಂದಿಗೆ ನಾವು ನಿಲ್ಲಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬದಿಯಡ್ಕ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಶ್ರೀನಾಥ್ ಪಿ.ಆರ್. ಪಾಲ್ಗೊಂಡು ಮಾತನಾಡಿ ವ್ಯಾಪಾರಿಗಳು ಕೇವಲ ವ್ಯಾಪಾರ ಮನೋಭಾವದಿಂದ ದುಡಿಯುತ್ತಿಲ್ಲ. ಸಾಮಾಜಿಕ ಕಳಕಳಿಯಿಂದ ಅನೇಕ ಜನೋಪಯೋಗಿ ಕಾರ್ಯಗಳನ್ನು ಮಾಡಿರುವುದು ಬದಿಯಡ್ಕದ ಜನತೆಗೆಲ್ಲ ತಿಳಿದ ವಿಚಾರವಾಗಿದೆ. ಪ್ರತೀವರ್ಷ ವ್ಯಾಪಾರಿದಿನದಂಗವಾಗಿ ಹಲವಾರು ಜನಪರ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ಪ್ರಸ್ತುತ ವರ್ಷ ಗಿಡಗಳನ್ನು ವಿತರಿಸಿರುವುದು ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಜನತೆಗೆ ನೀಡಿದ್ದಾರೆ. ಪೊಲೀಸ್ ಇಲಾಖೆಯೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿ ಪೇಟೆಯಲ್ಲಿ ಶಾಂತಿ, ಸಮಾಧಾನ ನೆಲೆಗೊಳ್ಳಲು ಕಾರಣರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬದಿಯಡ್ಕದ ಹಿರಿಯ ವ್ಯಾಪಾರಿಗಳಾದ ಕುಮಾರನ್ ನಾಯರ್, ಉಮಾನಾಥ ಕಾಮತ್, ಶ್ರೀನಿವಾಸ ರಾವ್, ದೂಮಣ್ಣ ರೈಯವರನ್ನು ಸನ್ಮಾನಿಸಲಾಯಿತು. ಬದಿಯಡ್ಕ ಘಟಕದ ಕೋಶಾಧಿಕಾರಿ ಜ್ಞಾನದೇವ ಶೆಣೈ, ಉಪಾಧ್ಯಕ್ಷ ರಾಜು ಸ್ಟೀಫನ್, ಯೂತ್ ವಿಂಗ್ ಅಧ್ಯಕ್ಷ ರವಿ ನವಶಕ್ತಿ, ಪದಾಧಿಕಾರಿ ಗಣೇಶ್ ಸಿ.ಎಚ್. ಮಾತನಾಡಿದರು. ಯೂನಿಟ್ ಕಾರ್ಯದರ್ಶಿ ಬಿ.ಎನ್. ನರೇಂದ್ರ ಬದಿಯಡ್ಕ ಸ್ವಾಗತಿಸಿ, ಜೊತೆಕಾರ್ಯದರ್ಶಿ ಉದಯಶಂಕರ್ ಬದಿಯಡ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ವ್ಯಾಪಾರಿಗಳಿಗೆ ಸಂಘದ ವತಿಯಿಂದ ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು.



