HEALTH TIPS

ಶಾಂತಿ ಸೈನಿಕರಾಗಿ ಗಾಂಧಿ ಚಿಂತನೆಯ ಹಾದಿಯಲ್ಲಿ ಮುನ್ನಡೆಯೋಣ: ದ್ವಿದಿನ ಶಾಂತಿ ಸೇನಾ ಕಾರ್ಯಾಗಾರ ಸಮಾರೋಪದಲ್ಲಿ ಗಾಂಧೀ ಮಿಶನ್ ಅಧ್ಯಕ್ಷ ಡಾ.ಎನ್.ರಾಧಾಕೃಷ್ಣನ್ ಅಭಿಮತ


       ಮಂಜೇಶ್ವರ: ವಿನೋಬಾಜಿ ನಗರದ ಕಲಾಸ್ಪರ್ಶಂ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಶಾಂತಿ ಸೇನಾ ದಿನಾಚರಣೆ ಮತ್ತು ದ್ವಿದಿನ ಕಾರ್ಯಾಗಾರ ಶನಿವಾರ ಸಮಾಪ್ತಿಗೊಂಡಿತು. ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಗಾಂಧೀ ಮಿಶನ್ ಅಧ್ಯಕ್ಷ ಡಾ.ಎನ್. ರಾಧಾಕೃಷ್ಣನ್ ಅವರು ಸಮಕಾಲೀನ ಜಗತ್ತಿನಲ್ಲಿ ಮಹಾತ್ಮನ ಸಂದೇಶಗಳು ಶಾಂತಿ ಮತ್ತು ಸಹಬಾಳ್ವೆಯ ಮಂತ್ರವನ್ನು ಬೋಧಿಸುತ್ತವೆ. ಪ್ರಸ್ತುತ  ಕಾಲಘಟ್ಟದಲ್ಲಿ ಗಾಂಧಿ ಚಿಂತನೆಯನ್ನು ಸಮಾಜದಲ್ಲಿ ಮತ್ತೊಮ್ಮೆ ಬಿತ್ತುವ ಕಾರ್ಯ ನಮ್ಮಿಂದಾಗಬೇಕಿದೆ ಎಂದರು.
     ಸಮಾವೇಶದಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ಸ್ವಂತ ಮನೆಯಲ್ಲಿ, ಊರಿನಲ್ಲಿ ಗಾಂಧೀ ಚಿಂತನೆಯನ್ನು ಬಲಪಡಿಸಲು ಶ್ರಮವಹಿಸಿ ಆ ಮೂಲಕ ಶಾಂತಿ, ಪ್ರೀತಿ ಮತ್ತು ಸಹನೆಯ ಗುಣಗಳು ಬೆಳೆಯುವಂತೆ ಮಾಡಬೇಕು ಎಂದು ಕರೆ ನೀಡಿದರು. ಶಾಂತಿಸೇನಾ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿ ಸಮಾಜದ ಪ್ರತಿಯೊಬ್ಬರನ್ನು ಶಾಂತಿದೂತರನ್ನಾಗಿಸುವ ಮಹತ್ತರ ಕಾರ್ಯವಾಗಬೇಕಿದೆ ಎಂದು ಆಭಿಪ್ರಾಯ ವ್ಯಕ್ತಪಡಿಸಿದರು.
     ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡ ಗೋಪಾಲ ಶೆಟ್ಟಿ ಅರಿಬೈಲು ಮಾತನಾಡಿ ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗಬೇಕಿದೆ. ಮಾತ್ರವಲ್ಲದೆ ಗ್ರಾಮಸ್ವರಾಜ್ಯ ಧ್ಯೇಯ ಈಡೇರಬೇಕಿದೆ ಎಂದರು. ಮಹಾತ್ಮರ ಅಸಹಕಾರ ಚಳುವಳಿಗಳು ಶಾಂತಿ, ಸಹನೆಯ ಧ್ಯೇಯದಿಂದ ಕೂಡಿತ್ತು, ಮಾತ್ರವಲ್ಲದೆ ಈ ಶಾಂತಿ ಮಂತ್ರವೇ ದೇಶಕ್ಕೆ ಸ್ವಾತಂತ್ರ್ಯಕ್ಕೂ ಕಾರಣವಾಯಿತು ಎಂದು ಹೇಳಿದರು. ಶಾಂತಿ ತತ್ವದ ಶಕ್ತಿಯು ಆ ಮೂಲಕ ಜಗತ್ತನ್ನು ಬೆರಗಾಗಿಸಿದೆ. ಎಂದರು. ಸ್ಥಿತ್ಯಂತರದ ಆಧುನಿಕ ಕಾಲಘಟ್ಟದಲ್ಲೂ ಮಹಾತ್ಮಾ ಗಾಂಧೀಜಿಯ ತತ್ವಾದರ್ಶಗಳು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
     ಕಾರ್ಯಕ್ರಮದಲ್ಲಿ ಶಾಂತಿ ಸೇನೆಯ ಪದಾಧಿಕಾರಿಗಳು ಮತ್ತು ಶಾಂತಿದೂತರಾಗಿ ಸಮಾಜದ ಅಭ್ಯುದಯದಲ್ಲಿ ಪಾಲುದಾರರಾದ ಡಾ.ಇಬ್ರಾಹಿಂ ಹಾಜಿ ಕಲ್ಲೂರು ಇವರಿಗೆ ವಿನೋಬ ವೆಂಕಟೇಶ ರಾವ್ ಶಾಂತಿ ಸೇನಾ ಫೌಂಡೇಶನ್ ಇದರ ಸಂಚಾಲಕ ಹರ್ಷಾದ್ ವರ್ಕಾಡಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಮಾನವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಂಜಿತ್ ಸರ್ಕಾರ್, ದಿವಾಕರ್, ವಿ.ವಿ ಪ್ರಭಾಕರನ್, ಪಾರ್ಥಸಾರಥಿ, ಸಾಮಾಜಿಕ ಕಾರ್ಯಕರ್ತ ಪಳನಿ, ಕುಮಾರ ಪ್ರಸಾದ್, ರಮೇಶ್ ಚಂದ್ ಕರ್ಮರ್ ಅವರಿಗೆ ಡಾ. ರಾಧಾಕೃಷ್ಣನ್ ಸ್ಮರಣಿಕೆ ನೀಡಿ ಗೌರವಿಸಿದರು. ಸಾವಯವ ಕೃಷಿಕ ಕಂಡಬಾರಿನ ಶ್ರೀಕಾಂತ ಹೊಳ್ಳ, ಪತ್ರಕರ್ತ ಅರಿಫ್ ಮಚ್ಚಂಪಾಡಿಯವರ, ಶಾಂತಿ ಸೇನಾ ಸಂಸ್ಥಾಪಕ ವೆಂಕಟೇಶ ರಾವ್ ಪುತ್ರ ಜಯಪ್ರಕಾಶ್ ರಾವ್ ಅವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಕಲ್ಲೂರು ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಇಬ್ರಾಹಿಂ ಹಾಜಿ ಕಲ್ಲೂರು ಶಾಂತಿ ಸೇನಾ ದಿನಾಚರಣೆ ಮೂಲಕ ನಡೆದ ಗಾಂಧಿ ತತ್ವಾದರ್ಶಗಳ ಚಿಂತನೆ ಮತ್ತು ಸ್ಮರಣೆ ಕಾರ್ಯಕ್ರಮ ಪ್ರಶಂಸನೀಯವಾಗಿದೆ. ಇಂದಿನ ಕಾಲಘಟ್ಟದಲ್ಲಿ ಗಾಂಧೀ ಚಿಂತನೆಯೊಂದಿಗೆ ಶಾಂತಿ ಸಹಬಾಳ್ವೆ ಜೀವನ ಸಮಾಜಕ್ಕೆ ಅಗತ್ಯವಿದೆ ಎಂದರು. ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಿದ ಕಲಾಸ್ಪರ್ಶಂ ಪದಾಧಿಕಾರಿ ಲವೀನಾ ಮೊಂತೆರೋ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಶಾಂತಿ ಸೇನಾ ಸಂಚಾಲಕ ಹರ್ಷಾದ್ ವರ್ಕಾಡಿ ಸ್ವಾಗತಿಸಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries