ಬದಿಯಡ್ಕ: ಇಲ್ಲಿನ ರಾಮಲೀಲಾ ಯೋಗಶಿಕ್ಷಣ ಕೇಂದ್ರದ ಸಭಾಭವನದಲ್ಲಿ ಜರಗಿದ ರಾಮಾಯಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಬಾಲಕಲಾವಿದರಿಂದ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನಗೊಂಡಿತು. ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ `ವೀರ ಬಬ್ರುವಾಹನ' ಹಾಗೂ ಚಿತ್ತರಂಜನ್ ಕಡಂದೇಲು `ಸುದರ್ಶನ ವಿಜಯ' ಪ್ರಸಂಗದಲ್ಲಿ ಮನೋಜ್ಞವಾದ ಅಭಿನಯವನ್ನು ನೀಡಿದರು. ಪ್ರಸಿದ್ಧ ಯಕ್ಷಗಾನ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮಭಟ್ ನಿರ್ದೇಶನ ನೀಡಿದ್ದರು. ಹಿಮ್ಮೇಳದಲ್ಲಿ ಸುಧೀಶ್ ಪಾಣಾಜೆ, ಗಣಪತಿ ಶರ್ಮ ಮತ್ತು ಅನ್ವಯಕೃಷ್ಣ ಹಾಡುಗಾರಿಕೆಯಲ್ಲೂ, ಚೆಂಡೆ ಹಾಗೂ ಮದ್ದಳೆಯಲ್ಲಿ ವರ್ಷಿತ್ ಕಿಜಕ್ಕಾರು, ನಾರಾಯಣ ಶರ್ಮ ನೀರ್ಚಾಲು, ಆದಿತ್ಯ ಬರೆಕೆರೆ ಸಹಕಾರವಿತ್ತರು. ಚಕ್ರತಾಳದಲ್ಲಿ ಬಾಲಕೃಷ್ಣ ಏಳ್ಕಾನ ಸಹಕರಿಸಿದರು.
ಹಿಮ್ಮೇಳದಲ್ಲಿ ಸಹಕರಿಸಿದ ಕಲಾವಿದರಿಗೆ ಕರಂಬಿಲ ಲಕ್ಷ್ಮಣ ಪ್ರಭು ಮತ್ತು ಬೇ.ಸೀ. ಗೋಪಾಲಕೃಷ್ಣ ಭಟ್‍ರು ಶಾಲು ಹೊದಿಸಿ ಗೌರವಿಸಿದರು ಹಾಗೂ ಬಾಲಕರ ಪ್ರತಿಭೆಯನ್ನು ಶ್ಲಾಘಿಸಿದರು.
ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕದ ಕೇಶವ ಶರ್ಮ ಹಾಗೂ ದಿವ್ಯಾ ದಂಪತಿಗಳ ಪುತ್ರನಾಗಿದ್ದು ಶ್ರೀ ಭಾರತಿ ವಿದ್ಯಾಪೀಠ ಬದಿಯಡ್ಕದಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಚಿತ್ತರಂಜನ್ ಬದಿಯಡ್ಕ ನಿವಾಸಿ ಹರೀಶ್ ಕುಮಾರ್ ಕಡಂದೇಲು ಹಾಗೂ ನವಜೀವನ ಶಾಲೆಯ ಅಧ್ಯಾಪಿಕೆ ಜ್ಯೋತ್ಸ್ನಾ ದಂಪತಿಗಳ ಪುತ್ರನಾಗಿದ್ದು ನವಜೀವನ ಪ್ರೌಢಶಾಲೆಯಲ್ಲಿ 7 ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಇವರೀರ್ವರೂ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಾಗಿದ್ದು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಬ್ಬಣಕೋಡಿ ರಾಮಭಟ್ಟರ ಶಿಷ್ಯಂದಿರಾಗಿದ್ದಾರೆ.


