ಬದಿಯಡ್ಕ: ಅಂತರ್ ರಾಜ್ಯ ಹೆದ್ದಾರಿ ಹಾದು ಹೋಗುವ ಬದಿಯಡ್ಕ ಪೆರ್ಲ ರಸ್ತೆಯ ಕರಿಂಬಿಲ ಗುಡ್ಡಕುಸಿತ ಪ್ರದೇಶಕ್ಕೆ ಕೊನೆಗೂ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಗುರುವಾರ ಸಂಜೆ ಭೇಟಿ ನೀಡಿದರು.
ಕಳೆದ ಒಂದು ತಿಂಗಳಿಗೂ ಅಧಿಕ ಸಮಯದಿಂದ ಗುಡ್ಡ ಕುಸಿತ ಸಂಭವಿಸುತ್ತಿದ್ದರೂ ಕಾಸರಗೋಡು ಸಂಸದರು ಇತ್ತಕಡೆ ಸುಳಿಯದೇ ಜನರ ಆಕ್ರೋಶಕ್ಕೆ ಕಾರಣರಾಗಿದ್ದರು. ಬದಿಯಡ್ಕ ಪೆರ್ಲ ರಸ್ತೆಯು ಅಂತಾರಾಜ್ಯ ರಸ್ತೆಗೆ ಸೇರುತ್ತಿದ್ದು, ಪ್ರಮುಖ ರಸ್ತೆಯ ದುರವಸ್ಥೆ ಬಗ್ಗೆ ನಿರ್ಲಕ್ಷ್ಯವಹಿಸಿದ್ದು ಸಂಸದರು, ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಯಾಣಿಕರ ರೋಷಕ್ಕೆ ಗುರಿಯಾಗಿದ್ದರು.
ಸ್ಥಳಕ್ಕೆ ಭೇಟಿಯಿತ್ತ ಸಂಸದರು ಮಾತನಾಡಿ ಪ್ರಳಯ ಕಾಲದಲ್ಲಿ ನಡೆದ ಧಾರುಣವಾದ ಘಟನೆಯಿಂದ ಗುಡ್ಡವು ಕುಸಿದು ರಸ್ತೆಯನ್ನು ಘಾಸಿಗೊಳಿಸಿದೆ. ಕೇರಳ ಕರ್ನಾಟಕದ ಸಂಪರ್ಕ ರಸ್ತೆಯಲ್ಲಿ ಉಂಟಾದ ದುರಂತವನ್ನು ಸಮರೋಪಾದಿಯಲ್ಲಿ ಪರಿಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಲಿದ್ದೇನೆ. ಕಾಸರಗೋಡಿನವರಾದ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಅವರ ಗಮನಕ್ಕೆ ತರುತ್ತೇನೆ. ಲೋಕೋಪಯೋಗಿ ಸಚಿವ, ಹಣಕಾಸುಮಂತ್ರಿ ಥೋಮಸ್ ಐಸಾಕ್ ಅವರಲ್ಲಿಯೂ ವಿಷಯವನ್ನು ಪ್ರಸ್ತಾವಿಸಿ ಕೋಟಿಗಳ ನಷ್ಟವುಂಟಾಗಿದ್ದು ಇಲ್ಲಿನ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿದ್ದೇನೆ ಎಂದ ಅವರು ರಾಜ್ಯ ಸರಕಾರವು ಬೇಡಿಕೆಯನ್ನಿಟ್ಟರೆ ಮಿಲಿಟರಿಯ ಸಹಾಯದ ಮೂಲಕ ಇಲ್ಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಬಹುದು ಎಂದರು. ಜಿಲ್ಲಾ ಸಾರಿಗೆ ಅಧಿಕಾರಿಯವರನ್ನು ಸಂಪರ್ಕಿಸಿ ಕುಸಿದ ರಸ್ತೆಯ ಇಕ್ಕೆಲಗಳ ಜನತೆಗೆ, ವಿದ್ಯಾರ್ಥಿಗಳಿಗೆ ಅಗತ್ಯವುಳ್ಳ ಬಸ್ ಸೌಕರ್ಯಕ್ಕಾಗಿ ಪ್ರಯತ್ನಿಸಲಾಗುವುದು ಎಂದೂ ಅವರು ತಿಳಿಸಿದರು. ಇದೇವೇಳೆ ಜಿಲ್ಲಾಧಿಕಾರಿಯವರಿಗೆ ಕರೆಮಾಡಿ ಪರಿಸ್ಥಿತಿಯ ಮಾಹಿತಿಯನ್ನು ಪಡೆದುಕೊಂಡರು.
ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಅನ್ವರ್ ಓಸೋನ್, ಶ್ಯಾಮಪ್ರಸಾದ ಮಾನ್ಯ, ಆನಂದ ಕೆ.ಮವ್ವಾರು, ಮಾಹಿನ್ ಕೇಳೋಟ್, ಜೇಮ್ಸ್, ನೋಯೆಲ್ ಮತ್ತಿತರರು ಜೊತೆಗಿದ್ದರು. ನಂತರ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಭಾಗದ ಗುಡ್ಡ ಕುಸಿತ ಭೀತಿಯಿರುವ ಪ್ರದೇಶಕ್ಕೆ ಸಂಸದರು ಭೇಟಿನೀಡಿ ಮಾಹಿತಿ ಪಡೆದುಕೊಂಡರು.


