HEALTH TIPS

ಗಡಿನಾಡಿನಲ್ಲಿ ತುಳು ಡಿಪ್ಲೊಮಾ ಕೋರ್ಸ್ ಆರಂಭ!-24 ಮಂದಿಗಳಿಂದ ಪ್ರವೇಶ ಪತ್ರ ಸಲ್ಲಿಕೆ


      ಕಾಸರಗೋಡು: ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭ ಕೇರಳದ ಪಾಲಾದರೂ ಇಲ್ಲಿನ ಜನತೆ ಪರಂಪರಾಗತ ಭಾಷೆ-ಸಂಸ್ಕೃತಿಯನ್ನು ಇನ್ನು ಜೀವಂತವಾಗಿ ಉಳಿಸಿಕೊಂಡು ಬಂದಿದೆ. ವಿವಿಧ ಕಾರಣಗಳಿಂದ ಆಡಳಿತಾತ್ಮಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿಯೂ ಮಲೆಯಾಳಿಗರ ದಬ್ಬಾಳಿಕೆಗೆ ಒಳಗಾಗುತ್ತಿರುವ ಕಾಸರಗೋಡಿನ ಕನ್ನಡಿಗರ ಗರಿಮೆಗೆ ತುರಾಯಿ ಇರಿಸುವಂತೆ ಇದೀಗ ಹೊಸ ಪ್ರಯತ್ನ ಆರಂಭಗೊಂಡಿದೆ.
       ಕೇರಳದ ಪ್ರಥಮ ತುಳು ಡಿಪ್ಲೊಮಾ ಕೋರ್ಸ್ ಈ ಶೈಕ್ಷಣಿಕ ವರ್ಷದಿಂದ ಕಾಸರಗೋಡಿನಲ್ಲಿ ಆರಂಭವಾಗುತ್ತಿದೆ.ಮಲೆಯಾಳಿಗರ ನಾಡಿನಲ್ಲಿ ಆರಂಭಗೊಳ್ಳುವ ತುಳುನಾಡಿನ ಏಕೈಕ ತುಳು ಡಿಪ್ಲೊಮಾ ಕೋರ್ಸ್ ಇದಾಗಿದೆ. ಮಂಗಳೂರು ವಿಶ್ವವಿದ್ಯಾಲಯ ಈ ಹಿಂದೆ ತುಳು ಡಿಪ್ಲೊಮಾ ಕೋರ್ಸ್ ಆರಂಭಿಸಿತ್ತಾದರೂ ಅದರ ಒಂದು ಬ್ಯಾಚ್ ಮಾತ್ರವೇ ಕಾರ್ಯಾಚರಿಸಿತ್ತು. ಬಳಿಕ ತಾಂತ್ರಿಕ ಕಾರಣಗಳಿಂದ ಕೋರ್ಸ್ ನಿಂತಿತ್ತು.
      ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಸಮಸ್ಯೆಯನ್ನು ಇತ್ಯರ್ಥಗೊಳಿಸಿ ನ್ಯಾಯ ಒದಗಿಸಲು ಕಾಸರಗೋಡು-ದಕ್ಷಿಣ ಕನ್ನಡವನ್ನೊಳಗೊಂಡ ತುಳುನಾಡು ಎಂಬ ನೂತನ ರಾಜ್ಯವನ್ನು ರಚಿಸಬೇಕು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿರುವಾಗ ತುಳು ಡಿಪ್ಲೊಮಾ ಕೋರ್ಸ್ ಆರಂಭಿಸಿರುವುದು ತುಳುನಾಡಿಗರಿಗೆ ಸಂತಸದ ಸುದ್ದಿ.
        ಶೈಕ್ಷಣಿಕವಾಗಿ ಕನ್ನಡ ಮಾಧ್ಯಮದಲ್ಲಿ ಕಲಿತ ಮನೆಮಾತಾಗಿ ತುಳು ಭಾಷೆಯನ್ನು ಮಾತನಾಡುವ ಸಾವಿರಾರು ತುಳುವರು ಕಾಸರಗೋಡಿನಲ್ಲಿದ್ದಾರೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕಿನ ಅರ್ಧದಷ್ಟು ಜನಸಂಖ್ಯೆ ತುಳು ಮಾತನಾಡುವವರಾಗಿದ್ದಾರೆ. ಇಂದಿಗೂ ಈ ಎರಡು ತಾಲೂಕಿನ ಅವಿದ್ಯಾವಂತರಾದ ಕೊಂಕಣಿ, ಮರಾಠಿ, ಬ್ಯಾರಿ ಭಾಷೆ ಮಾತನಾಡುವವರು ತುಳು ಭಾಷೆಯಲ್ಲಿ ವ್ಯವಹಸರಿಸಲು ಬಲ್ಲವರಾಗಿದ್ದಾರೆ. ಅಷ್ಟರ ಮಟ್ಟಿಗೆ ತುಳು ಈ ಪ್ರದೇಶದಲ್ಲಿ ಪ್ರಾಧಾನ್ಯತೆ ಪಡೆದಿದೆ.
     ರಾಷ್ಟ್ರ ಸಂವಿಧಾನದ ಎಂಟನೇ ಪರಿಚ್ಚೇಧದಲ್ಲಿ ತುಳು ಭಾಷೆಯನ್ನು ಸೇರಿಸಬೇಕು ಎಂಬ ಬೇಡಿಕೆಯ ನಡುವೆ ತುಳುವಿಗಾಗಿ ಪ್ರತ್ಯೇಕ ತರಗತಿಯೊಂದು  ಆರಂಭಗೊಳ್ಳುತ್ತಿರುವುದು ವಿಶೇಷವಾಗಿದೆ. ಇದರಿಂದ ಪ್ರಾಚೀನ ತುಳುಸಾಹಿತ್ಯ, ತುಳು ಭಾಷೆಗೆ ಜೀವ ತುಂಬಿದಂತಾಗುವುದು. ಕಾಸರಗೋಡಿನವರಿಗೆ ಮಾತ್ರವಲ್ಲದೆ ಮಂಗಳೂರು, ಪುತ್ತೂರು ಮೊದಲಾದ ದಕ್ಷಿಣ ಕನ್ನಡದವರಿಗೆ ಕೂಡ ತುಳು ಡಿಪ್ಲೊಮಾ ಕೋರ್ಸ್ ಆರಂಭಗೊಂಡಿರುವುದು ಹೊಸ ಅವಕಾಶ ಲಭಿಸಿದಂತಾಗಿದೆ.
      ಎಲ್ಲಿ ಇದು:
    ಕಾಸರಗೋಡು ವಿದ್ಯಾನಗರದ ಚಾಲದಲ್ಲಿರುವ ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗದಲ್ಲಿ ಕನ್ನಡ ಎಂಫಿಲ್ ಕೋರ್ಸ್ ಕಾರ್ಯಾಚರಿಸುತ್ತಿದೆ. ಪ್ರಥಮ ತಂಡ ಪ್ರವೇಶಾತಿ ಪ್ರಕ್ರಿಯೆ ಈವಾರಾಂತ್ಯ ಕೊನೆಗೊಳ್ಳಲಿದೆ.
      ಹೇಗೆ ಬಂತು:
     ಕಣ್ಣೂರು ವಿವಿ ಕಾಸರಗೋಡಿನಲ್ಲಿ ತುಳು ಡಿಪ್ಲೊಮಾ ಕೋರ್ಸ್ ಆರಂಭಿಸಲು ಮುಂದಾಗಿದ್ದು ಶ್ಲಾಘನೀಯ. 2015ರಲ್ಲಿ ಕಾಸರಗೋಡು ಕ್ಯಾಂಪಸ್‍ನ ಭಾರತೀಯ ಭಾಷಾ ಅಧ್ಯಯನಾಂಗ ವಿಭಾಗದ ಸಂಯೋಜಕರಾಗಿ ಸೇರ್ಪಡೆಗೊಂಡ ಡಾ. ಯು. ಮಹೇಶ್ವರಿ ಅವರು ಕಾಸರಗೋಡಿನಲ್ಲಿ ತುಳು ಡಿಪ್ಲೊಮಾ ಕೋರ್ಸ್ ಆರಂಭಿಸುವಂತೆ ವಿವಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಮುಂದುವರಿಸದೆ ಇರುವಾಗ ತುಳು ಡಿಪ್ಲೊಮಾ ಕೋರ್ಸ್‍ನ ಸಾಧ್ಯತೆಗಳ ಬಗ್ಗೆ ಅದರ ಅಗತ್ಯದ ಬಗ್ಗೆ ಸಮಗ್ರ ಅಧ್ಯಯನ ವರದಿಯನ್ನು ವಿವಿಗೆ ಸಲ್ಲಿಸಿದ್ದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಪರಿಸರದಲ್ಲಿ ನಿರ್ಮಾಣ ಗೊಂಡ ನೂತನ ಕಟ್ಟಡದಲ್ಲಿ ಕೋರ್ಸ್ ಆರಂಭಿಸಲು ಪ್ರಸ್ತಾವನೆಯಲ್ಲಿ ಆಗ್ರಹಿಸಲಾಗಿತ್ತು. ಆದರೆ ನೂತನ ಕಟ್ಟಡ ಉದ್ಘಾಟನೆ ವಿಳಂಬಗೊಂಡಿತ್ತು. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಅಗತ್ಯ ಸ್ಥಳಾವಕಾಶ ಇಲ್ಲದಿರುವುದರಿಂದ ಇಲ್ಲಿ ಹೆಚ್ಚುವರಿ ಕೋರ್ಸ್ ಆರಂಭಿಸಲು ಸಾಧ್ಯವಾಗಲಿಲ್ಲ.
      2018ರಲ್ಲಿ ವಿವಿಯು ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗವನ್ನು ಚಾಲದ ಕ್ಯಾಂಪಸ್‍ಗೆ ಸ್ಥಳಾಂತರಿಸಿದ್ದು, ಡಾ. ರಾಜೇಶ್ ಬೆಜ್ಜಂಗಳ ಅವರನ್ನು ನಿರ್ದೇಶಕರಾಗಿ ನೇಮಿಸಿತು. ತುಳು ಡಿಪ್ಲೊಮಾ ಕೋರ್ಸ್ ಆರಂಭಿಸುವ ಪ್ರಯತ್ನವನ್ನು ಡಾ. ರಾಜೇಶ್ ಬೆಜ್ಜಂಗಳ ಮುಂದುವರಿಸಿದರು. ಚಾಲದಲ್ಲಿ ಅಗತ್ಯ ಸ್ಥಳಾವಕಾಶ ಇರುವುದು ಇದಕ್ಕೆ ಅನುಕೂಲವಾಯಿತು.
       ಏನಿದು ತುಳು ಡಿಪ್ಲೊಮಾ?:
     ಒಂದು ವರ್ಷದ ಕೋರ್ಸ್ ಇದಾಗಿದೆ. ರೆಗ್ಯುಲರ್ ಕೋರ್ಸ್‍ಗೆ ತೆರಳುವವರು ಕೂಡ ತುಳು ಡಿಪ್ಲೊಮಾ ಕೋರ್ಸ್‍ನ್ನು ಮಾಡಬಹುದು. ತುಳು ಭಾಷೆ, ಪ್ರಾಚೀನ ಸಾಹಿತ್ಯ, ಪತ್ರಿಕೋದ್ಯಮ ಮೊದಲಾದುವುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತರಗತಿ ನಡೆಯಲಿದೆ. ಆರಂಭಿಕ ಪ್ರವೇಶ ಶುಲ್ಕ 250 ಪಾವತಿಸಿ ಬಳಿಕ ತರಗತಿ ಆರಂಭದ ಬಳಿಕ 4700 ರಷ್ಟು ರೂ.ಗಳನ್ನು ಪಾವತಿಸಿ ತರಗತಿಗೆ ಹಾಜರಾಗಬಹುದಾಗಿದೆ.
     ಮೊದಲ ಹೆಜ್ಜೆ: ಸಂಶೋಧನೆ ಹಾಗೂ ಪ್ರಾದೇಶಿಕ ಅಭಿವೃದ್ಧಿ ಅಧ್ಯಯನ ಯೋಜನೆಗಳಿಗೆ ಪ್ರಾಧಾನ್ಯತೆ ನೀಡಿ ಭಾಷೆಗಳ ಸಂರಕ್ಷಣೆ ಉದ್ದೇಶಿಸಿರುವ ಯೋಜನೆಗಳನ್ನು ಜಾರಿಗೊಳಿಸುವುದಕ್ಕಾಗಿ ಬಹುಭಾಷಾ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆರಂಭಿಸಲು ವಿವಿ ತೀರ್ಮಾನಿಸಿತ್ತು. ಇದರ ಮೊದಲ ಹೆಜ್ಜೆ ಎಂಬಂತೆ ತುಳು ಡಿಪ್ಲೊಮಾ ಕೋರ್ಸ್ ಆರಂಭವಾಗುತ್ತಿದೆ.
      ಏನಿದು ಬಹುಭಾಷಾ ಸಾಂಸ್ಕೃತಿಕ ಅಧ್ಯಯನ ಕೇಂದ್ರ?:
     ಭಾಷಾ ಸಂಸ್ಕೃತಿಯ ವೈವಿಧ್ಯತೆ ಹಾಗೂ ಬಹುಸ್ವರಗಳಿಂದ ಸಂಪನ್ನವಾದ ಜಿಲ್ಲೆಯ ಸಾಂಸ್ಕೃತಿಕ ಜೀವನದ ಅಂಗವಾದ ಮಲೆಯಾಳ, ತುಳು, ಕನ್ನಡ ಭಾಷೆಗಳಲ್ಲಿ ಸಂಶೋಧನಾ ಕೇಂದ್ರದಲ್ಲಿ ಸರ್ಟಿಫಿಕೆಟ್, ಡಿಪ್ಲೊಮಾ ಕೋರ್ಸ್‍ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.
      ಈ ಮೂರು ಭಾಷೆಗಳ ಬೆಳವಣಿಗೆ ಪರಸ್ಪರ ಆಶ್ರಯಿಸಿ ಆಗಿರುವುದರಿಂದ ಅನುಭವಸ್ಥರ ಮಧ್ಯೆ ಈ ಭಾಷೆಗಳ ಕುರಿತು ಸಾಮಾನ್ಯ ಧಾರಣೆ ಇರಬೇಕು ಎಂಬ ಅನಿವಾರ್ಯತೆ ಮುಂದಿರಿಸಿಕೊಂಡು ಸರ್ಟಿಫಿಕೆಟ್, ಡಿಪ್ಲೊಮಾ ಕೋರ್ಸ್‍ಗಳನ್ನು ಆರಂಭಿಸುವ ಉದ್ದೇಶದೊಂದಿಗೆ ಸಂಶೋಧನಾ ಕೇಂದ್ರ ನಿರ್ಮಿಸಲು ಯೋಜನೆ ಸಿದ್ದಪಡಿಸಲಾಗಿದೆ. 
        ಜಾನಪದ ಕಲೆಗಳ ನಾಡಾದ ಜಿಲ್ಲೆಯಲ್ಲಿ ತೈಯ್ಯಂ, ಯಕ್ಷಗಾನ, ಪೂರಕ್ಕಳಿ, ಕೋಲ್ಕಳಿ, ಅಲಾಮಿಕಳಿ, ಮಂಗಲಂಕಳಿ ಮತ್ತಿತರ ಕಲಾರೂಪಗಳ ಸಾಂಸ್ಕೃತಿಕ ಸವಿಶೇಷತೆಗಳನ್ನು ಅಧಿಕೃತವಾಗಿ ಅಧ್ಯಯನ ನಡೆಸಿ ಮೌಲ್ಯಮಾಪನ ಮಾಡಲಿರುವ ಸ್ಟಡಿ ಸೆಂಟರ್ ಈ ಸಂಶೋಧನಾ ಕೇಂದ್ರದ ಇನ್ನೊಂದು ವಿಶೇಷತೆಯಾಗಿದೆ. ಇತಿಹಾಸದ ಅವಶೇಷಗಳಾದ ಪ್ರಾಚೀನ ವಸ್ತುಗಳ ಸಂಗ್ರಹಣೆ ಹಾಗೂ ಸಂರಕ್ಷಣೆಯನ್ನು ಸಂಶೋಧನಾ ಕೇಂದ್ರದ ಮೂಲಕ ಉದ್ದೆ?ಶಿಲಾಗಿದೆ. ಜಿಲ್ಲೆಯ ನಾನಾ ಕಡೆಗಳಿಂದ ಇಂತಹ ಹಲವಾರು ಶಿಲಾಶಾಸನಗಳು, ತಾಳೆಗರಿಗಳನ್ನು ಗುರುತಿಸಲಾಗುವುದು. ಪ್ರಾಚೀನ ವಸ್ತುಗಳು ಕೈವಶವಿರುವ ವ್ಯಕ್ತಿಗಳು ಅವುಗಳನ್ನು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದಲ್ಲಿ ಅವನ್ನು ಸ್ವೀಕರಿಸಲಾಗುವುದು ಎಂದು ಕೇಂದ್ರದ ನಿರ್ಮಾಣ ಸಂದರ್ಭದಲ್ಲಿ ಅಧಿಕಾರಿಗಳು ಹೇಳಿದ್ದರು.
      ಪ್ರದೇಶದ ಜನತೆಯ ಜೀವನ ಸಮಸ್ಯೆಗಳನ್ನು ಮನಗಂಡು ಅಧ್ಯಯನ ನಡೆಸುವುದು, ಚರ್ಚಿಸುವುದು, ಜೀವನ ದಾರಿಗಳನ್ನು ತಿಳಿಯಪಡಿಸುವುದು ಮತ್ತಿತರ ಉದ್ದೇಶಗಳೊಂದಿಗೆ ನಿರ್ಮಿಸುವ ಪ್ರಾದೇಶಿಕ ಅಧ್ಯಯನ ಕೇಂದ್ರ ಇದಾಗಿದೆ.
       ಮಲೆಯಾಳ, ಕನ್ನಡ, ತುಳು, ಕೊಂಕಣಿ, ಉರ್ದು, ಬ್ಯಾರಿ, ಮರಾಠಿ ಭಾಷೆಗಳಿಗೆ ಸಂಬಂಧಪಟ್ಟ ಕೃತಿಗಳು, ತಾಳೆಗರಿ ಗ್ರಂಥಗಳು, ಮಲೆಯಾಳದ ಮಹಾಕವಿ ಪಿ. ಕುಞÂ್ಞರಾಮನ್ ನಾಯರ್, ಕುಟ್ಟಮತ್ತ್, ವಿದ್ವಾನ್ ಪಿ. ಕೇಳುನಾಯರ್, ಕನ್ನಡದ ಗೋವಿಂದ ಪೈ ಮತ್ತಿತರ ಏಳು ಭಾಷೆಗಳ ಮಹಾ ಪ್ರತಿಭೆಗಳ ಛಾಯಾಚಿತ್ರಗಳು, ಯಕ್ಷಗಾನ ಬಯಲಾಟ ಮತ್ತಿತರ ವೇಷ ಭೂಷಣಗಳು, ಏಳು ಭಾಷಾ ಸಂಸ್ಕೃತಿಗಳ ಆಚರಣೆಗಳು ಮತ್ತು ಉತ್ಸವಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳು, ಮಾಹಿತಿಗಳು ಮೊದಲಾದುವು ಈ ಕೇಂದ್ರದಲ್ಲಿ ಸಜ್ಜುಗೊಳಿಸುವ ಯೋಜನೆ ಹಾಕಲಾಗಿದೆ.
      ಸಪ್ತ ಭಾಷೆಗಳ ಸಾಂಸ್ಕೃತಿಕ-ಸಾಮಾಜಿಕ ಕಾರ್ಯಕರ್ತರು ಒಗ್ಗೂಡುವ ಕೇಂದ್ರದಲ್ಲಿ ವಾರದಲ್ಲಿ ಒಂದು ದಿನ ಸಂವಾದಗಳು ನಡೆಯಲಿವೆ. ಏಳು ಭಾಷೆಗಳನ್ನು ಒಂದೇ ಸಮುಚ್ಛಯದಲ್ಲಿರಿಸಿ ಸಂದರ್ಶಕರು ಒಂದೇ ಸ್ಥಳದಲ್ಲಿ ನೋಡಬಹುದಾದ ವಸ್ತು ಪ್ರದರ್ಶನಾಲಯವನ್ನು ಕಲ್ಪಿಸುವುದು, ಸಂಶೋಧನೆಗೆ ಸಹಕರಿಸುವುದು ಕೇಂದ್ರದ ಉದ್ದೇಶವಾಗಿದೆ.
      ಅಭಿಮತ:
     ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಭಾಷಾಂತರ ಮೊದಲಾದವುಗಳನ್ನು ಆಧಾರಾವಾಗಿಟ್ಟುಕೊಂಡು ತುಳು ಡಿಪ್ಲೊಮಾ ಕೋರ್ಸ್ ನಡೆಸಲಾಗುತ್ತದೆ. ಇದಕ್ಕಾಗಿ ಸಿಲೆಬಸ್‍ನ್ನು  ತಯಾರಿಗೊಳಿಸಲಾಗಿದೆ. ತುಳು ಡಿಪ್ಲೊಮಾ ಕೋರ್ಸ್ ಕಲಿಯುವ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ ಹೀಗೆ ಮೂರು ಭಾಷೆಗಳ ಹಿಡಿತ ಬರುವಂತೆ ತರಗತಿಗಳು ನಡೆಯಲಿವೆ. ಈಗಾಗಲೇ 24 ಮಂದಿ ಆಸಕ್ತರು ಡಿಪ್ಲೊಮಾ ತರಗತಿಗೆ ಅರ್ಜಿಸಲ್ಲಿಸಿದ್ದು, ಒಟ್ಟು 30 ಸೀಟು ಲಭ್ಯವಿದೆ. ಈವಾರಾಂತ್ಯ ಮಿಕ್ಕುಳಿದವರು ಪ್ರವೇಶಾತಿ ಹೊಂದಲು ಸಾಧ್ಯವಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬೇಕು.
                       -ಡಾ. ರಾಜೇಶ್ ಬೆಜ್ಜಂಗಳ, ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗ ನಿರ್ದೇಶಕ. ಚಾಲ. ಕಣ್ಣೂರು ವಿವ ಕ್ಯಾಂಪಸ್ ಕಾಸರಗೋಡು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries