ಇಸ್ಲಾಮಾಬಾದ್: ಭಾರತದ ಜೊತೆ ದ್ವಿಪಕ್ಷೀಯ ಮಾತುಕತೆ ಸಾಧ್ಯತೆಯ ಬಗ್ಗೆ ಇನ್ನೂ ಮಾತನಾಡುವವರು ಮೂರ್ಖರು, ಅಕ್ಟೋಬರ್-ನವೆಂಬರ್ ವೇಳೆಗೆ ಪೂರ್ಣ ಪ್ರಮಾಣದ ಯುದ್ಧವೇ ನಡೆಯಲಿದೆ. ಹೀಗಂದವರು ಬೇರಾರೂ ಅಲ್ಲ, ಪಾಕಿಸ್ತಾನದ ಸಚಿವ.
ರಾವಲ್ಪಿಂಡಿಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್, ಭಾರತದ ವಿರುದ್ಧ ಅಂತಿಮ ಯುದ್ಧ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಕಾಶ್ಮೀರ ವಿವಾದವನ್ನು ಬಗೆಹರಿಸಬೇಕೆಂಬ ಉದ್ದೇಶ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಇದ್ದಿದ್ದರೆ ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಣೆಗೆ ಮುಂದಾಗುತ್ತಿತ್ತು ಎಂದೂ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರ ವಿಷಯದಲ್ಲಿ ಚೀನಾ ಎಂದಿಗೂ ಪಾಕಿಸ್ತಾನದ ಪರವಾಗಿಯೇ ಇರುತ್ತದೆ ಎಂದಿರುವ ಸಚಿವ, ಮುಸ್ಲಿಂ ಬಾಹುಳ್ಯವಿರುವ ರಾಷ್ಟ್ರಗಳು ಕಾಶ್ಮೀರದ ವಿಷಯವಾಗಿ ಮೌನಕ್ಕೆ ಶರಣಾಗಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


