ಪೆರ್ಲ:ಮೂಲಭೂತ ಸೌಕರ್ಯಗಳಲ್ಲಿ ಸಂಚಾರ ವ್ಯವಸ್ಥೆ ಅತಿ ಪ್ರಮುಖ ಎಂಬುದನ್ನು ಮನಗಂಡಿದ್ದ ಮಂಜೇಶ್ವರ ಶಾಸಕರಾಗಿದ್ದ ದಿ.ಅಬ್ದುಲ್ ರಜಾಕ್ ಅವರು ತನ್ನ ಮಂಡಲದ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿದ್ದು ಜಿಲ್ಲೆಯಲ್ಲೇ ಅತಿ ಹೆಚ್ಚು ಮೆಕ್ಕಡಾಂ ಡಾಮರೀಕರಣ ನಡೆಸಿ ದಾಖಲೆ ನಿರ್ಮಿಸಿದ್ದಾರೆ ಎಂದು ಕಾಸರಗೋಡು ಜಿ.ಪಂ.ಅಧ್ಯಕ್ಷ ಎ.ಜಿ.ಸಿ.ಬಶೀರ್ ಹೇಳಿದರು.
ಮಂಜೇಶ್ವರ ಶಾಸಕ ದಿ.ಅಬ್ದುಲ್ ರಜಾಕ್ ಅವರ 2018-19ನೇ ಸಾಲಿನ ಮಂಜೇಶ್ವರ ಮಂಡಲ ಅಭಿವೃದ್ಧಿ ನಿಧಿಯಲ್ಲಿ ಮಂಜೂರಾದ ಎಣ್ಮಕಜೆ ಗ್ರಾ.ಪಂ.7ನೇ ವಾರ್ಡ್ ದಂಬೆಕಲ್ಲು-ಕುತ್ತಾಜೆ ಪಂಚಾಯಿತಿ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಯನ್ನು ಸೋಮವಾರ ಸಂಜೆ ಉದ್ಘಾಟಿಸಿದ ಬಳಿಕ ಕುತ್ತಾಜೆ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ದಿ.ಅಬ್ದುಲ್ ರಜಾಕ್ ಅವರು ಮಂಜೇಶ್ವರ ಮಂಡಲದಲ್ಲಿ ಅತಿ ಹೆಚ್ಚು ಯೋಜನೆಗಳನ್ನು ಸಾಕಾರಗೊಳಿಸುವ ಕನಸು ಕಂಡಿದ್ದರು.ರಾಜಕೀಯ ಹಿತಾಸಕ್ತಿಗಳನ್ನು ಬದಿಗಿರಿಸಿ ತನ್ನ ಮಂಡಲದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಜನಪ್ರಿಯ ಶಾಸಕರೆನಿಸಿದ್ದರು.ಅವರ ಅಗಲಿಕೆ ಮಂಜೇಶ್ವರ ಮಂಡಲದ ಜನರಿಗೆ ತುಂಬಲಾರದ ನಷ್ಟ ಎಂದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ. ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ ಎಂಬುದು ಕೇವಲ ಬಾಯಿಮಾತು ಎಂದು ಹೇಳಲಾಗುತ್ತಿದ್ದರೂ ಮಂಜೇಶ್ವರ ಶಾಸಕಾರಾಗಿದ್ದ ದಿ.ಅಬ್ದುಲ್ ರಜಾಕ್ ಅವರು ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದರು.ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಕೋಟ್ಯಾಂತರ ಮಂಜೂರು ಮಾಡಿದ್ದರೂ ಯೋಜನೆಗಳ ಅನುಷ್ಠಾನ ನಡೆಯುತ್ತಿರುವಾಗ ಅವರಿಲ್ಲದಿರುವುದು ಬೇಸರದ ವಿಷಯ. ಇದೀಗ ಉದ್ಘಾಟನೆ ನಡೆದ ರಸ್ತೆಯ ಕಾಂಕ್ರೀಟ್ ಕಾಮಗಾರಿ ಆದಷ್ಟು ಬೇಗ ನಡೆಯಲು ಫಲಾನುಭವಿಗಳ ಸಹಕಾರ ಅಗತ್ಯ.ಇಳಂತೋಡಿ ಸೇತುವೆಯ ಕಾಲ್ದಾರಿ ಕುಸಿದಿರುವುದನ್ನು ಪಂಚಾಯಿತಿ ಆಡಳಿತ ಸಮಿತಿ ನೇತೃತ್ವದಲ್ಲಿ ಪರಿಶೀಲಿಸಲಾಗಿದೆ.ಕಾಲು ದಾರಿ ಹಾಗೂ ಶಿಥಿಲಾವಸ್ಥೆಯ ಸೇತುವೆಗಳನ್ನು ದುರಸ್ತಿ ನಡೆಸಲು ಪಂಚಾಯಿತಿ ಸಾಧ್ಯವಾಗುವ ರೀತಿಯ ಪರಿಹಾರ ಮಾರ್ಗ ಕಂಡುಕೊಳ್ಳಲು ಹಾಗೂ ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುವ ಭರವಸೆ ನೀಡಿದರು.
ಗ್ರಾ.ಪಂ. ಸದಸ್ಯೆ ಶಶಿಕಲಾ ವೈ., ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ., ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ. ಶುಭ ಹಾರೈಸಿದರು.ಪಿ.ಎಸ್. ಕಡಂಬಳಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.ಪಂಚಾಯಿತಿ ಸದಸ್ಯ ಹನೀಫ್ ನಡುಬೈಲು, ಸಿದ್ದಿಕ್ ವಳಮೊಗರು ಉಪಸ್ಥಿತರಿದ್ದರು.
ಪಂಚಾಯಿತಿ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಸ್ವಾಗತಿಸಿ,ನರಸಿಂಹ ಎಸ್.ಬಿ.ನಿರೂಪಿಸಿ, ವಂದಿಸಿದರು.


