ಬದಿಯಡ್ಕ: ಸನಾತನ ಭಾರತೀಯ ಸಂಸ್ಕøತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಕಾರವಂತನಾಗಿ ಬಾಳಿಬದುಕಲು ನಾವು ಪ್ರಯತ್ನಿಸಬೇಕು. ಶ್ರೀಕೃಷ್ಣ ಜನ್ಮಾಷ್ಟಮಿಯಂತಹ ಹಬ್ಬಗಳ ಆಚರಣೆಯ ಮೂಲಕ ಮುಂದಿನ ಜನಾಂಗಕ್ಕೆ ಧಾರ್ಮಿಕ ವಿಚಾರಗಳನ್ನು ತಲುಪಿಸುವಂತಹ ಕಾರ್ಯದಲ್ಲಿ ಸಂಘಟನೆಗಳು ತೊಡಗಿಕೊಳ್ಳಬೇಕು. ಶ್ರೀಕೃಷ್ಣನ ಜೀವನ ಚರಿತ್ರೆಯೇ ಉತ್ತಮ ಸಂದೇಶವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾಸರಗೋಡು ತಾಲೂಕು ಕಾರ್ಯವಾಹಕ್ ಪವಿತ್ರನ್ ಕೆ.ಕೆ. ಪುರಂ ಹೇಳಿದರು.
ನೀರ್ಚಾಲು ಸಮೀಪದ ಬೇಳ ರತ್ನಗಿರಿ ಶ್ರೀ ಕುದುರೆಕ್ಕಾಳಿ ಕ್ಷೇತ್ರ ಪರಿಸರದಲ್ಲಿ ಓಂಕಾರ್ ಫ್ರೆಂಡ್ಸ್ ಕ್ಲಬ್ ಮತ್ತು ಓಂಕಾರ್ ಬಾಲಗೋಕುಲ ಸಮಿತಿಯ ಆಶ್ರಯದಲ್ಲಿ ಜರಗಿದ ಶ್ರೀಕೃಷ್ಣ ಜನ್ಮಾಷ್ಮಮಿಯ ಸಮಾರೋಪ ಸಮಾರಂಭದಲ್ಲಿ ಅವರು ಧಾರ್ಮಿಕ ಉಪನ್ಯಾಸವನ್ನು ನೀಡಿದರು.
ಭಾರತೀಯ ಸಂಸ್ಕøತಿಯಲ್ಲಿ ಶ್ರೀಕೃಷ್ಣ ಮತ್ತು ಶ್ರೀರಾಮ ಅವರ ತ್ಯಾಗ ಮತ್ತು ಜೀವನ ಸಾಹಸವೇ ವಿಶ್ವಕ್ಕೆ ಮಾದರಿಯಾಗಿದೆ. ಬಾಲಲೀಲೆಗಳು, ತುಂಟಾಟಗಳನ್ನು ಪ್ರತೀ ಮಕ್ಕಳಲ್ಲಿಯೂ ಕಂಡು ನಾವು ಆನಂದಿಸಬೇಕು. ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ವಿದ್ಯಾರ್ಥಿಗಳು ಸ್ಪರ್ಧಾಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿ ಸ್ಪರ್ಧೆಯಲ್ಲೂ ಪಾಲ್ಗೊಂಡು ಸಾಧನೆಯನ್ನು ಮಾಡಬೇಕು. ಈ ನಿಟ್ಟಿನಲ್ಲಿ ಬಾಲಗೋಕುಲಗಳು ಕಾರ್ಯಪ್ರವೃತ್ತವಾಗಿದ್ದು, ತಮ್ಮ ಮಕ್ಕಳನ್ನು ತೊಡಗಿಸಿಕೊಳ್ಳಲು ಹೆತ್ತವರು ಕಾಳಜಿವಹಿಸಬೇಕು ಎಂದರು.
ನಿವೇದಿತಾ ಸೇವಾಮಿಶನ್‍ನ ಪ್ರಧಾನ ಕಾರ್ಯದರ್ಶಿ ಗಣೇಶ್ ಕೃಷ್ಣ ಅಳಕ್ಕೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಒಂದು ಸಂಘಟನೆಯನ್ನು ಕಟ್ಟಿಬೆಳೆಸುವಲ್ಲಿ ಊರವರ ಶ್ರಮ ಶ್ಲಾಘನೀಯವಾಗಿದೆ. ಸಂಘಟನೆಗಳ ನಿರಂತರ ಕಾರ್ಯಚಟುವಟಿಕೆಗಳು ಊರಿನಲ್ಲಿ ಜನರು ಒಂದುಗೂಡಲು ಸಹಕಾರಿಯಾಗುತ್ತದೆ ಎಂದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಸೌಖ್ಯದಿಂದ ಬಳಲುತ್ತಿದ್ದ ಸಂಜೀವಿನಿ ರತ್ನಗಿರಿ ಇವರಿಗೆ ಕ್ಲಬ್ಬಿನ ಅಧ್ಯಕ್ಷ ಶಿವರಾಮ ಮೊಳೆಯಾರು ಇವರ ಮುಖಾಂತರ ಧನಸಹಾಯ ನೀಡಲಾಯಿತು. ಬೆಳಗ್ಗೆ ಶ್ರೀ ಕುದುರೆಕ್ಕಾಳಿ ಭಗವತಿ ಕ್ಷೇತ್ರದ ಅರ್ಚಕರು ದೀಪಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದರು. ಬಳಿಕ ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಅಧ್ಯಾಪಕ ಸದಾಶಿವ ಬೇಳ, ಶಿವರಾಮ ಮೆಣಸಿನಪಾರೆ, ನಾರಾಯಣ ಅಡ್ಕತ್ತಬೈಲ್ ಶುಭಾಶಂಸನೆಗೈದರು. ಚಂದ್ರಾವತಿ ಅಳಕ್ಕೆ ವಂದಿಸಿದರು.


