ಬದಿಯಡ್ಕ: ವಿದ್ಯಾರ್ಥಿಯು ಕೇವಲ ಅಂಕ ಗಳಿಕೆಯತ್ತ ಗಮನಹರಿಸದೆ ಸಮಾಜದೊಂದಿಗೆ ಬೆರೆತು ಕಷ್ಟ ಸಹಿಷ್ಣುತೆಯನ್ನು ಅರಿತು ಬಾಳಾಬೇಕೆಂದು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಪೆÇ್ರ. ಮೊಹಮ್ಮದ್ ಅಲಿ ಅವರು ಅಭಿಪ್ರಾಯ ಪಟ್ಟರು.
ಬೇಳದ ಸೈಂಟ್ ಮೇರಿಸ್ ಕಾಲೇಜು ಇದರ ನೂತನ ಎನ್ ಎಸ್ ಎಸ್ ಘಟಕಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಎನ್ನೆಸ್ಸೆಸ್‍ನಲ್ಲಿ ಪಾಲ್ಗೊಳ್ಳುವುದರಿಂದ ಪ್ರಾಪ್ತವಾಗುವುದು ಎಂದು ಅವರು ನುಡಿದರು.
ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳ ಸಂಚಾಲಕ ಸ್ವಾಮಿ ಜೋನ್ ವಾಸ್‍ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಎಂಬ ಅಹಂ ತೊರೆದು ನಾವು ಎನ್ನುವ ಸಾರ್ವಕಾಲಿಕ ಸತ್ಯವನ್ನು ಅರಿತು ಬಾಳುವುದು ಮಾನವ ಜೀವನದ ಲಕ್ಷ್ಯವಾಗಬೇಕು. ಎನ್ನೆಸ್ಸೆಸ್‍ನ ಧ್ಯೇಯವಾಕ್ಯವೂ ಇದನ್ನೇ ಪ್ರತಿ ಪಾದಿಸುತ್ತದೆಂದು ಅವರು ತಿಳಿಸಿದರು.
ಇದೇ ವೇಳೆ ಸೈಂಟ್ ಮೇರಿಸ್ ಕಾಲೇಜಿನ ನೂತನ ವೆಬ್‍ಸೈಟ್‍ನ್ನು ಉದ್ಘಾಟಿಸಲಾಯಿತು. ಬಳಿಕ ವೆಬ್‍ಸೈಟ್‍ನ ಉಸ್ತುವಾರಿ ವಹಿಸಿರುವ ಉಪಾನ್ಯಾಸಕಿ ಜಲಪುಷ್ಪ ಅವರು ಒಂದು ವಿದ್ಯಾಸಂಸ್ಥೆಗೆ ವೆಬ್‍ಸೈಟ್‍ನ ಉಪಯೋಗದ ಕುರಿತು ವಿವರಿಸಿದರು. ಉಪಪ್ರಾಂಶುಪಾಲ ವಿನ್ಸೆಂಟ್ ಡಿಸೋಜಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಸ್ವಾಮಿ ಆಶೋಕ್ ರಾಯನ್ ಕ್ರಾಸ್ತ ಅವರು ಸ್ವಾಗತಿಸಿ, ಎನ್ನೆಸ್ಸೆಸ್ ಸಂಯೋಜಕ ನಾಗರಾಜ್ ಎಮ್. ಎಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.


