ಕಾಸರಗೋಡು: ಬಿರುಸಿನ ಮಳೆಯ ಸಂತ್ರಸ್ತರಿಗಾಗಿ ಜಿಲ್ಲಾಡಳಿತೆ ನಡೆಸುತ್ತಿರುವ ಪುನರ್ವಸತಿ ಅಂಗವಾಗಿರುವ ಸಾರ್ವಜನಿಕ ದೇಣಿಗೆ ಸ್ವೀಕಾರ ಕೇಂದ್ರವಾಗಿ ಇನ್ನು ಮುಂದೆ ಪಡನ್ನಕ್ಕಾಡ್ ಕೃಷಿ ಕಾಲೇಜಿನ ಕಲೆಕ್ಷನ್ ಸೆಂಟರ್ ಮಾತ್ರ ಚಟುವಟಿಕೆ ನಡೆಸಲಿದೆ.
ಜಿಲ್ಲೆಯಿಂದ ಮತ್ತು ಹೊರಜಿಲ್ಲೆಗಳಿಂದ ಸಹೃದಯರು ಧಾರಾಳ ಕೊಡುಗೆಗಳೊಂದಿಗೆ ಮುಂದೆ ಬರುತ್ತಿದ್ದಾರೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆದೇಶ ಪ್ರಕಾರ, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರ ಮೇಲ್ನೋಟದಲ್ಲಿ, ಸಹಾಯಕ ಜಿಲ್ಲಾಧಿಕಾರಿ(ಚುನಾವಣೆ) ಎ.ಕೆ.ರಮೇಂದ್ರನ್ ಅವರ ನೇತೃತ್ವದಲ್ಲಿ ಕಲೆಕ್ಷನ್ ಸೆಂಟರ್ ಚಟುವಟಿಕೆ ನಡೆಸುತ್ತಿದೆ.
ಹೊಸದುರ್ಗ ತಾಲೂಕು ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿದ್ದ ಕಲೆಕ್ಷನ್ ಸೆಂಟರ್ ನಲ್ಲೂ ಈ ನಿಟ್ಟಿನಲ್ಲಿ ಸಮಾಜದಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭಿಸಿತ್ತು. ಹಳೆ ವಿದ್ಯಾರ್ಥಿ ಸಂಘಟನೆಗಳು, ಸ್ವಯಂಸೇವಾ ಸಂಘಟನೆಗಳು, ವ್ಯಕ್ತಿಗಳು ಕೊಡುಗೆ ನೀಡುತ್ತಿರುವ ಪ್ರಕ್ರಿಯೆ ಮುಂದುವರಿಯುತ್ತಿದೆ.
ಪುನರ್ವಸತಿಗೆ ಯೋಗದಾನ ನೀಡುತ್ತಿರುವ ಯುವಜನ ಸಂಘಟನೆಗಳು:
ಮಳೆಯ ಬಿರುಸಿನ ಪರಿಣಾಮ ಸಂತ್ರಸ್ತ ಜನತೆಗೆ ಪುನರ್ವಸತಿ ಒದಗಿಸುವ ನಿಟ್ಟಿನಲ್ಲಿ ಕಳೆದ 4 ದಿನಗಳಿಂದ ಜಿಲ್ಲಾಡಳಿತೆ ನಡೆಸುತ್ತಿರುವ ಪುನರ್ವಸತಿ ಕೇಂದ್ರಗಳಲ್ಲಿ ಸೇವಾ ಕೈಂಕರ್ಯ ನಡೆಸುತ್ತಿರುವ ಸಂಘಟನೆಗಳಲ್ಲಿ ಜಿಲ್ಲೆಯ ಯೂತ್ ಕ್ಲಬ್ ಗಳ ಯೋಗದಾನ ಗಮನಾರ್ಹವಾಗಿದೆ. ಇದರಂದಿಗೆ ಕೇರಳರಾಜ್ಯ ಯುವಜನಕಲ್ಯಾಣ ಕೇಂದ್ರದ ನೇತೃತ್ವದಲ್ಲಿ ಸಂಗ್ರಹಿಸಲಾಗುತ್ತಿರುವ ಸಾಮಾಗ್ರಿಗಳನ್ನು ವಾಹನಗಳಲ್ಲಿ ಪುನರ್ವಸತಿ ಕೇಂದ್ರಗಳಿಗೆ ಸತತವಾಗಿ ತಲಪಿಸಲಾಗುತ್ತಿದೆ. ಯುವಜನ ಕಲ್ಯಾಣ ಆಯೋಗ ಸದಸ್ಯ ಕೆ.ಮಣಿಕಂಠನ್, ರಾಜ್ಯ ಯುವಜನ ಮಂಡಳಿ ಜಿಲ್ಲಾ ಸಂಚಾಲಕ ಶಿವಪ್ರಸಾದ್ ಅವರ ನೇತೃತ್ವದಲ್ಲಿ ಈ ಚಟುವಟಿಕೆ ನಡೆಯುತ್ತಿದೆ. ಎನ್.ಸಿ.ಸಿ., ಎನ್.ಎಸ್.ಎಸ್., ಎಸ್.ಪಿ.ಸಿ. ಇತ್ಯಾದಿ ಸಂಘಟನೆಗಳ ಕಾರ್ಯಕರ್ತರ ದುಡಿಮೆಯೂ ಈ ನಿಟ್ಟಿನಲ್ಲಿ ಪೂರಕವಾಗಿದೆ.
ಕಲಿಕೆ ಸಾಮಾಗ್ರಿಗಳ ವಿತರಣೆ:
ಬಿರುಸಿನ ಮಳೆಯ ಸಂತ್ರಸ್ತರಾದ ವಿದ್ಯಾರ್ಥಿಗಳಿಗೆ ಕಲಿಕೆ ಸಾಮಾಗ್ರಿಗಳ ವಿತರಣೆ ಜಿಲ್ಲಾಧಿಕಾರಿ ಅವರ ಛೇಂಬರ್ ನಲ್ಲಿ ಜರುಗಿತು.
ಕಾಸರಗೋಡು ಪಬ್ಲಿಕ್ ಸೇವಾ ಸಹಕಾರಿ ಸೊಸೈಟಿ ವತಿಯಿಂದ 41295 ರೂ. ಮೌಲ್ಯದ ಸಾಮಾಗ್ರಿಗಳನ್ನು ಕೊಡುಗೆಯಾಗಿ ಕೊಡಲಾಯಿತು. ನೋಟ್ ಪುಸ್ತಕ, ಸ್ಕೆಚ್ ಪೆನ್, ಶಾಲಾ ಬ್ಯಾಗು, ವಾಟರ್ ಬಾಟಲಿ, ಸ್ಕೇಲ್, ಶಾಪ್ರ್ನರ್ ಸಹಿತ ಸಾಮಾಗ್ರಿಗಳನ್ನು ಈ ವೇಳೆ ನೀಡಲಾಯಿತು.
ಸೊಸೈಟಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು. ಸೊಸೈಟಿ ಅಧ್ಯಕ್ಷ ಟಿ.ಕೆ.ರಾಜಶೇಖರನ್, ಕಾರ್ಯದರ್ಶಿ ರಾಘವನ್ ಬೆಳ್ಳಿಪ್ಪಾಡಿ, ಉಪಾಧ್ಯಕ್ಷ ಕೆ.ರಾಘವನ್, ನಿರ್ದೇಶಕರಾದ ಕೆ.ವಿ.ರಮೇಶನ್, ದಿನೇಶನ್,ವಿನೋಧ್, ಪ್ರಬಂಧಕ ವಿನೋದ್, ಹಣಕಾಸು ಅಧಿಕಾರಿ ಕೆ.ಸತೀಶನ್ ಉಪಸ್ಥಿತರಿದ್ದರು.

