ಮುಳ್ಳೇರಿಯಾ: ಅಖಿಲ ಕೇರಳ ಯಾದವ ಸಭಾ ಕಾಸರಗೋಡು ತಾಲೂಕು ಸಮಿತಿ ನೇತೃತ್ವದಲ್ಲಿ ನವೀಕರಣಗೊಂಡ ಮುಳ್ಳೇರಿಯಾದ ಯಾದವ ಸಭಾಭವನದ ಉದ್ಘಾಟನೆ, ಸಮುದಾಯದ ಎಸ್ಸೆಸ್ಸೆಲ್ಸಿ ಹಾಗೂ ಎಂಬಿಬಿಎಸ್ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಣೆ, ಸಂಘಟನೆಯ ರಾಜ್ಯ ಪದಾಧಿಕಾರಿಗಳಿಗೆ ಅಭಿನಂದನೆ ಹಾಗೂ ಹಿರಿಯ ಸಮುದಾಯ ನೇತಾರ ಕ್ಯಾಪ್ಟನ್ ನಾರಾಯಣ ಮಣಿಯಾಣಿ ಅವರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ಮುಳ್ಳೇರಿಯಾ ಯಾದವ ಸಭಾ ಭವನದಲ್ಲಿ ನಡೆಯಿತು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅಖಿಲ ಕೇರಳ ಯಾದವ ಸಭಾ ರಾಜ್ಯಾಧ್ಯಕ್ಷ ವಯಲಪುರಂ ನಾರಾಯಣನ್ ಮಾತನಾಡಿ, ಸಮುದಾಯ ಸಂಘಟನೆಯ ಒಗ್ಗಟ್ಟಿನಿಂದ ಮಾತ್ರ ಸರ್ಕಾರದಿಂದ ಅರ್ಹವಾದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದು. ಅದಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಸಂಘಟನೆಯ ಮೂಲಕ ನಡೆಸಿದ ಹೋರಾಟದ ಫಲವಾಗಿಯೇ ಇದೀಗ ರಾಜ್ಯ ಸರ್ಕಾರದಿಂದ ಲಭಿಸುವ ಒಇಸಿ ಸೌಲಭ್ಯವು, ಆದಾಯ ಮಿತಿ ಸಡಿಲಿಕೆಯು ಆಗಿದೆ. ಅದಲ್ಲದೇ ಸಮುದಾಯದ ಇದೀಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಲು ಸಂಘಟನೆಯ ಒಗ್ಗಟ್ಟು ಅಗತ್ಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ರಮೇಶ್ ಯಾದವ್ ಮಾತನಾಡಿ, ಈಗಾಗಲೇ ಸಮುದಾಯ ಸಂಘನೆಯ ಮೂಲಕ ಆನೇಕ ಕಾರ್ಯಗಳನ್ನು ಸಾಸಲು ಸಾಧ್ಯವಾಗಿದೆ. ರಾಜಕೀಯ ಜನಪ್ರತಿನಿಗಳ ಸಹಾಯವಿಲ್ಲದೇ ಸಂಘಟಿತರಾಗುವ ಮೂಲಕ ನಮ್ಮ ಬೇಡಿಕೆಗಳನ್ನು ಪಡೆಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಸಮುದಾಯ ನೀಡುವ ಅಂಗೀಕಾರವು ಮುಂದಿನ ದಿನಗಳಲ್ಲಿ ಸಮಾಜದ ಒಳಿತಿಗಾಗಿ ಪ್ರಯತ್ನಿಸಬೇಕು ಎಂದರು.
ಸಮಾರಂಭದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ ನೀರ್ಚಾಲು ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಕ್ಯಾಪ್ಟನ್ ನಾರಾಯಣ ಮಣಿಯಾಣಿ ಅವರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಲ್ಲದೇ ಎಂಬಿಬಿಎಸ್ ಪಡೆದ ವಿದ್ಯಾರ್ಥಿಯನ್ನು ಡಾ. ಕಿಶೋರ್ ಕುಮಾರ್ ಕುಂಬಳೆ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಉಪಾದ್ಯಕ್ಷ ಉದಯ ಕುಮಾರ್ ಬದಿಯಡ್ಕ, ರಾಜ್ಯ ಸಮಿತಿ ಕಾರ್ಯದರ್ಶಿ ದಾಮೋದರನ್ ಕೊಟ್ಟಂಗುಳಿ, ರಾಜ್ಯ ಸಮಿತಿ ಸದಸ್ಯ ಸುಬ್ರಹ್ಮಣ್ಯನ್, ಯುವ ಸಮಿತಿ ಅಧ್ಯಕ್ಷ ಕೆ.ಗಂಗಾಧರ್ ತೆಕ್ಕೆಮೂಲೆ ಮಾತನಾಡಿದರು.
ಆರಂಭದಲ್ಲಿ ನವೀಕರಣಗೊಂಡ ಸಭಾಭನದ ಉದ್ಘಾಟನೆಯಂಗವಾಗಿ ಗಣಪತಿಹವನ ನಡೆಯಿತು. ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಮಣಿಯಾಣಿ ಚೇರುಕೂಡ್ಲು ಸ್ವಾಗತಿಸಿ, ಕೋಶಾಧಿಕಾರಿ ರಾಧಾಕೃಷ್ಣ ಅಣಂಗೂರು ವಂದಿಸಿದರು.

