ಪೆರ್ಲ:ಶಕ್ತಿ-ಭಕ್ತಿ-ಯುಕ್ತಿಗಳಿಂದ ಧರ್ಮ ಸಂಸ್ಥಾಪನೆಗೈದ ಭಗವಾನ್ ಶ್ರೀಕೃಷ್ಣನ ಜೀವನ ಮನು ಕುಲಕ್ಕೆ ಆದರ್ಶ ಪ್ರಾಯ ಎಂದು ಭಾರತೀಯ ಸೇನೆಯ ಗಡಿ ಭದ್ರತಾ ಪಡೆ ಯೋಧ, ಸರ್ಚ್ ಆಪರೇಷನ್ ಸ್ಪೆಷಲಿಸ್ಟ್ ಬಾಲಕೃಷ್ಣ ಪಡ್ರೆ ಹೇಳಿದರು.
ಪೆರ್ಲ ವಿವೇಕಾನಂದ ಶಿಶುಮಂದಿರದಲ್ಲಿ ಶುಕ್ರವಾರ ಆಚರಿಸಲಾದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ರಾಮಾಯಣ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತದ ಸುದೃಢತೆಗೆ ಮೂಲ ಕಾರಣವಾಗಿರುವ ಇಲ್ಲಿನ ಸಂಸ್ಕೃತಿಯನ್ನು ಹಾಳುಗೆಡವಿ ರಾಷ್ಟ್ರವನ್ನು ದುರ್ಬಲಗೊಳಿಸುವ ಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಸ್ವ-ಹಿತಾಸಕ್ತಿಗೆ ರಾಷ್ಟ್ರವನ್ನು ಬಲಿಗೊಡುವ, ಸಮಾಜವನ್ನು ದುರ್ಬಲಗೊಳಿಸುವ ಷಡ್ಯಂತ್ರಗಳು ನಡೆಯುತ್ತಿದೆ. ಸಮಾಜದಲ್ಲಿ ಅಧರ್ಮ ತಾಂಡವವಾಡ ತೊಡಗಿದಾಗ ಸಮಾಜದಲ್ಲಿ ಮೇಳೈಸುವ ದುಷ್ಠ ಶಕ್ತಿಗಳ ನಿಗ್ರಹ ಹಾಗೂ ಧರ್ಮ ರಕ್ಷಣೆ, ಮರುಸ್ಥಾಪನೆ ಯತ್ನಗಳು ನಿರಂತರ ನಡೆಯುತ್ತಾ ಬಂದಿದೆ.ಕಾಲಕ್ಕೆ ಅನುಸರಿಸಿ ಮಹಾ ಪುರುಷರು ಅವತರಿಸುತ್ತಾ ಬಂದಿದ್ದಾರೆ ಎಂದು ಅವರು ತಿಳಿಸಿದರು. ದೇಶ ರಕ್ಷಣೆಯ ಹೊಣೆ ಕೇವಲ ಸೈನಿಕರ ಜವಾಬ್ದಾರಿಯಷ್ಟೇ ಅಲ್ಲ. ಪ್ರತಿಯೊಬ್ಬ ಪ್ರಜೆಗೂ ಜನಿಸಿದ ಮಣ್ಣಿನ ಋಣ ತೀರಿಸುವ ಹೊಣೆಗಾರಿಕೆ ಇದೆ. ಸಮಾಜ ಹಾಗೂ ದೇಶ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವೆಲ್ಲರೂ ಅವತಾರ ಪುರುಷರು ಎಂಬ ಕಲ್ಪನೆಯೊಂದಿಗೆ ಸಮಾಜಕ್ಕಾಗಿ ನಮ್ಮಿಂದಾಗುವ ಸಣ್ಣ ಸಣ್ಣ ಕಾರ್ಯಗಳನ್ನು ಶ್ರದ್ದೆ ಹಾಗೂ ನಿಷ್ಠಯಿಂದ ನಿರ್ವಹಿಸಬೇಕಾಗಿದೆ ಎಂದರು.
ಶಿಶುಮಂದಿರ ಆಡಳಿತ ಸಮಿತಿ ಅಧ್ಯಕ್ಷೆ ನಳಿನಿ ಸೈಪಂಗಲ್ಲು ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಮಾಯಣ ಸಪ್ತಾಹ ಸಮಾರೋಪ ಸಮಾರಂಭದ ಅಂಗವಾಗಿ ಕಥಾ ಪ್ರವಚನ ನೆರವೇರಿಸಿದ ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ಭಟ್ ಪೆರ್ಲ ಅವರಿಗೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆಡಳಿತ ಸಮಿತಿ ಕಾರ್ಯದರ್ಶಿ ಕಾರ್ತಿಕ್ ಶಾಸ್ತ್ರಿ ಖಂಡೇರಿ ಶುಭ ಹಾರೈಸಿದರು.
ಬೆಳಿಗ್ಗೆ ನಡೆದ ಪುಟಾಣಿ ಮಕ್ಕಳ ಮುದ್ದುಕೃಷ್ಣನ ವೇಷ ಗಮನ ಸೆಳೆಯಿತು.ಮಕ್ಕಳ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಸಮಿತಿ ಪದಾಧಿಕಾರಿಗಳಾದ ಶ್ರೀಹರಿ ಭರಣೇಕರ್, ರೇಖಾ, ನಾಲಂದ ಕಾಲೇಜು ನಿರ್ದೇಶಕರಾದ ಪ್ರಭಾವತಿ ಕೆ. ವಿ., ರಾಜಶೇಖರ ಪೆರ್ಲ, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಮಾತಾಜಿ ಜ್ಯೋತಿ ಪ್ರಾರ್ಥಿಸಿದರು.ಮಾತಾಜಿ ಲಾವಣ್ಯ ಸ್ವಾಗತಿಸಿ, ಉಪ ಕಾರ್ಯದರ್ಶಿ ರಮೇಶ್ ನಡುಬೈಲು ವಂದಿಸಿದರು. ಖಜಾಂಚಿ ಜಯಶ್ರೀ ಪೆರ್ಲ ನಿರೂಪಿಸಿದರು. ಶಿಶುಮಂದಿರ ಸಹಾಯಕಿ ಹೇಮಾ ಸಹಕರಿಸಿದರು. ರಮೇಶ್ ನಡುಬೈಲು ಹಾಗೂ ದಿವ್ಯಾ ಸಾಗರ್ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನೆರವೇರಿತು.



