ಪೆರ್ಲ: ಗಾನವೈಭವ, ನೃತ್ಯವೈಭವ ಸಹಿತ ಪ್ರಯೋಗಗಳಿಂದ ಯಕ್ಷಗಾನ ಬಡವಾಗಲಿಲ್ಲ, ಬದಲಿಗೆ ಅದು ವಿಕಸಿಸಿದೆ. ಗಾನವೈಭವ, ನೃತ್ಯವ್ಯಭವಗಳೆಂದರೆ ಅದು ಯಕ್ಷಗಾನವೆಂಬ ಬೃಹನ್ಮರದ ರೆಂಬೆಗಳಿದ್ದಂತೆಯೇ ಹೊರತು ಅದುವೇ ಪರಿಪೂರ್ಣ ಯಕ್ಷಗಾನವಲ್ಲ. ಅದು ಯಕ್ಷಗಾನದ ಶಾಖೆಗಳು. ಕಲೆ ಕವಲೊಡೆದು ಶಾಖೋಪಶಾಖೆಗಳಾಗಿ ಬೆಳೆಯುವುದರಿಂದ ವಿಸ್ತರಿಸಲ್ಪಡುತ್ತದೆಯೇ ಹೊರತು, ಮೂಲ ಆಶಯಕ್ಕೆ ಧಕ್ಕೆಯಾಗುತ್ತದೆಂದು ಆತಂಕಿತರಾಗಬೇಕಾದುದಿಲ್ಲ ಎಂದು 'ಕಣಿಪುರ' ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ.ನಾ. ಚಂಬಲ್ತಿಮಾರ್ ನುಡಿದರು.
ಯಕ್ಷಸ್ನೇಹಿ ಬಳಗ ಪೆರ್ಲ ಮತ್ತು ಶೇಣಿ ರಂಗಜಂಗಮ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ಸ್ವರ್ಗ ವಿವೇಕಾನಂದ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಯಕ್ಷಗಾಯನವೈಭವದಂಗವಾಗಿ ನಡೆದ ಸಾಂಸ್ಕøತಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾರಂಭವನ್ನು ಕಲಾಪೋಷಕ ವೆಂಕಟೇಶ್ ಪಾಲ್ತಮೂಲೆ ದೀಪಬೆಳಗಿಸಿ ಉದ್ಘಾಟಿಸಿದರು. ಸಂಘಟಕ ಶೇಣಿ ವೇಣುಗೋಪಾಲ್ ಭಟ್ ಪ್ರಸ್ತಾವಿಕ ಆಶಯ ಭಾಷಣ ಮಾಡಿದರು. ಶಾಲಾ ಮುಖ್ಯೋಪಧ್ಯಾಯಿನಿ ಗೀತಾಕುಮಾರಿ ಶುಭಾಸಂಸನೆ ಮಾಡಿದರು. ನಿವೃತ್ತ ಅಧ್ಯಾಪಕ ಶ್ರೀಧರ ಭಟ್ ಕೆದಂಬಾಯಿಮೂಲೆ ಅಧ್ಯಕ್ಷತೆ ವಹಿಸಿದರು.
ಸಮಾರಂಭದಲ್ಲಿ ಹಿರಿಯ, ಅನುಭವೀ ಪ್ರೇಕ್ಷಕ, ಸ್ವರ್ಗ ಶಾಲೆಯ ನಿವೃತ್ತ ನೌಕರ ಬಿ.ಶಿವಪ್ಪ ಅವರನ್ನು ಕಲಾಭಿಮಾನಿಯೆಂದು ಪುರಸ್ಕರಿಸಿ ಸನ್ಮಾನಿಸಲಾಯಿತು. ಭಾಗವತ ಸತೀಶ ಪುಣಿಂಚಿತ್ತಾಯ ಅಭಿನಂದನಾ ಭಾಷಣ ಮಾಡಿದರು. ಕು.ಸ್ನೇಹಾ ಬಾಳಿಕೆ ಕಾರ್ಯಕ್ರಮ ನಿರೂಪಿಸಿದರು. ಅನೂಪ್ ಸ್ವರ್ಗ ಸ್ವಾಗತಿಸಿ, ವಿವೇಕ ಸ್ವರ್ಗ ವಂದಿಸಿದರು.
ಬಳಿಕ ತೆಂಕು-ಬಡಗುತಿಟ್ಟಿನ ಖ್ಯಾತ ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯ, ಸತೀಶ ಪುಣಿಂಚಿತ್ತಾಯ ಹಾಗೂ ಕು.ಅಮೃತಾ ಅಡಿಗ ಇವರ ಭಾಗವತಿಕೆ ವೈವಿಧ್ಯತೆಯಲ್ಲಿ ಯಕ್ಷಗಾಯನವೈಭವ ಸ್ವರ್ಗದ ಪಾಲಿಗೆ ಅವಿಸ್ಮರಣೀಯವಾಯಿತು. ಶೇಣಿ ವೇಣುಗೋಪಾಲ ಭಟ್ ನಿರೂಪಣೆಗೈದರು. ಹಿಮ್ಮೇಳದಲ್ಲಿ ಶ್ರೀಧರ ಎಡಮಲೆ, ಸ್ಕಂದಕೊನ್ನಾರ್(ಚೆಂಡೆ), ಅನೂಪ್ ಸ್ವರ್ಗ(ಮದ್ದಳೆ) ಮಾ| ಸಮೃದ್ಧ ಪುಣಿಂಚಿತ್ತಾಯ ಚಕ್ರತಾಳದಲ್ಲಿ ಸಹಕರಿಸಿದರು. ಆಯ್ದ ಪದ್ಯಗಳ ಭಾಗವತಿಕೆ ಅತಿ ರಾಗಾಲಾಪನೆಗಳಿಂದ ಲಂಬಿಸದೇ, ಭಾವ ಪ್ರದಾನವಾಗಿ ರಸಪೋಷಿತವಾಗಿ ಗಾನವೇ ಮೆರೆದ ವೈವಿಧ್ಯವಾಗಿ ಮೂಡಿಬಂದು ಪ್ರಶಂಸೆಗೆ ಪಾತ್ರವಾಯಿತು.


