ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇಗುಲದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಲೀಲೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಚಂದ್ರಾವತಿ ಕುಂಟಾರು ಇವರಿಂದ ಭಾಗವತ ಪ್ರವಚನ ನಡೆಯಿತು. ಬಳಿಕ ಶ್ರೀಕೃಷ್ಣ ವೇಷಧಾರಿ ಬಾಲಕರ ಶೋಭಾಯಾತ್ರೆಯು ಕುಂಟಾರು ಶ್ರೀ ಕ್ಷೇತ್ರದ ಪ್ರವೇಶ ದ್ವಾರದಿಂದ ವಾದ್ಯಮೇಳದೊಂದಿಗೆ ಶ್ರೀಕ್ಷೇತ್ರಕ್ಕೆ ಆಗಮಿಸಿತು. ಲೀಲೋತ್ಸವ ಸಮಿತಿಯ ಗೌರವಾಧ್ಯಕ್ಷ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಆನಂತರ ವಿವಿಧ ವಯೋಮಿತಿಯವರಿಗೆ ಶ್ರೀಕೃಷ್ಣ ವೇಷ, ಭಕ್ತಿಗೀತೆ, ಮಡಿಕೆ ಒಡೆಯುವ ಸ್ಪರ್ಧೆ, ಮೇಣದ ಬತ್ತಿ ಓಟ ಸ್ಪರ್ಧೆ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಆಶೀರ್ವಚನ ನೀಡಿದರು. ಲೀಲೋತ್ಸವ ಸಮಿತಿಯ ಅಧ್ಯಕ್ಷ ಜಯರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಕಾರಡ್ಕ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀವಿದ್ಯಾ ಉಪಸ್ಥಿತರಿದ್ದರು. ಯತೀಶ್ ಕುಂಟಾರು ಸ್ವಾಗತಿಸಿ, ಕಾರ್ಯದರ್ಶಿ ಪ್ರಕಾಶ.ಯಂ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಬಾಲಕೃಷ್ಣ ಭಟ್ ವಂದಿಸಿದರು.



