ಬದಿಯಡ್ಕ: ಪೆರಡಾಲ ಎಂ.ಜಿ.ಎಲ್.ಸಿ ಶಾಲೆ ಮತ್ತು ಮೀಡಿಯಾ ಕ್ಲಾಸಿಕಲ್ಸ್ ಕಾಸರಗೋಡು ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯೋತ್ಸವವನ್ನು ಎಂ.ಜಿ.ಎಲ್.ಸಿ ಶಾಲಾ ವಠಾರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ ಕೇರಳ ಘಟಕದ ಸದಸ್ಯೆ ಪುಷ್ಪಾವತಿ ನೆಟ್ಟಣಿಗೆ ಧ್ವಜಾರೋಹಣಗೈದು ಮಾತನಾಡಿ, ಹಿಂದೆಲ್ಲ ದೇಶ ಪ್ರೇಮವೆಂಬುದು ಒಂದು ದಿವಸದ ಆಚರಣೆಯಾಗಿರಲಿಲ್ಲ. ಮಾತ್ರವಲ್ಲದೇ ಹಿಂದೆ ಸಣ್ಣ ಮಕ್ಕಳಿಗೆ ಹಿರಿಯರು ದೇಶಕ್ಕಾಗಿ ಪ್ರಾಣ ತೆತ್ತ ವೀರ ಯೋಧರ ಕತೆಗಳನ್ನು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಕತೆಗಳನ್ನು ಹೇಳುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಇಂದು ನಮ್ಮ ಮಕ್ಕಳಿಗೆ ದೇಶ ಪ್ರೇಮದ ಕತೆಗಳನ್ನು ತಿಳಿಹೇಳಬೇಕಾದ ಅಗತ್ಯ ಹೆಚ್ಚಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೀಡಿಯಾ ಕ್ಲಾಸಿಕಲ್ಸ್‍ನ ಅಧ್ಯಕ್ಷ ಶ್ರೀಕಾಂತ್ ನೆಟ್ಟಣಿಗೆ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಪತ್ರಕರ್ತ ಶ್ರೀಧರ ಬೆಳ್ಳೂರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಾದ ಸ್ಟಿಬಿನ್ ಮನೋಜ್, ಸುಹಾನ, ಅಶ್ವತ್, ಪಿ.ಆನಂದ ಶುಭಾಶಂಸನೆಗೈದರು. ಮೀಡಿಯಾ ಕ್ಲಾಸಿಕಲ್ಸ್‍ನ ಸ್ಥಾಪಕ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಎಂಜಿ.ಎಲ್.ಸಿ.ಯ ಪುಷ್ಪಾ ವಂದಿಸಿದರು. ಎಂ.ಜಿ.ಎಲ್.ಸಿ.ಯ ಅಧ್ಯಾಪಕರಾದ ಬಾಲಕೃಷ್ಣ ಅಚ್ಚಾಯಿ ಕಾರ್ಯಕ್ರಮ ನಿರೂಪಿಸಿದರು.


