ಮಂಜೇಶ್ವರ: ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ನಾರಾಯಣ ಗುರುಗಳ ತತ್ವವನ್ನು ಅನುಸರಿಸುತ್ತಾ ಕಳೆದ ಹತ್ತು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿರುವ ಬ್ರಹ್ಮಶ್ರೀ ನಾರಾಯಣ ಗುರು ಯುವವೇದಿಕೆ ಕಾಸರಗೋಡು ಜಿಲ್ಲಾ ಸಮಿತಿಯು ತನ್ನ 11 ನೇ ವಾರ್ಷಿಕೋತ್ಸವದ ಅಂಗವಾಗಿ ಸೆ.8 ಭಾನುವಾರ ಹೊಸಂಗಡಿಯ ಹಿಲ್‍ಸೈಡ್ ಸಭಾಭವನದಲ್ಲಿ ನಡೆಸುವ ಬ್ರಹ್ಮಶ್ರೀ ನಾರಾಯಣ ಗುರುಗಳ 165 ನೇ ಜನ್ಮದಿನಾಚರಣೆ ಹಾಗೂ ಸೋಣದ ಪರ್ಬ ಮತ್ತು ದೇಯಿ ನೆನಪಿನ ಸಂಚಿಕೆ ಬಿಡುಗಡೆಯ ಸಮಾರಂಭದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಹೊಸಬೆಟ್ಟು ಧರ್ಮದೈವಗಳ ಚಾವಡಿಯ ಅಂಗಳದಲ್ಲಿ ನಡೆಯಿತು.
ಸಮಾರಂಭದಲ್ಲಿ ಹಿರಿಯರಾದ ಶ್ರೀ ಮಾಡ ಕ್ಷೇತ್ರದ ಅಣ್ಣ ದೈವದ ಮುಖ್ಯ ಅರ್ಚಕರಾದ ತಿಮ್ಮಪ್ಪ ಕಾಂಜರು ಆಶೀರ್ವಚನ ನೀಡಿ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಮಾತನಾಡಿ ಪ್ರತಿವರ್ಷವೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಾಮಾಜಿಕವಾಗಿ ಒಳ್ಳೆಯ ಕೆಲಸ ಮಾಡಿದವರಿಗೆ ಸಮ್ಮಾನ ವಿವಿಧ ವಿಷಯಗಳ ವಿಚಾರಕೂಟ, ಹತ್ತನೇ ತರಗತಿಯಲ್ಲಿ ಅತ್ಯಂತ ಉತ್ತಮ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಗುರುಶ್ರೀ ಬೆಳ್ಳಿಪದಕ, ಬಂಗಾರದ ಪದಕ ಮತ್ತು ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು ಹಿಂದಿನಿಂದಲೂ ನಡೆಸುತ್ತಾ ಬಂದಿದ್ದೇವೆ. ಕಳೆದ ವರ್ಷ ವೇದಿಕೆಯ ಹತ್ತನೆಯ ವರ್ಷದ ವಾರ್ಷಿಕ ಸಂಭ್ರಮದ ನೆನಪಿನ ಸಂಚಿಕೆ ದೇಯಿ ಬಿಡುಗಡೆಗೆ ಸಜ್ಜಾಗಿದ್ದು ಈ ಬಾರಿಯ ಕಾರ್ಯಕ್ರಮದಲ್ಲಿ ಅದನ್ನು ಅನಾವರಣಗೊಳಿಸಲಾಗುವುದು.
ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದ ಕೊನೆಯಲ್ಲಿ ತುಳುನಾಡಿನ ನಮ್ಮ ಪೂರ್ವ ಹಿರಿಯರು ಸೋಣ ತಿಂಗಳಿನಲ್ಲಿ ಆಚರಿಸಿಕೊಂಡು ಬರುತ್ತಿದ್ದ ಆಹಾರ ಪದ್ಧತಿಯ ಹಲವು ಬಗೆಯ ವಿವಿಧ ಖಾದ್ಯಗಳನ್ನು ಕೂಡ ಆಧುನಿಕ ಯುಗದ ಇಂದಿನ ಪೀಳಿಗೆಗೆ ಪರಿಚಯಿಸಿ ಎಲ್ಲರಿಗೂ ಉಣ ಬಡಿಸಲಾಗುವುದು. ಸಮಾಜದ ಸಂಘಟನೆಗೆ ವಿವಿಧ ಯೋಜನೆಗಳಿಗೆ ಸಮಾಜ ಬಂಧುಗಳು ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿದರು.
ಸಮಾರಂಭದಲ್ಲಿ ಕೃಷ್ಣಪ್ಪ ಪೂಜಾರಿ ಬಡಾಜೆ, ಸಂಘಟನಾ ಕಾರ್ಯದರ್ಶಿ ರವಿ ಮುಡಿಮಾರು, ಕೋಶಾ„ಕಾರಿಗಳಾದ ರವೀಂದ್ರ ಪೂಜಾರಿ ಭಂಡಾರ ಮನೆ ಕಡಂಬಾರು, ದೇಯಿ ಸ್ಮರಣ ಸಂಚಿಕೆಯ ಸಂಪಾದಕರಾದ ರಘುನಾಥ ವರ್ಕಾಡಿ, ಹರೀಶ್ ಕುಮಾರ್ ಹೊಸಬೆಟ್ಟು ಮುಂತಾದ ಹಲವರಿದ್ದರು. ಕಾರ್ಯದರ್ಶಿ ಹರೀಶ್ ಕುಮಾರ್ ಸುವರ್ಣ ಹೊಸಬೆಟ್ಟು ವಂದಿಸಿದರು.


