ಮಂಜೇಶ್ವರ: ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಬಟ್ಲಬೆಟ್ಟು ಎಂಬಲ್ಲಿ ವಸತಿ ರಹಿತವಾಗಿ ಅಸಹಾಯಕರಾಗಿ ಮಾನಸಿಕ ಅಸ್ವಸ್ಥರಾಗಿ ಜೀವಿಸುತ್ತಿದ್ದ 60 ವರ್ಷ ಪ್ರಾಯದ ವೃದ್ಧೆ ಗುಲಾಬಿ ಕೊಟ್ಟಾರಿ ಅವರನ್ನು ದೈಗೋಳಿಯ ಸಾಯಿ ನಿಕೇತನ ಸೇವಾಶ್ರಮ ದಾಖಲಿಸಿಕೊಂಡು ಆಶ್ರಯವನ್ನಿತ್ತಿದೆ.
ದಿ.ಕಲ್ಯಾಣಿ ಕೊಟ್ಟಾರಿ ಅವರ ಪುತ್ರಿಯಾದ ಇವರು ತಂದೆ-ತಾಯಿ ಅವರನ್ನು ಕಳೆದುಕೊಂಡ ನಂತರ 25 ವರ್ಷಗಳಿಂದ ಏಕಾಂಗಿಯಾಗಿ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದರು. ಗುಡಿಸಲು ಕ್ರಮೇಣ ಶಿಥಿಲವಾಗಿ ಬಿದ್ದು ಹೋಗಿದ್ದು ಪ್ರಸ್ತುತ ಪೆÇದೆಗಳ ನಡುವೆ ಸ್ವಲ್ಪ ಕಲ್ಲುಗಳ ಮೇಲೆ ಹಾಸಿದ ಹರಿದ ಪ್ಲಾಸ್ಟಿಕ್ ಹಾಗೂ ಟಾರ್ಪಾಲ್‍ಗಳು ಅವರ ಛಾವಣಿಯಾಗಿತ್ತು.
ಪ್ರಕೃತಿಯ ಆಘಾತ, ಅಭದ್ರತೆ ಹಾಗೂ ಅನಿವಾರ್ಯ ಏಕಾಂತತೆಯಿಂದ ಮಾನಸಿಕ ವಿಕಲ್ಪಕ್ಕೊಳಗಾಗಿದ್ದ ಈ ವೃದ್ಧೆಗೆ ನೆರೆಹೊರೆಯವರು ಏನಾದರೂ ಕೊಟ್ಟರಷ್ಟೇ ಆಹಾರ. ಇವರ ದಯನೀಯ ಸ್ಥಿತಿ ಕಂಡು ಸ್ಥಳೀಯ ಸಮಾಜ ಸೇವಕರಾದ ಜನಾರ್ಧನ ಮತ್ತು ಪಲ್ಲೆದಪಡ್ಪು ನಿವಾಸಿ ರೋಹಿತಾಕ್ಷ ಬೀಡು ಅವರು ಸಾಯಿ ನಿಕೇತನ ಸೇವಾಶ್ರಮವನ್ನು ಸಂಪರ್ಕಿಸಿದಾಗ ಆಶ್ರಮದ ರೂವಾರಿಗಳಾದ ಡಾ.ಉದಯ ಕುಮಾರ ನೂಜಿ, ಡಾ.ಶಾರದಾ ದಂಪತಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿ ಜನಾರ್ಧನ ಹಾಗೂ ತಂಡದವರ ಸಹಕಾರದಿಂದ ಅವರನ್ನು ಆಶ್ರಮಕ್ಕೆ ಕರೆತಂದು ದಾಖಲಿಸಿಕೊಂಡಿರುತ್ತಾರೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ, ಆವಶ್ಯಕತೆಗಳನ್ನು ನೀಡುತ್ತಿದ್ದು ಕೆಲವು ದಿನಗಳ ನಿರೀಕ್ಷಣೆಗಳ ನಂತರ ಅವಶ್ಯಕತೆ ಇದ್ದಲ್ಲಿ ವಿಶೇಷ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯ ದಂಪತಿಗಳು ತಿಳಿಸಿದ್ದಾರೆ.
ನಿರ್ಗತಿಕರು, ಮಾನಸಿಕ ಅಸ್ವಸ್ಥರು ಹಾಗೂ ವೃದ್ಧರನ್ನೂ ಪ್ರೀತಿ ವಿಶ್ವಾಸಗಳಿಂದ ಆರೈಕೆ ಮಾಡುತ್ತಿರುವ ದೈಗೋಳಿಯ ಸಾಯಿ ನಿಕೇತನ ಸೇವಾಶ್ರಮ ಸರಕಾರದ ಅನುದಾನ ರಹಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಹೃದಯರ ಬಲವಿದ್ದರೆ ಮಾತ್ರ ಇನ್ನಷ್ಟು ಜನರಿಗೆ ಆಸರೆ ನೀಡಬಹುದು.


