HEALTH TIPS

ಕೇರಳ ನೆರೆ ಸಂತ್ರಸ್ತ ನಿಧಿ ಶೇಖರಣಾರ್ಥ ಸವಾಕ್ ನಿಂದ ಕಲಾ ಯಾತ್ರೆ

                             
      ಕಾಸರಗೋಡು: ಪ್ರಳಯ ದುರಂತದಿಂದ ಸರ್ವಸ್ವವನ್ನೂ ಕಳಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ರಾಜ್ಯದ ವಿವಿಧ ಜಿಲ್ಲೆಗಳ ನೆರೆ ಸಂತ್ರಸ್ತರಿಗೆ  ನಿಧಿ ಸಂಗ್ರಹದ ಮೂಲಕ ಸಹಾಯ ಹಸ್ತವನ್ನು ನೀಡಿ ಪುನರ್ ವಸತಿ ಕಲ್ಪಿಸಲು ಕಲಾವಿದರ ಸಂಘಟನೆಯಾದ ಸವಾಕ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಲಾ ಮೆರವಣಿಗೆಯು ಕಾಸರಗೋಡಿನ ವಿವಿಧ ಕೇಂದ್ರಗಲ್ಲಿ ಬುಧವಾರ ಜರಗಿತು.
     ಬೆಳಿಗ್ಗೆ ಕಾಸರಗೋಡಿನ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ದಂಡಾಧಿಕಾರಿ ಎನ್.ದೇವೀದಾಸ್ ಅವರು ಜಾನಪದ ಕಲಾವಿದ ಶಂಕರ ಸ್ವಾಮಿಕೃಪಾ ಅವರಿಗೆ ಧ್ವಜ ಹಸ್ತಾಂತರಿಸಿ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಎನ್.ದೇವೀದಾಸ್ ಅವರು, ಹೃದಯ ವಿಶಾಲತೆಯು ಕಲಾವಿದರ ಮೂಲ ಪ್ರವೃತ್ತಿಯಾಗಿದ್ದು, ಸಮಾಜಕ್ಕೆ ಮಾರ್ಗದರ್ಶಿ ಸಂದೇಶಗಳನ್ನು ನೀಡುವ ಹಕ್ಕು ಉಳ್ಳವರಾಗಿದ್ದು, ಸವಾಕ್ ಸಂಘಟನೆ ಈ ಮೂಲಕ ಸಾರ್ಥಕತೆ ಹೊಂದಲಿದೆ. ರಾಜ್ಯದ ದಕ್ಷಿಣದ ಹಲವೆಡೆಗಳಲ್ಲಿ ಅತಿವೃಷ್ಠಿ ಹಾಗೂ ತತ್ಪರಿಣಾಮವಾಗಿ ಉಂಟಾದ ದುರಂತಗಳಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ನಾವು ಒದಗಿಸುವ ನೆರವು ಜೀವನದ ಬಹುದೊಡ್ಡ ಕೊಡುಗೆಯಾಗಿ ಅನೇಕರ ಕಣ್ಣೀರೊರೆಸುವಲ್ಲಿ ಕೃತಾರ್ಥತೆ ಪಡೆಯಲಿದೆ ಎಂದು ಅವರು ತಿಳಿಸಿದರು.
   ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಾದ್ಯಂತ ಸವಾಕ್‍ನ ಚಟುವಟಿಕೆಗಳಿಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಾಕೃತಿಕ ವಿಪತ್ತುಗಳಿಂದ ಕಂಗೆಟ್ಟವರಿಗೆ ಸಹಾಯ ಹಸ್ತ ಚಾಚಿರುವ ಸವಾಕ್ ಕಾಲಧರ್ಮಕ್ಕನುಸರಿಸಿ ಸಮಾಜದ ದುಡಿತವನ್ನು ಅರ್ಥೈಸುವಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದು ತಿಳಿಸಿದರು.
     ಕಾಸರಗೋಡು ನಗರಸಭಾಧ್ಯಕ್ಷೆ ಫಾತಿಮಾ ಇಬ್ರಾಹಿಂ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಭಿಯಾನದ ಮೊದಲ ನೆರವನ್ನು ಥಿಯಾಟ್ರಿಕ್ಸ್ ಸೊಸೈಟಿಯ ಜಿಲ್ಲಾ ಖಜಾಂಜಿ ಟಿ.ಟಿ.ಗಂಗಾಧರನ್ ಹಸ್ತಾಂತರಿಸಿದರು. ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ, ಮಾಜಿ ಅಧ್ಯಕ್ಷ ಸನ್ನಿ ಜೋಸೆಫ್, ಕಾಸರಗೋಡು ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಅಶ್ರಫ್ ಅಲಿ ಚೆರೆಕೈ, ಮೋಹನ ನಾಯಕ್, ಭಾರತೀ ಬಾಬು ಕಾಸರಗೋಡು, ಸುರೇಶ್ ಪಣಿಕ್ಕರ್, ಮೋಹಿನಿ, ದಯಾ ಪಿಲಿಕುಂಜೆ, ದಿವಾಕರ ಕಾಸರಗೋಡು, ಯಶೋಧಾ ಸ್ವಾಮಿಕೃಪಾ ಉಪಸ್ಥಿತರಿದ್ದು ಮಾತನಾಡಿದರು. ಲೈಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರನ್ ನಾಯರ್ ಸ್ವಾಗತಿಸಿ, ಸವಾಕ್ ಜಿಲ್ಲಾ ಕಾರ್ಯದರ್ಶಿ ಸನ್ನಿ ಅಗಸ್ಟಿನ್ ವಂದಿಸಿದರು.     
    ಬಳಿಕ ಕಲಾಯಾತ್ರೆಯು ಮಧ್ಯಾಹ್ನ ಬೋವಿಕ್ಕಾನ ತಲುಪಿತು. ಬೋವಿಕ್ಕಾನದಲ್ಲಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಗೋವಿಂದ ಬಳ್ಳಮೂಲೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಉದ್ಯಮಿ ಗಣೇಶ ನಾಯಕ್ ಬೋವಿಕ್ಕಾನ ಉದ್ಘಾಟಿಸಿ ಶುಭ ಹಾರೈಸಿದರು.  ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲಿಯಾನ್ ಅಧ್ಯಕ್ಷತೆ ವಹಿಸಿ ಯೋಜನೆಯ ಸಮಗ್ರ ಮಾಹಿತಿಗಳನ್ನಿತ್ತರು.  ಬಳಿಕ ಸವಾಕ್ ಕಲಾವಿದರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಿತು. ಸವಾಕ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಸನ್ನಿ ಅಗಸ್ಟಿನ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries