ಕಾಸರಗೋಡು: ಯಾವುದೇ ತರಬೇತಿ ಇಲ್ಲದೆಯೇ, ಸ್ವಯಂ ಪ್ರೇರಣೆಯಿಂದ ಎದುರಾಳಿ ಕ್ರೀಡಾಳುವನ್ನು ಸುಲಭದಲ್ಲಿ ಚಳ್ಳೆಹಣ್ಣು ತಿನ್ನಿಸಿ ತಮ್ಮದೇ ಶೈಲಿಯಲ್ಲಿ ಕಾಲ್ಚೆಂಡನ್ನು ಗುರಿಯತ್ತ ಒಯ್ಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸ್ಥಳೀಯ ಕ್ರೀಡಾ ಪ್ರತಿಭೆ ಮಹರೂಫ್ ಮುಂದೆ ಕಾಲ್ಚೆಂಡು ಪಂದ್ಯಾಟ ಪ್ರಪಂಚ ಅವಕಾಶಗಳ ಕದತೆರೆದು ಸ್ವಾಗತಿಸಿದೆ.
ಜಿಲ್ಲೆಯ ಪರಪ್ಪ ದೇಲಂಪಾಡಿ ನಿವಾಸಿ, 12 ವರ್ಷ ಪ್ರಾಯದ ಬಾಲಕ ಮೆಹರೂಫ್ ಕಾಸರಗೋಡಿನ `ಲಿಟಲ್ ಮೆಸ್ಸಿ' ಎಂದೇ ಜನರ ಮಧ್ಯೆ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇವರಿಗೆ ಉತ್ತಮ ತರಬೇತಿ, ಬೇಕಾದ ಸಹಾಯ-ಸಹಕಾರ ಒದಗಿಸಲು ರಾಜ್ಯ ಸರಕಾರ ಮುಂದಾಗಿದೆ.
ಈ ಸಕಾರಾತ್ಮಕ ಬೆಳವಣಿಗೆಯ ಅಂಗವಾಗಿ ಜಿಲ್ಲಾ ಕ್ರೀಡಾ ಮಂಡಳಿಯ ಅಧ್ಯಕ್ಷ ಪಿ.ಹಬೀಬ್ ರಹಮಾನ್, ಕಾರ್ಯದರ್ಶಿ ಕೆ.ವಿ.ರಾಘವನ್ ನೇತೃತ್ವದ ತಂಡ ಮಹರೂಫ್ ಅವರನ್ನು ಭೇಟಿಮಾಡಿದೆ. ಯಾವ ತರಬೇತಿಯೂ ಇಲ್ಲದೆಯೇ ಅಪಾರ ಸಾಧ್ಯತೆಗಳನ್ನು ತೋರುತ್ತಿರುವ ಈ ಬಾಲಕನಿಗೆ ಮಂಡಳಿಯ ತಂಡ ಫುಟ್ಬಾಲ್ ಕಿಟ್ ಕೊಡುಗೆಯಾಗಿ ನೀಡಿದೆ.
ಮಹರೂಫ್‍ನ ಆಕಾಂಕ್ಷೆಯಂತೆಯೇ ಉತ್ತಮ ಪೆÇ್ರಫೆಷನಲ್ ಸಂಸ್ಥೆಗಳಿಂದ ಅತ್ಯುತ್ತಮ ತರಬೇತು ಕೊಡಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಪಿ.ಹಬೀಬ್ ರಹಮಾನ್ ತಿಳಿಸಿದರು. ಬಾಲಕನಿಗೆ ಒಪ್ಪಿಗೆಯಿದ್ದರೆ ಪ್ರಧಾನ ಕ್ರೀಡಾ ತರಬೇತು ಸಂಸ್ಥೆಯಾಗಿರುವ ತಿರುವನಂತಪುರದ ಜಿ.ವಿ.ರಾಜಾ ಕ್ರೀಡಾ ಶಾಲೆಯಲ್ಲಿ ಪ್ರವೇಶಾತಿ ಒದಗಿಸಲು ಸರಕಾರ ಸಿದ್ಧವಿದೆ ಎಂದವರು ನುಡಿದರು.
ಕಾಲ್ಚೆಂಡನ್ನು ತನಗೆ ಬೇಕಾದಂತೆ ಚಲಾಯಿಸುವ ಚಮತ್ಕಾರ ತೋರುವ ಈತನಿಗೆ ಸಹಾಯ ಒದಗಿಸಲು ಅನೇಕ ಸಂಘ-ಸಂಸ್ಥೆಗಳು ಮುಂದೆ ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇದರಲ್ಲಿ ಪ್ರಧಾನವಾಗಿ ಫಿಫಾ ಮತ್ತು ಯುವೇಫ ಅಂಗೀಕಾರ ಹೊಂದಿರುವ ಲಂಡನ್‍ನ ಇನ್‍ವೆಂಟೀವ್ ಸ್ಪೋಟ್ರ್ಸ್ ಎಂಬ ಫುಟ್ಬಾಲ್ ಕನ್ಸೆಂಟೆನ್ಸಿ ಮುಂದೆ ಬಂದಿದೆ ಎಂದು ಸಂಸ್ಥೆಯ ಭಾರತೀಯ ಏಜೆಂಟ್, ಭಾರತೀಯ ಕ್ರೀಡಾಳುಗಳ ಕರಾರು ಚಟುವಟಿಕೆಗಳಿಗಾಗಿ ದುಡಿಯುತ್ತಿರುವ, ಮೊಗ್ರಾಲ್ ನಿವಾಸಿ ಷಕೀಲ್ ಅಬ್ದುಲ್ಲ ನುಡಿದರು.
ಈ ಸಂಸ್ಥೆಯ ಟ್ರಯಲ್ಸ್‍ನಲ್ಲಿ ಭಾಗಿಯಾಗಲು ಮೆಹರೂಫ್‍ಗೆ ಅವಕಾಶ ಒದಗಿಸುವುದಾಗಿ ಸಂಸ್ಥೆಯ ಪದಾಕಾರಿಗಳು ತಮಗೆ ತಿಳಿಸಿರುವುದಾಗಿ ಅವರು ಹೇಳಿದರು. ಟ್ರಯಲ್ಸ್‍ನಲ್ಲಿ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುವುದು. ಇದರ ಪರಿಣಾಮ ರಾಷ್ಟ್ರೀಯ ಮಟ್ಟದ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿದೆ ಎಂದವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಹರೂಫ್ ತೋರಿದ ಚಾಕಚಕ್ಯತೆಯನ್ನು ಮೆಚ್ಚಿ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಜಿ ಬ್ಲಾಸ್ಟರ್ಸ್ ತಾರೆ ಇಯಾನ್ ಹೂಂ, ಸ್ಪಾನಿಷ್ ತಾರೆ ಹಾನ್ಸ್ ಮಾಲ್ಡರ್ ಮೊದಲಾದವರು ಪ್ರಶಂಸೆ ಮಾಡಿದ್ದಾರೆ. ಮೆಹರೂಫ್ ಆಟವನ್ನು ಕೆಮರಾದಲ್ಲಿ ಸೆರೆಹಿಡಿದ ಅವರ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿದ್ದರು.
ಮೆಹರೂಫ್ ಅವರು ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ. ಹಲವು ಅವಕಾಶಗಳು ಕೈಬೀಸಿ ಕರೆಯುತ್ತಿದ್ದರೂ, ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿರುವ ಈತನನ್ನು ದೂರದೂರಿಗೆ ಕಳುಹಿಸಲು ಸಾಧ್ಯವಾಗಿಲ್ಲ ಎಂದು ಬಾಲಕನ ತಂದೆ ಬಿ.ಪಿ.ಮುಹಮ್ಮದ್ ತಿಳಿಸಿದರು. ಕೂಲಿಕಾರ್ಮಿಕ ಮುಹಮ್ಮದ್ ಅವರ ಬಡಕುಟುಂಬದ ಬವಣೆಯ ನಡುವೆಯೂ ಪುತ್ರನ ಕಾಲ್ಚೆಂಡು ಪ್ರತಿಭೆಗೆ ಸಾಧ್ಯವಾದಷ್ಟು ಪೆÇ್ರೀತ್ಸಾಹ ಒದಗಿಸಲು ಯತ್ನಿಸುತ್ತಿರುವುದಾಗಿ ಅವರು ಹೇಳಿದರು. ಇವರಿಗೆ ಲಭಿಸುವ ಪುಟ್ಟ ಸಂಪಾದನೆಯಿಂದ ಪತ್ನಿ ಮಿಸ್ರಿಯಾ, ಪ್ಲಸ್ ಟು ವಿದ್ಯಾರ್ಥಿ ಮರ್‍ಸೂಕ್, 2ನೇ ತರಗತಿಯ ಮಹಸೂಕ್ ಜೊತೆಯಲ್ಲಿ ಮಹರೂಫ್ ಬದುಕುತ್ತಿದ್ದಾರೆ.


