ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಶುಕ್ರವಾರ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಜನ್ಮಾಷ್ಟಮಿ ಉತ್ಸವ ಸಂಪನ್ನಗೊಂಡಿತು. ದೇವಾಲಯ ಪರಿಸರದ ಭಾಗೀರಥಿ ವ್ಯಾಪಾರ ಸಂಕೀರ್ಣದ ಸಮೀಪ ಸ್ಥಳೀಯ ಟೆಂಪಲ್ ರೋಡ್ ಫ್ರೆಂಡ್ಸ್ ಸರ್ಕಲ್(ಟಿ.ಎಫ್.ಸಿ.) ನೇತೃತ್ವದಲ್ಲಿ ಶ್ರೀಕೃಷ್ಣ ಲೀಲೋತ್ಸವ ವೈಭವೋಪೇತವಾಗಿ ನಡೆಯಿತು.
ಕಾರ್ಯಕ್ರಮದ ಮೊದಲಿಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ನಾರಾಯಣ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಕೇರಳ ವಿದ್ಯುತ್ ಪ್ರಸರಣ ಇಲಾಖೆಯ ಕುಂಬಳೆ ಉಪವಿಭಾಗೀಯ ಅಭಿಯಂತರ ಗೋಪಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ದೀಪಕ್ ರಾಜ್ ಕಡಮಣ್ಣಾಯ ಉಪಸ್ಥಿತರಿದ್ದು ಶುಭಹಾರೈಸಿದರು. ಸಂಕೀರ್ತನಕಾರ ಶಂ.ನಾ.ಅಡಿಗ ಕುಂಬಳೆ ಧಾರ್ಮಿಕ ಉಪನ್ಯಾಸ ನೀಡಿ ಶ್ರೀಕೃಷ್ಣನ ತತ್ವಾದರ್ಶಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಹಿರಿಯ ಧಾರ್ಮಿಕ, ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ನಾಯಕ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ರಾಮಚಂದ್ರ ಭಕ್ತ ಸ್ವಾಗತಿಸಿ, ರಾಮ ವಂದಿಸಿದರು. ವಿವೇಕಾನಂದ ಭಕ್ತ ಕಾರ್ಯಕ್ರಮ ನಿರೂಪಿಸಿ, ಸನ್ಮಾನಿತರ ಸಮಾಜ ಸೇವಾ ಕೊಡುಗೆಗಳ ಬಗ್ಗೆ ಮಾತನಾಡಿದರು.
ಬಳಿಕ ಕೃಷ್ಣಲೀಲೋತ್ಸವದ ಅಂಗವಾಗಿ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು.ಸಂಜೆ ಮುದ್ದುಕೃಷ್ಣರೊಳಗೊಂಡ ಭಕ್ತ ವೃಣಂದದವರಿಂದ ಕುಂಬಳೆ ಪೆಟೆಯಲ್ಲಿ ಜನ್ಮಾಷ್ಟಮಿ ಶೋಭಾ ಯಾತ್ರೆ ಸಂಚರಿಸಿ ಶ್ರೀದೇವಳದಲ್ಲಿ ಸಮಾರೋಪಗೊಂಡಿತು. ತುಂತುರು ಮಳೆಯ ಮಧ್ಯೆ ಸಾವಿರಕ್ಕಿಂತಲೂ ಮಿಕ್ಕಿದ ಭಕ್ತಾದಿಗಳು, ಮಾತೆಯರು, ಮಕ್ಕಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.



