ಬದಿಯಡ್ಕ: ಚೆರ್ಕಳ ಕಲ್ಲಡ್ಕ ಅಂತರ್ ರಾಜ್ಯ ರಸ್ತೆಯ ಕರಿಂಬಿಲದಲ್ಲಿ ಗುಡ್ಡಕುಸಿತದಿಂದ ರಸ್ತೆಯಲ್ಲಿ ಜರಿದು ಬಿದ್ದ ಮಣ್ಣು ತೆಗೆಯುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಬದಿಯಡ್ಕ ಪೆರ್ಲ ರಸ್ತೆಯಲ್ಲಿ ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರ ಆರಂಭವಾಗಲಿದೆ ಎಂದು ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದ್ದಾರೆ. ನಿರೀಕ್ಷೆಯಂತೆ ಮಣ್ಣು ತೆರವುಗೊಂಡಲ್ಲಿ ಭಾನುವಾರ ಮಧ್ಯಾಹ್ನ ನಂತರ ವಾಹನಗಳಿಗೆ ಸಂಚರಿಸಲು ಅನುಮತಿ ನೀಡಲಾಗುವುದು. ಸೋಮವಾರ ಬೆಳಿಗ್ಗಿನಿಂದ ವಾಹನಗಳ ಸಂಚಾರಕ್ಕೆ ಅನುವುಮಾಡಿಕೊಡಲು ಎಲ್ಲಾ ಪ್ರಯತ್ನಗಳನ್ನು ನಡೆಸಲಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೀಗ ಕರಿಂಬಿಲದಲ್ಲಿ ಮಣ್ಣು ತೆಗೆಯುವ ಕಾಮಗಾರಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದೆ. ನಿರೀಕ್ಷೆಗಿಂತಲೂ ಹೆಚ್ಚು ಮಣ್ಣು ತೆಗೆಯಲಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಭಾನುವಾರ ಮಧ್ಯಾಹ್ನದೊಳಗೆ ಮಣ್ಣು ತೆಗೆಯುವ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ರಸ್ತೆಯ ಗುಣಮಟ್ಟದ ಪರೀಕ್ಷೆ ನಡೆಯಲಿದೆ. ಸೋಮವಾರದಿಂದ ಶಾಲೆಗಳಲ್ಲಿ ಕಾಲುವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದೆ. ಆದುದರಿಂದ ಸೋಮವಾರದಿಂದಲೇ ಬಸ್ ಸೇವೆ ಆರಂಭಿಸಬೇಕೆಂಬ ಒತ್ತಡ ವಿವಿಧ ಮೂಲಗಳಿಂದ ಉಂಟಾಗಿದೆ. ಇದೀಗ ಪೆರ್ಲ ಬದಿಯಡ್ಕ ರಸ್ತೆಯಲ್ಲಿ ಕರಿಂಬಿಲದ ಮೂಲಕ ಬಸ್ ಸೇವೆ ಇಲ್ಲ. ಒಂದು ಖಾಸಗಿ ಬಸ್ ಮಾತ್ರ ಕಾಸರಗೋಡಿನಿಂದ ವಿಟ್ಲಕ್ಕೆ ಸುತ್ತಿಬಳಸಿ ಸಾಗುತ್ತಿದೆ. ಉಳಿದೆಲ್ಲಾ ಖಾಸಗಿ ಬಸ್‍ಗಳು ಬದಿಯಡ್ಕದಿಂದ ಹಿಂತಿರುಗುತ್ತಿವೆ. ಕೇರಳ ರಾಜ್ಯ ಸಾರಿಗೆ ಬಸ್‍ಗಳು ಮಾಯಿಪ್ಪಾಡಿ ಸೀತಾಂಗೋಳಿ ದಾರಿಯಾಗಿ ಪೆರ್ಲ ಸೇರಿದರೆ, ಕರ್ನಾಟಕ ಸಾರಿಗೆ ಬಸ್‍ಗಳು ಪೆರ್ಲದ ತನಕ ತಲುಪಿ ಹಿಂತಿರುಗುತ್ತಿವೆ.



