ಪೆರ್ಲ: ಪೆರ್ಲ ಸಮೀಪದ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆ, ಗೋಲೋಕದಲ್ಲಿ ಆಷಾಢ ಅಮಾವಾಸ್ಯೆಯ ಆಶ್ಲೇಷಾ ನಕ್ಷತ್ರದ ಅಂಗವಾಗಿ ಗುರುವಾರ ಸಂಜೆ ಲೋಕಕ್ಷೇಮಾರ್ಥವಾಗಿ ಸಾಮೂಹಿಕ ಆಶ್ಲೇಷಾ ಬಲಿ ಸೇವೆಯು ಜರಗಿತು.
ಮಹಾಮಂಡಲ ಧರ್ಮಕರ್ಮ ಸಹಕಾರ್ಯದರ್ಶಿ ವೇದಮೂರ್ತಿ ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ, ಮಂಗಳೂರು ಮಂಡಲ ವೈದಿಕ ಪ್ರಧಾನ ವೇದಮೂರ್ತಿ ಶಿವಪ್ರಸಾದ ಅಮೈ, ವೇದಮೂರ್ತಿ ಶ್ರೀನಿಧಿ ಬಾಳೆಹಿತ್ತಿಲು, ವೇದಮೂರ್ತಿ ಮಹೇಶ ಉಪಾಧ್ಯಾಯ ಮಣಿಮುಂಡ, ವೇದಮೂರ್ತಿ ಪ್ರಮೋದ ಕುಡಾಣ ಹಾಗು ಪ್ರವೀಣ ಅಡಿಗ ಬಜಕೂಡ್ಲು ಇವರ ಸಹಕಾರದಲ್ಲಿ ಗುರುವಂದನೆ ಹಾಗು ಪ್ರಾರ್ಥನೆಯೊಂದಿಗೆ ಆಶ್ಲೇಷಾ ಬಲಿ, ಗೋಪಾಲಕೃಷ್ಣ ಪೂಜೆ, ಗೋಪೂಜೆ, ಭಜನೆ ಜರಗಿತು.
ಭಕ್ತರು ಆಶ್ಲೇಷಾ ಬಲಿ ಸೇವಾ ಸಂಕಲ್ಪದೊಂದಿಗೆ ಪುಣ್ಯ ಕಾರ್ಯದಲ್ಲಿ ಭಾಗಿಯಾದರು. ಮಹಾಲಿಂಗೇಶ್ವರ ಭಜನಾ ಮಂಡಳಿ ಬಜಕೂಡ್ಲು ಇವರಿಂದ ಭಜನಾ ಸೇವೆ ಜರಗಿತು. ಮುಳ್ಳೇರಿಯಾ ಹವ್ಯಕ ಮಂಡಲ ಪದಾಧಿಕಾರಿಗಳು, ವಲಯ ಪದಾಧಿಕಾರಿಗಳು, ಗುರಿಕ್ಕಾರರು, ಶ್ರೀಕಾರ್ಯಕರ್ತರು, ಶ್ರೀ ಮಠದ ಶಿಷ್ಯರು, ಗೋಶಾಲೆ ಪದಾಧಿಕಾರಿಗಳು, ಕಾರ್ಯಕರ್ತರು, ಗೋಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


