HEALTH TIPS

ಭಾಷೆಯ ಕುರಿತು ಅಭಿಮಾನವಿರಲಿ, ದುರಭಿಮಾನ ಸಲ್ಲ - ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿ

         
      ಕಾಸರಗೋಡು:  ದೇಶದ ಯಾವುದೇ ಭಾಗದಲ್ಲೇ ಆಗಲಿ ಯಾವುದೇ ಭಾಷೆಯ  ಕುರಿತು ಅಭಿಮಾನ ಮಾತ್ರ ಇರಬೇಕೇ ಹೊರತು ದುರಭಿಮಾನ ಇರಬಾರದು ಎಂದು   ಶ್ರೀಮದ್ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತಿ ಶ್ರೀ ಪಾದಂಗಳವರು ಅಭಿಪ್ರಾಯಪಟ್ಟರು.
       2019-20ನೇ ಸಾಲಿನಲ್ಲಿ ಕೇರಳ ಮತ್ತು ತಮಿಳುನಾಡು ರಾಜ್ಯಗಳ  ಶಾಲಾಕಾಲೇಜುಗಳಲ್ಲಿ ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ  ಅತಿ ಹೆಚ್ಚು  ಅಂಕ  ಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಎಡನೀರು ಮಠದ ಸಭಾಂಗಣದಲ್ಲಿ  ಸೋಮವಾರ ನಡೆದ  ಸಮಾರಂಭದಲ್ಲಿ ಕನ್ನಡ ಮಾಧ್ಯಮ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ  ವಹಿಸಿ ಶ್ರೀಗಳು ಆಶೀರ್ವಚನ  ನೀಡಿದರು.
       ಅಭಿಮಾನದಿಂದ ಒಳಿತಾದರೆ, ದುರಭಿಮಾನದಿಂದ ಕೆಡುಕೇ ಆಗುತ್ತಾದ್ದಾದ್ದರಿಂದ ನಾಡು, ನುಡಿ, ಭಾಷೆ ಕುರಿತು ಪ್ರತಿಯೊಬ್ಬರೂ ಅಭಿಮಾನ ಹೊಂದವುದೇ ಒಳಿತು ಎಂದರು.
        ಕೇರಳದ ಗಡಿಭಾಗದ ಇಲ್ಲಿ ನಾವು 1970ರ ದಶಕದಲ್ಲಿ ನಮ್ಮ  ಸಂಸ್ಥೆಯ ಶಾಲೆಗಳಿಗೆ ಕೇರಳ ಸರ್ಕಾರದ ಭಾಷ ನೀತಿಯಿಂದ ತೊಂದರೆಯಾದಾಗ ಕರ್ನಾಟಕ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸು ಅವರು ಮಧ್ಯಪ್ರವೇಶಿಸಿ  ಕೇರಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿ ನಮಗೆ ಅನುಕೂಲ ಕಲ್ಪಿಸಿಕೊಟ್ಟರು. ಅವರ ಸಹಾಯವನ್ನು ನಮ್ಮ ಸಂಸ್ಥೆ ಹಾಗೂ ನಾವು ಎಂದೆಂದೂ ಗೌರವ ಪೂರ್ವಕವಾಗಿ ಮನದಾಳದಿಂದ ಸ್ಮರಿಸಿಕೊಳ್ಳುತ್ತೇವೆ ಎಂದು ಶ್ರಿಗಳು ಹೇಳಿದರು.
      ಗಡಿಭಾಗದ  ಇಲ್ಲಿ ಕನ್ನಡ ಕಾರ್ಯಕ್ರಮಗಳು ನಡೆಯುತ್ತಿರುವುದು ನಮಗೆ ತುಂಬಾ ಸಂತಸದ ವಿಷಯ. ಹಾಗೆಯೇ ಕನ್ನಡದ ಎಲ್ಲ ಕಾರ್ಯಕ್ರಮಗಳಿಗೆ ನಮ್ಮ ಶ್ರೀಮಠ ಎಂದೆಂದೂ ಸಹಕಾರ ನೀಡುತ್ತಲೇ ಇರುತ್ತದ ಎಂದ ಶ್ರೀಗಳು ಪ್ರಶಸ್ತಿ ಪುರಸ್ಕøತ ಮಕ್ಕಳು,   ಇದಕ್ಕೆ ಕಾರಣರಾದ ಕರ್ನಾಟಕ ಸರ್ಕಾರ  ಮತ್ತು ಕನ್ನಡ ಅಭಿವೃದ್ಧಿ  ಪ್ರಾಧಿಕಾರವನ್ನು ಅಭಿನಂದಿಸಿ ಸಂತೋಷ ವ್ಯಕ್ತಪಡಿಸಿದರು.
      ಗಡಿನಾಡಿನಲ್ಲಿ  ಕನ್ನಡ ಮಾಧ್ಯಮದ ಶಾಲೆ ನಡೆಸುತ್ತಿರುವ ನಮ್ಮ ಅನುಭವದ  ಆಧಾರದಲ್ಲಿ ಹೇಳಬೇಕೆಂದರೆ,  ಕರ್ನಾಟಕದಲ್ಲಿ ನೀವು ಎಷ್ಟು ಬಿಗಿ ಮಾಡುತ್ತೀರೋ ಅದಕ್ಕಿಂದ ಹತ್ತುಪಟ್ಟು ಬಿಗಿಯನ್ನು ನಾವು ಇಲ್ಲಿನ ಸರ್ಕಾರದಿಂದ ಎದುರಿಸಬೇಕಾಗುತ್ತದೆ. ಹಾಗಾಗಿ ಕರ್ನಾಟಕ ಸರ್ಕಾರವೂ ಸಹ ಕನ್ನಡದಂತೆ ಅಲ್ಲಿ ತಮಿಳು, ಮಲೆಯಾಳಿ, ತೆಲುಗು ಎಲ್ಲರಿಗೂ ಸಮಾನ ಅವಕಾಶ  ನೀಡಿದರೆ ಇಲ್ಲಿ ನಮಗೂ ಹೆಚ್ಚಿನ ಅನುಕೂಲವಾಗುತ್ತದೆ ಎಂದರು. ಹಾಗಾಗಿಯೇ ಎಲ್ಲಿಯೇ ಆಗಲಿ ಭಾಷೆ ಕುರಿತು ಅಭಿಮಾನ ಮಾತ್ರವೇ ಇರಲಿ ಎಂದರು ಶ್ರೀಗಳು ಹೇಳಿದರು.
     ಇದೇ ರೀತಿಯ ತೊಂದರೆ ಇತ್ತೀಚಿಗೆ ಎದುರಾದಾಗ ಕೇರಳ ಸಿಎಂ  ಅವರನ್ನು ಕಂಡು ಪರಿಹರಿಸಲು ಈ ಭಾಗದ ಇಬ್ಬರು ಶಾಸಕರು ನೀಡಿದ  ಸಹಾಯ ಸಹಕಾರವನ್ನು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಮುಕ್ತ ಕಂಠದಿಂದ ಪ್ರಶಂಸಿದರು.
      ಕಾರ್ಯಕ್ರಮ  ಉದ್ಘಾಟಿಸಿ, ಪ್ರಶಸ್ತಿ ಪತ್ರಗಳನ್ನು ವಿತರಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಸ್.  ಎಡಪಡಿತ್ತಾಯ ಮಾತನಾಡಿ, ನಾವು ಎಲ್ಲಿಯೇ ಇರಲಿ ನಮ್ಮ ಮಾತೃಭಾಷೆ ಕುರಿತು ಅಭಿಮಾನ ಹೊಂದಿ  ತಾಯಿ ಭಾಷೆಯನ್ನು ಉಳಿಸಲು ಪ್ರಯತ್ನಿಸುವುದು ನಮ್ಮ ಕರ್ತವ್ಯವಾಗಿದೆ  ಎಂದರು. ಕೇವಲ  ಸರ್ಕಾರ ಕನ್ನಡ ಬಳಕೆ ಮಾಡುವ ಕುರಿತು ಆದೇಶ ಪಾಲಿಸಲಷ್ಟೇ ಕನ್ನಡ  ಬಳಕೆ  ಮಾಡುವುದಲ್ಲ, ಅದನ್ನು ನಾವು ಅಭಿಮಾನದಿಂದ, ಮನಸ್ಸಿನಾಳದಿಂದ ಪಾಲನೆ ಮಾಡಬೇಕು, ಆ ಮೂಲಕ  ನಮ್ಮ ಭಾಷೆಯ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
    ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಕಾಸರಗೋಡು ಶಾಸಕ ಎನ್.ಎ. ನಲ್ಲಿಕುನ್ನು ಮಾತನಾಡಿ, ಕನ್ನಡ  ಮಾಧ್ಯಮ ವಿದ್ಯಾರ್ಥಿಗಳ ಹಿತರಕ್ಷಣೆಗೆ ನಾನು ಸದಾ ಸಿದ್ಧವಿದ್ದು, ಈ ಕುರಿತು ಕೇರಳ  ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇನೆ  ಎಂದರು. ನಮಗೆ ಕನ್ನಡ ಮಲೆಯಾಳಿ ಭಾಷೆ ಎಂಬ ಭೇದವಿಲ್ಲ.  ಎಲ್ಲ ಭಾಷೆಯ ಕುರಿತು ಗೌರವ ಭಾವನೆ ಹೊಂದಿದೇನೆ ಎಂದರು. ಇಲ್ಲಿ ಕನ್ನಡ  ಮಾಧ್ಯಮದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಕುರಿತು ನಮ್ಮ ಸರ್ಕಾರದೊಂದಿಗೆ ಮಾತನಾಡುವುದಾಗಿ    ಭರವಸೆ ನೀಡಿದರು.
ಉದುಮ ಶಾಸಕ ಕು??? ರಾಮನ್ ಮಾತನಾಡಿ, ಕನ್ನಡ ಮಾಧ್ಯಮದ ಶಾಲೆಗಳ  ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಮ್ಮ  ಸರ್ಕಾರದಿಂದ ಆಗಬೇಕಾದ ಕೆಲಸಗಳ  ಕುರಿತು ನಾನು ಸರ್ಕಾರದೊಂದಿಗೆ ಚರ್ಚಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
      ಜಿ.ಪಂ ಸದಸ್ಯ ಕೆ. ಶ್ರೀಕಾಂತ್ ಮಾತನಾಡಿ,  ಕೇಂದ್ರದ ಯುಪಿಎಸ್ ಸಿ ಪರೀಕ್ಷೆಗಳು ನಮ್ಮ ಗಡಿನಾಡಿನ ಭಾಗದಲ್ಲಿ ನಡೆಯುವಂತೆ ಮಾಡಲು ಇಲ್ಲಿನ ಕನ್ನಡಿಗರು ಹೋರಾಡಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಕಾಸರಗೋಡಿನಲ್ಲಿ  ಸರ್ಕಾರಿ ಕಾಲೇಜಿನಲ್ಲಿ ಕನ್ನಡ  ಸ್ನಾತಕೋತ್ತರ  ಕೋರ್ಸ್ ತೆರೆಯಲು  ಈ ಭಾಗದ ಕನ್ನಡಿಗರು ನಡೆಸಿದ  ಹೋರಾಟವನ್ನೂ  ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು. 
      ನಮ್ಮ ಗಡಿನಾಡಿನಲ್ಲಿ ಕನ್ನಡ ಭಾಷೆಯನ್ನು ಬೆಳೆಸಿ  ನಮ್ಮ  ವಿದ್ಯಾರ್ಥಿಗಳು  ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗಿಯಾಗಲು ಅನುಕೂಲವಾಗುವಂತೆ ಕನ್ನಡ  ಕೋಚಿಂಗ್ ಘಟಕವೊಂದನ್ನು ತೆರೆಯಲು ಕರ್ನಾಟಕ ಸರ್ಕಾರ ಮುಂದಾಗಬೇಕು  ಎಂದು  ಆಗ್ರಹಿಸಿದ ಶ್ರೀಕಾಂತ್,  ನಾವು ಎಲ್ಲಿಯೇ  ಇರಲಿ ನಮ್ಮ ತಾಯಿ ನುಡಿಯ  ಕುರಿತು ಅಭಿಮಾನ ಹೊಂದಬೇಕು,   ಹಾಗೆಯೇ ನಾವು  ಯಾವುದೇ ಭಾಷೆಯ  ವಿರೋಧಿಗಳೂ ಆಗಬಾರದು  ಎಂದರು. 
    ಗಡಿನಾಡಿನಲ್ಲಿ ನಾವು ಭಾಷಾ ಅಲ್ಪಸಂಖ್ಯಾತರಾಗಿದ್ದು, ಕೇರಳ ಸರ್ಕಾರದಿಂದ ನಾವು ನಮಗೆ ದೊರೆಯಬೇಕಾದ ಸೌಲಭ್ಯಗಳನ್ನು ಪಡೆಯಲು ಯಾವುದೇ ಅಳುಕಿಲ್ಲದೇ ಹೋರಾಟ ನಡೆಸಬೇಕು ಎಂದರು. ನಾವೇನು  ಅವರಿಂದ ಭಿಕ್ಷೆ ಕೇಳುತ್ತಿಲ್ಲ.  ಅದನ್ನು ಪಡೆಯುವುದು ನಮ್ಮ ಹಕ್ಕು ಎಂದು ಅವರು ಅಭಿಪ್ರಾಯಪಟ್ಟರು.
      ಕಾಸರಗೋಡು ಲೋಕಸಭಾ ಸದಸ್ಯ ರಾಜಮೋಹನ್ ಉಣ್ಣಿತ್ತಾನ್, ಕಾಸರಗೋಡು ಸರ್ಕಾರಿ ಕಾಲೇಜು ಸ್ನಾತಕೋತ್ತರ ಮತ್ತು ಸಂಶೋಧನಾಕೇಂರದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ಸುಜಾತ,  ಎಡನೀರು ಮಠದ ಪ್ರಧಾನ ವ್ಯವಸ್ಥಾಪಕ ಐ.ಬಿ. ಭಟ್, ಕರ್ನಾಟಕ ಗಮಕಕಲಾ ಪರಿಷತ್ತಿನ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್, ಗೋವಾದ ಯಲ್ಲಾ ಲಿಂಗೇಶ್ವರ ಶಾರದಾ ಮಂದಿರ ಪ್ರೌಢಶಾಲೆ ಅಧ್ಯಕ್ಷ ವೈ.ಆರ್. ಬೆಳಗಲ್, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಕೆ.ಆರ್. ರವೀಂದ್ರನಾಥ್ ಮತ್ತಿತರರು ಮಾತನಾಡಿದರು. 
       ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.  ಕೆ. ಮುರಳೀಧರ ಪ್ರಸ್ತಾವಿಕವಾಗಿ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಧ್ಯೇಯೋದ್ದೇಶಗಳು ಮತ್ತು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ಕನ್ನಡ ವಾತಾವರಣವೇ ಕಾಣದ ಗಡಿಯಾಚೆಗಿನ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗೋವಾ ಹಾಗೂ ಮಹಾರಾಷ್ಟ್ರದಂತಹ ರಾಜ್ಯಗಳ ನೆಲದಲ್ಲಿ ಕನ್ನಡ ಮಾಧ್ಯಮವನ್ನೇ ಶಿಕ್ಷಣವನ್ನಾಗಿಸಿಕೊಂಡು ಕನ್ನಡದ ಕೀರ್ತಿ ಪತಾಕೆ ನೆಟ್ಟ ಪ್ರತಿಭೆಗಳನ್ನು ಪುರಸ್ಕರಿಸುವುದು ಕರ್ನಾಟಕ ಸರ್ಕಾರಕ್ಕೆ ಬಹುದೊಡ್ಡ ಹೆಮ್ಮೆಯ ವಿಷಯವಾಗಿದೆ ಎಂದರು. 
     ಶಿಕ್ಷಣದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, 2017ರಲ್ಲಿ  ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿಯನ್ನು     ಪ್ರಾಧಿಕಾರವು ಸಲ್ಲಿಸಿ ಕನ್ನಡ ಭಾಷೆ ಉಳಿಯುವ ನಿಟ್ಟಿನಲ್ಲಿ ನೀಲನಕ್ಷೆಯನ್ನು  ಸರ್ಕಾರಕ್ಕೆ ಒದಗಿಸಿದೆ ಎಂದರು.
     ಡಾ. ಸರೋಜಿನಿ  ಮಹಿಷಿ ಪರಿಷ್ಕøತ ವರದಿಯ ಫಲಶ್ರುತಿಯಾಗಿ ಕರ್ನಾಟಕ ಸರ್ಕಾರವು ಖಾಸಗಿ ಕ್ಷೇತ್ರದ ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ಕಲ್ಪಿಸುವ ಮಸೂದೆಯನ್ನು ಹೊರತರುತ್ತಿದೆ. ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿಗೆ ಅನುಗುಣವಾಗಿ ಆರ್.ಟಿ.ಇ. ಕಾಯಿದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಅವರು ಹೇಳಿದರು.
       ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಒತ್ತಾಂiÀದ ಮೇರೆಗೆ ಕರ್ನಾಟಕ ಸರ್ಕಾರವು ಹೊರನಾಡಿನ ಕನ್ನಡಿಗರಿಗೆ ಕರ್ನಾಟಕ ರಾಜ್ಯದಲ್ಲಿ ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಶೇ. 5ರ ಸಮತಳ ಮೀಸಲಾತಿಯನ್ನು ಈಗಾಗಲೇ ಕಲ್ಪಿಸಲಾಗಿದೆ. ಸೀಮಾತೀತವಾಗಿ ಕನ್ನಡ ಪ್ರ ಜ್ಞೆ ಯನ್ನು ಉಳಿಸುವ ಪ್ರಾಧಿಕಾರದ ಆಶಯಕ್ಕೆ ಸರ್ಕಾರದ ಈ ನಿರ್ಧಾರ ಪೂರಕವಾಗಿದೆ ಎಂದು ಅವರು ಹೇಳಿದರು.  ಹೊರನಾಡಿನಲ್ಲಿ ಕನ್ನಡ ಕಲಿಯಲು ಅಗತ್ಯವಾದ ಮಾರ್ಗದರ್ಶನಗಳಿಗೆ ಪ್ರಾಧಿಕಾರದಿಂದ ಅಗತ್ಯ; ಸಹಕಾರ ನೀಡುವುದಾಗಿ ಪ್ರಕಟಿಸಿದರು. 
        ಕೇರಳ ಮತ್ತು ಗೋವಾ ರಾಜ್ಯದಲ್ಲಿ  ಕನ್ನಡ  ಉಳಿಸಿ ಬೆಳೆಸುತ್ತಿರುವ ಕನ್ನಡ ಶಾಲೆಗಳ ಶಿಕ್ಷಕರಾದ ಕೂಡ್ಲುವಿನ ವಿಶಾಲಾಕ್ಷ ಪುತ್ರಕಳ, ಕಾಟುಕುಕ್ಕೆ ಸುಧೀರ್ ಕುಮಾರ್, ಮಂಜೇಶ್ವರದ ಸುಕೇಶ್ ಕುಮಾರ್, ಪೈವಳಿಕೆ ನಗರದ ಶಶಿಕಲಾ, ಮಂಗಲ್ವಾಡಿಯ ಸುನೀತಾ, ಕುಂಬ್ಳೆಯ ಸಹಾಯಕ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ, ಬಂಡಬೆಟ್ಟದ ಸತ್ಯನಾರಾಯಣ ಪ್ರಕಾಶ್, ಅಗಲಪಾಡಿಯ ರಾಜಶೇಖರ, ಎಡನೀರು ಶಾಲೆಯ ಹರೀಶ್ ಮತ್ತು ವೆಂಕಟಕೃಷ, ಆಡೂರಿನ ಅನೀಸ್ ಜಿ. ಮೂಸಾನ್,  ಗೋವಾ  ಶಾಲೆಯ ಯಲ್ಲಾ ಲಿಂಗೇಶ್  ಮತ್ತು ಕನ್ನಡ ಪ್ರೇಮಿಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. 
        ಕೇರಳ  ರಾಜ್ಯದ 92 ಮತ್ತ ಗೋವಾ ರಾಜ್ಯದ 6   ವಿದ್ಯಾರ್ಥಿಗಳಿಗೆ  2019-2020ನೇ ಸಾಲಿನ  ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.   ಪ್ರಥಮ ನಗದು ಬಹುಮಾನ 10,000 ರೂ., ದ್ವಿತೀಯ 9,000 ರೂ., ತೃತೀಯ ಬಹುಮಾನ 8,000 ರೂ.ಗಳನ್ನು ಸೇರಿದಂತೆ ಪ್ರಶಸ್ತಿ ಪತ್ರಗಳನ್ನು  ವಿವರಿಸಲಾಯಿತು. ಜೊತೆಗೆ ಪ್ರಶಸ್ತಿ ಪುರಸ್ಕøತ ವಿದ್ಯಾರ್ಥಿ, ತಂದೆ ಹಾಗೂ ತಾಯಿ ಸೇರಿದಂತೆ ಮೂವರಿಗೆ ಅವರ ಸ್ವಂತ ಸ್ಥಳದಿಂದ ಕಾಸರಗೋಡು ನಗರಕ್ಕೆ   ಬಂದು  ಹೋಗುವ ಪ್ರಯಾಣ ವೆಚ್ಚವನ್ನೂ ಸಹ ಇದೇ ಸಂದರ್ಭದಲ್ಲಿ  ನೀಡಲಾಯಿತು.
        ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ ಸ್ವಾಗತಿಸಿ, ವಂದಿಸಿದರು.   ಅನುಷಾಗೌಡ  ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಮಧ್ಯೆ ಮಧ್ಯೆ ಕನ್ನಡ ಕಲಾವಿದರಿಂದ ಗೀತಗಾಯನ ಹಾಗೂ  ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಸಮಾರಂಭಕ್ಕೆ ಕಾಸರಗೋಡು,  ಪೆರ್ಲ ಮತ್ತಿತರ ಭಾಗಗಳ    ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡ ಪ್ರೇಮ ಮೆರೆದಿದ್ದು,   ಸಮಾರಂಭಕ್ಕೆ ಹೆಚ್ಚಿನ ಕಳೆ ತಂದಿತ್ತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries