ಕುಂಬಳೆ: ತೀವ್ರ ಹೊಂಡಗುಂಡಿಗಳಿಂದ ಕೂಡಿ ಸಂಚಾರಕ್ಕೆ ತೊಡಕಾಗಿರುವ ಕಾಸರಗೋಡು ತಲಪಾಡಿ ರಾಷ್ಟ್ರೀಯ ಹೆದ್ದಾರಿಯನ್ನು ಕೂಡಲೇ ಸಂಚಾರಯೋಗ್ಯಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ಜಿಲ್ಲೆಯಲ್ಲೇ ಸ್ಥಗಿತ ಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಇಳಿಯುವುದಾಗಿ ಆಂಬ್ಯುಲೆನ್ಸ್ ಓನರ್ಸ್ ಆಂಡ್ ಡ್ರೈವರ್ಸ್ ಅಸೋಶಿಯೇಶನ್ ಜಿಲ್ಲಾಧ್ಯಕ್ಷ ಮುನೀರ್ ಚೆಮ್ನಾಡ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘಟನೆಯ ಜಿಲ್ಲಾ ಸಮಿತಿ ಹಮ್ಮಿಕೊಂಡಿರುವ ಜೀವ ಕಾರುಣ್ಯದ ಭಾಗವಾಗಿ ಈ ಬಾರಿಯೂ ಸುಮಾರು 5 ಲಕ್ಷ ರೂ. ಮೊತ್ತದ ಸಾಮಾಗ್ರಿಗಳನ್ನು ಕೇರಳದಲ್ಲಿ ಪ್ರಳಯ ದುರಂತ ಅನುಭವಿಸಿದವರಿಗೆ ನೀಡಲು ಸೋಮವಾರ ಪ್ರಯಾಣ ಬೆಳೆಸುವುದಾಗಿ ಅವರು ತಿಳಿಸಿದರು.
ತೀವ್ರ ಚಿಂತಾಜನಕ ಸ್ಥಿತಿಯಲ್ಲಿ ತುರ್ತು ಚಿಕಿತ್ಸೆಗಾಗಿ ದೌಡಾಯಿಸಲು ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಧ್ಯವಾಗುತ್ತಿಲ್ಲ. ಹೆದ್ದಾರಿ ಯೋಗ್ಯವಾಗಿದ್ದಲ್ಲಿ ಅರ್ಧ ಗಂಟೆಯಲ್ಲಿ ಕಾಸರಗೋಡಿಂದ ಮಂಗಳೂರಿಗೆ ತಲಪಬಹುದಾಗಿದ್ದರೆ, ಇದೀಗ ಒಂದೂವರೆ ಗಂಟೆಗಳಷ್ಟು ಸಮಯ ವ್ಯಯವಾಗುತ್ತಿದೆ. ಇದರಿಂದ ರೋಗಿಗಳ ಸ್ಥಿತಿ ಉಲ್ಬಣಗೊಂಡು ರೋಗಿಗಳ ಸಂಬಂಧಿಕರಿಂದ ಹತಾಶೆಯ ಮಾತುಗಳನ್ನು ಕೇಳಬೇಕಾಗುತ್ತಿದೆ. ಅಲ್ಲದೆ ಚಿಂತಾಜನಕ ಸ್ಥಿತಿಯ ರೋಗಿಗಳು ರಸ್ತೆಯ ಉಬ್ಬುತಗ್ಗುಗಳಲ್ಲಿ ಅನುಭವಿಸುವ ನೋವಿನ ಚೀತ್ಕಾರಗಳು ಕರುಳು ಹಿಂಡುತ್ತದೆ ಎಮದು ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ತಲಪಾಡಿಯಲ್ಲಿರುವ ಟೋಲ್ ಗೇಟ್ ಸಿಬ್ಬಂದಿಗಳು ರೋಗಿಯನ್ನು ಕೊಂಡೊಯ್ಯುತ್ತಿರುವ ಆಂಬ್ಯುಲೆನ್ಸ್ ಸಾಗಬೇಕದ ಫಾಸ್ಟ್ ಟ್ರೇಕ್ ನಲ್ಲಿ ಬೇರೆ ವಾಹನಗಳನ್ನು ಬಿಡುತ್ತಿರುವುದು ಆಸ್ಪತ್ರೆಗೆ ತಲುಪಲು ಇನ್ನಷ್ಟು ವಿಳಂಭಕ್ಕೆ ಕಾರಣವಾಗುತ್ತಿರುವುದಾಗಿಯೂ ಅವರು ಬೊಟ್ಟುಮಾಡಿದರು.
ಕಾಸರಗೋಡು ಜಿಲ್ಲೆಯಲ್ಲಿ ಇಂದು ಉತ್ತಮ ಸೌಲಭ್ಯದ ಆಸ್ಪತ್ರೆ ಇಲ್ಲದಿರುವುದು ಕಾಸರಗೋಡಿನ ಜನತೆಗೆ ಅಪಮಾನ ಕಾರ್ಯವಾಗಿದೆ. ಕೂಡಲೇ ಒಂದು ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸಲು ಸಂಬಂಧಪಟ್ಟವರು ಗಮನ ಹರಿಸುವಂತೆ ಮನವಿಯನ್ನು ನೀಡುವುದಾಗಿಯೂ ಅವರು ತಿಳಿಸಿದರು.
ತುರ್ತು ಸಂದರ್ಭಗಳಲ್ಲಿ ಉಚಿತವಾದ ಆಂಬ್ಯುಲೆನ್ಸ್ ಸೇವೆ ಬೇಕಾದರೆ ದಿನದ 24 ತಾಸುಗಳಲ್ಲೂ 7593822114 ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆಯೂ ಅವರು ವಿನಂತಿಸಿಕೊಂಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕಾರ್ಯದರ್ಶಿ ಅಸ್ಲಂ ಕುಂಜತ್ತೂರು, ರಾಜೇಶ್ ಉಪ್ಪಳ, ಸಾಫಿ ಡಿ.ಎಂ., ರಿಯಾಝ್ ಉಪ್ಪಳ, ಅದ್ನಾನ್ ಕುಂಜತ್ತೂರು ಉಪಸ್ಥಿತರಿದ್ದರು.


