ಬದಿಯಡ್ಕ: ನಮ್ಮ ಹಿರಿಯರು ತ್ಯಾಗ, ಬಲಿದಾನಗಳ ಮೂಲಕ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ಒಬ್ಬ ಪೌರನು ತನ್ನ ಸ್ವಾತಂತ್ರ್ಯವನ್ನು ಅನುಭವಿಸುವಾಗ ಇತರರಿಗೆ ತೊಂದರೆಯಾಗಬಾರದು. ದೇಶದ ಏಕತೆ ಹಾಗೂ ಅಖಂಡತೆಯನ್ನು ಕಾಪಾಡಿಕೊಂಡು, ದೇಶದ ಘನತೆಯನ್ನು ಎತ್ತಿಹಿಡಿಯಬೇಕು ಎಂದು ನಿವೃತ್ತ ಪ್ರಾಂಶುಪಾಲ ನಾರಾಯಣ ಭಟ್ ಮೈರ್ಕಳ ತಿಳಿಸಿದರು.
ಅವರು ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಮುನಿಯೂರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ 2018-19ನೇ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ 31ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲಾ ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ವಿಜೇತ ಮಕ್ಕಳು ದೇಶಭಕ್ತಿಗೀತೆಯನ್ನು ಹಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪಿ.ಕೆ.ತಂಗಮಣಿ, ನಾರಾಯಣ ಮುನಿಯೂರು, ನೌಶಾದ್, ಸುರೇಖ ಉಪಸ್ಥಿತರಿದ್ದರು. ಶ್ರೀನಿವಾಸ ಮಾಸ್ತರ್ ಸ್ವಾಗತಿಸಿ, ಅಧ್ಯಾಪಿಕೆ ಊರ್ಮಿಳಾ ವಂದಿಸಿದರು. ಅಧ್ಯಾಪಕ ನಾರಾಯಣ ಆಸ್ರ ಕಾರ್ಯಕ್ರಮ ನಿರೂಪಿಸಿದರು.


