HEALTH TIPS

ಏತಡ್ಕದಲ್ಲಿ ಗ್ರಂಥಾಲಯ ದಿನಾಚರಣೆ -ಕೃತಿ ಅವಲೋಕನ

      ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಗ್ರಂಥಾಲಯ ವಾರಾಚರಣೆಯ ಸಮಾರೋಪ ಮತ್ತು ಗ್ರಂಥಾಲಯ ದಿನವನ್ನು ಏತಡ್ಕ ಸಮಾಜ ಮಂದಿರದಲ್ಲಿ ಶನಿವಾರ ಆಚರಿಸಲಾಯಿತು. ಈ ಸಂದರ್ಭ ಉದಯೋನ್ಮುಖ ಕವಿಗಳ ಎರಡು ಕೃತಿಗಳ ಅವಲೋಕನ ಮಾಡಲಾಯಿತು.
     ಅನುಪಮಾ ರಾಘವೇಂದ್ರ ಉಡುಪುಮೂಲೆ ಅವರ "ತಲ್ಲಣಗಳ ಪಲ್ಲವಿ " ಕಥಾ ಸಂಕಲನದ ಕುರಿತು ವಿಜಯಲಕ್ಷ್ಮಿ ಕಟ್ಟದಮೂಲೆ ಅವರು ಮಾತನಾಡಿದರು.ಕಥೆಗಾರ್ತಿಯ ಸಂಕ್ಷಿಪ್ತ  ಪರಿಚಯವನ್ನು ಮಾಡಿ ಸಂಕಲನದ ಹನ್ನೆರಡು ಕಥೆಗಳ ತಿರುಳನ್ನು ಸಭಿಕರ ಮುಂದೆ ತೆರೆದಿಟ್ಟರು.ಕಥೆಗಳು ಯಾವ ಸಂದೇಶವನ್ನು ಹೇಳುತ್ತವೆ  ಎಂಬುದನ್ನು ಸಂಕಲನದ ಶೀರ್ಷಿಕೆ ಧ್ವನಿಸುತ್ತದೆ ಎಂಬುದರ ಕಡೆಗೆ ಬೆಟ್ಟು ಮಾಡಿ ತೋರಿಸಿದರು.
        ಬಿ.ಎಸ್ ಯೇತಡ್ಕ ಅವರ ಚೊಚ್ಚಲ ಕಥಾ ಸಂಕಲನ "ತಿರುವು" ಅವಲೋಕನವನ್ನು ಚಂದ್ರಶೇಖರ ಏತಡ್ಕ ರ್ವಹಿಸಿದರು. ಯಾವ ಪಂಥ,ಆಂದೋಲನಗಳನ್ನೂ ನೆಚ್ಚಿಕೊಳ್ಳದೆ, ಭಾವ ಪ್ರಪಂಚವನ್ನು "ತಿರುವು"ನಲ್ಲಿ ನೀಡಿದ್ದಾರೆ.ಹೇಳಬೇಕಾದ ಮಾನವೀಯ ಎಳೆ ಗಳನ್ನು ವಿಶಿಷ್ಟ ರೀತಿಯಲ್ಲಿ  ಕುತೂಹಲಕಾರಿಯಾಗಿ ವಿಸ್ತರಿಸುವಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ.ಕಥಾ ಶೈಲಿ, ಭಾಷಾ ಪ್ರಯೋಗ ಸಮರ್ಥವಾಗಿದೆ. ಅವರು ಕಾಸರಗೋಡಿನ ಯಶಸ್ವೀ ಕಥೆಗಾರರೆನ್ನುವುದು ಹೆಮ್ಮೆಯ ವಿಚಾರ ಎಂದರು. ಕೆಲವು ಕಥೆಗಳ ತಿರುವನ್ನು ಉಲ್ಲೇಖಿಸಿದರು.
       ಸಮಾರಂಭದಲ್ಲಿ ಉಪಸ್ಥಿತರಿದ್ದ ಬಿ.ಎಸ್ ಯೇತಡ್ಕ ಪ್ರಾರಂಭದಲ್ಲಿ ಅಕ್ಷರ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅವರನ್ನು ಗೌರವಿಸಲಾಯಿತು.  ಅವರು ಮಾತನಾಡಿ ತಾವು ಕಥೆಗಾರನಾದ ಬಗೆಯನ್ನು  ತಿಳಿಸಿದರು. ಹತ್ತೂರಿನ ಗೌರವಕ್ಕಿಂತಲೂ ಹುಟ್ಟೂರಿನ ಗೌರವ ತವರಿಗೆ ಬಂದ ಮಗಳಿಗೆ ಆಗುವಷ್ಟೇ ಸಂತೋಷವನ್ನು ಕೊಟ್ಟಿದೆ ಎಂದರು.
      ಈ ಸಂದರ್ಭದಲ್ಲಿ ಸುಮಾರು ಹನ್ನೆರಡು ವರ್ಷಗಳಿಂದ ವಾರಕ್ಕೆ ನಾಲ್ಕು ಪುಸ್ತಕಗಳಂತೆ ಓದುತ್ತಿರುವ ಏತಡ್ಕ ಗ್ರಂಥಾಲಯದ ಹಿರಿಯ ಓದುಗರಾದ ಸರಸ್ವತಿ ಸಿ ಏತಡ್ಕ ಅವರನ್ನು ಗೌರವಿಸಲಾಯಿತು. ಅವರು ಮಾತನಾಡಿ ಹೊತ್ತು ಕಳೆಯಲು ಓದುವ ಹವ್ಯಾಸ ಬೆಳೆಸಿಕೊಂಡ ತಮಗೆ ವಿಷಯ ಸಂಗ್ರಹವಾಗುತ್ತದೆ.ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
       ಅಧ್ಯಕ್ಷತೆ ವಹಿಸಿದ್ದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಮಾತನಾಡಿ ಅನುಭವದ ಮೂಸೆಯಲ್ಲಿ ಬೆಂದ ಪಾಕವನ್ನು ಇಬ್ಬರೂ ಕಥೆಗಳ ಮುಖಾಂತರ ಉಣಬಡಿಸಿದ್ದಾರೆ ಎಂದರು.ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ಸ್ವಾಗತಿಸಿದರು.ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.ಗಣರಾಜ ಕಡೆಕಲ್ಲು ವಂದಿಸಿದರು. ಬೆಳಗ್ಗೆ ಅಧ್ಯಕ್ಷರು ಗ್ರಂಥಾಲಯದ ಧ್ವಜಾರೋಹಣ ಮಾಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries