ಬದಿಯಡ್ಕ: ಶಾಲಾ ಮಟ್ಟದ ವಿಜ್ಞಾನಮೇಳವು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಬುಧವಾರ ಜರಗಿತು. ಪ್ರಾಥಮಿಕದಿಂದ ಪ್ರೌಢ ವಿದ್ಯಾರ್ಥಿಗಳ ತನಕ ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳನ್ನು ತಮ್ಮದೇ ವಿಧಾನದ ಮೂಲಕ ಪ್ರದರ್ಶಿಸಿದರು. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಕರಕುಶಲ ಕಲೆಗಳು, ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ತಮ್ಮ ತಿಳುವಳಿಕೆ, ಅನುಭವ ಜ್ಞಾನಗಳನ್ನು ಉಪಯೋಗಿಸಿಕೊಂಡು ನಿತ್ಯಜೀವನದಲ್ಲಿ ಮಾನವೋಪಯೋಗಿಯಾಗಿ ಯಾವೆಲ್ಲಾ ರೀತಿಯಲ್ಲಿ ಬಳಸಬಹುದು ಎಂಬ ಚಿಂತನೆಯನ್ನು ತೆರೆದಿಟ್ಟರು. ಆಧುನಿಕ ತಂತ್ರಜ್ಞಾನದ ಜೊತೆಯಲ್ಲಿ ಬದುಕುವ ಭರಾಟೆಯ ಮಧ್ಯದಲ್ಲಿ ಸಮಾಜೋಪಯೋಗಿ, ಪರಿಸರ ಪ್ರೇಮಿ ಹಾಗೂ ಮುಂದಿನ ಪೀಳಿಗೆಗೆ ಉಪಯುಕ್ತವಾಗುವಂತಹ ಕೆಲವು ಪ್ರದರ್ಶಿನಿಗಳು ಮನೋಜ್ಞವಾಗಿದ್ದವು.
ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ವಿಜ್ಞಾನಮೇಳಕ್ಕೆ ಚಾಲನೆಯನ್ನು ನೀಡಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಕೌಶಲ್ಯದೊಂದಿಗಿನ ಸಂವಹನ ಅರ್ಥಪೂರ್ಣವಾಗಿರುತ್ತದೆ. ಶಾಲಾ ಮಟ್ಟದಲ್ಲಿಯೇ ಮಕ್ಕಳಿಗೆ ಇಂತಹ ವೇದಿಕೆಗಳನ್ನು ಒದಗಿಸಿದಾಗ ಭವಿಷ್ಯ ಉಜ್ವಲವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಅಧ್ಯಾಪಕರು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೈ ಬದಿಯಡ್ಕ, ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದರು. ಅಧ್ಯಾಪಿಕೆ ರಶ್ಮಿ ಪೆರ್ಮುಖ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.



