HEALTH TIPS

ಫಾರ್ಮಸಿಸ್ಟ್‍ಗಳು ಆರೋಗ್ಯಸಂರಕ್ಷಕರು : ಡಾ. ಶ್ರೀನಿಧಿ ಸರಳಾಯ-ಬದಿಯಡ್ಕ ಜನೌಷಧಿ ಕೇಂದ್ರದಲ್ಲಿ ಫಾರ್ಮಸಿಸ್ಟ್ ದಿನಾಚರಣೆ

       
        ಬದಿಯಡ್ಕ: ಫಾರ್ಮಸಿಸ್ಟ್‍ಗಳು ಕೇವಲ ಔಷಧಿ ವ್ಯಾಪಾರಿಗಳಲ್ಲ, ಬದಲಾಗಿ ನಮ್ಮ ಆರೋಗ್ಯಸಂರಕ್ಷಕರೂ ಆಗಿದ್ದಾರೆ. ವೈದ್ಯರು ಸಲಹೆ ನೀಡುವ ಔಷಧಿಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿ ಯೋಗ್ಯ ಮತ್ತು ಸಮಪ್ರಮಾಣದಲ್ಲಿ ಜನಸಾಮಾನ್ಯರಿಗೆ ನೀಡುವ ಮಹತ್ತರವಾದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವುದು ಶ್ಲಾಘನೀಯ ಎಂದು ಪ್ರಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ ಅಭಿಪ್ರಾಯಪಟ್ಟರು.
    ಬದಿಯಡ್ಕದಲ್ಲಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದಲ್ಲಿ ವಿಶ್ವ ಫಾರ್ಮಸಿಸ್ಟ್ ದಿನದ ಅಂಗವಾಗಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಫಾರ್ಮಸಿಸ್ಟ್ ರಾಜೇಶ್ವರಿ ಎಸ್.ಎನ್.ಭಟ್ ಹಾಗೂ ಇತರ ಸಿಬ್ಬಂದಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಅವರು ಮಾತನಾಡಿದರು.
     ಮುಂದಿನ ದಿನಗಳಲ್ಲಿ ಫಾರ್ಮಸಿಸ್ಟ್‍ಗಳಿಗೆ ವಿಶೇಷ ಅಧಿಕಾರಗಳು ಲಭಿಸಲಿದ್ದು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರವಾದ ಕರ್ತವ್ಯವನ್ನು ನಿಭಾಯಿಸಬೇಕಿದೆ. ಈ ಕ್ಷೇತ್ರಕ್ಕೆ ಉತ್ತವಾದ ಭವಿಷ್ಯವಿದ್ದು, ಈ ನಿಟ್ಟಿನಲ್ಲಿ ಯುವಜನತೆ ಮುಂದೆಬರಬೇಕಿದೆ ಎಂದು ಅವರು ತಿಳಿಸಿದರು.
    ಈ ಸಂದರ್ಭದಲ್ಲಿ ಸಂಸ್ಥೆಯ ಇತರ ಸಿಬ್ಬಂದಿಗಳಾದ ಹರೀಶ್, ವಿಜಯಲಕ್ಷ್ಮೀ, ಅಶ್ವಿನಿಯವರನ್ನು ಸಂಸ್ಥೆಯ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜನೌಷಧಿ ಕೇಂದ್ರದ ಮ್ಹಾಲಕ ಕುಮಾರಸುಬ್ರಹ್ಮಣ್ಯ ಪೈಸಾರಿ ಮಾತನಾಡಿ ಬಡಜನರ ಪಾಲಿಗೆ ವರದಾನವಾಗಿರುವ ಪ್ರಧಾನಮಂತ್ರಿಯವರ ಈ ಯೋಜನೆ ಜನಸಾಮಾನ್ಯರಿಗೆ ತಲುಪುವಲ್ಲಿ ಫಾರ್ಮಸಿಸ್ಟ್‍ಗಳ ಪಾತ್ರ ಹಿರಿದು. ಅವರು ಸಂಸ್ಥೆಯ ಆಧಾರಸ್ಥಂಭಗಳಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುವುದರಿಂದ ಉನ್ನತ ಗುಣಮಟ್ಟದ ಔಷಧಿಯು ಕಡಿಮೆ ಬೆಲೆಗೆ ಜನತೆಗೆ ತಲುಪಿ ಸರಕಾರದ ಈ ಯೋಜನೆ ಯಶಸ್ವಿಯಾಗುವುದಕ್ಕೆ ಸಾಧ್ಯ ಎಂದರು. ಗೌರವಾರ್ಪಣೆಯನ್ನು ಸ್ವೀಕರಿಸಿ ಫಾರ್ಮಸಿಸ್ಟ್ ರಾಜೇಶ್ವರಿ ಎಸ್.ಎನ್. ಭಟ್ ಮಾತನಾಡಿ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಗೌರವ ಸ್ವೀಕರಿಸಿ ಧನ್ಯತೆಹೊಂದಿರುವುದಾಗಿ ಪ್ರತಿಕ್ರಿಯಿಸಿದರು. ಪರಿಸರದ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಹಾಜರಿದ್ದರು. ಜಾನಕಿ ಪೈಸಾರಿ ನಿರೂಪಿಸಿದರು.
       ಅಭಿಮತ: 
   ಕಾಸರಗೋಡು ಜಿಲ್ಲೆಯ ಎರಡನೇ ಜನೌಷಧಿ ಕೇಂದ್ರವು ಬದಿಯಡ್ಕದಲ್ಲಿ ಪ್ರಾರಂಭಗೊಂಡು ಒಂದು ವರ್ಷಗಳಾಗುತ್ತಾ ಬಂದಿದ್ದು, ಹೆಚ್ಚಿನ ಎಲ್ಲಾ ಔಷಧಿಗಳು ಲಭಿಸುತ್ತಿದ್ದು ಗ್ರಾಮೀಣ ಜನತೆಗೆ ತುಂಬಾ ಅನುಕೂಲವಾಗಿ ಪರಿಣಮಿಸಿದೆ. ಜನಸೇವೆಯೇ ಜನಾರ್ಧನ ಸೇವೆಯೆಂಬ ನಿಟ್ಟಿನಲ್ಲಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಜನಪರ ಕಾಳಜಿಯಿಂದ ಸರಕಾರವು ಕೈಗೊಂಡ ಈ ಯೋಜನೆಗೆ ಅಲ್ಪಾವಧಿಯಲ್ಲಿಯೇ ಜನಸಾಮಾನ್ಯರು ನೀಡುತ್ತಿರುವ ಸ್ಪಂಧನ ಅಭೂತಪೂರ್ವವಾಗಿದೆ.
            - ಕುಮಾರಸುಬ್ರಹ್ಮಣ್ಯ ಪೈಸಾರಿ, ಜನೌಷಧಿ ಕೇಂದ್ರದ ಮ್ಹಾಲಕರು, ಬದಿಯಡ್ಕ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries