ಬದಿಯಡ್ಕ: ಪೆರಡಾಲ ಕೊರಗ ಕಾಲನಿಯ ನಿವಾಸಿಗಳನ್ನು ಕೇಂದ್ರ ಸರ್ಕಾರದ ಮಹತ್ತರವಾದ ಸುರಕ್ಷಾಭಿಮಾ ಯೋಜನೆಯಲ್ಲಿ ಅಳವಡಿಸಿಕೊಳ್ಳುವ ಕಾರ್ಯಕ್ಕೆ ಚಾಲನೆಯನ್ನು ನೀಡುವ ಮೂಲಕ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರಮೋದಿಯವರ 69ನೇ ಜನ್ಮದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ದೀಪಜ್ವಲನೆಗೈದು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಬಡಜನರಿಗೆ ಶ್ರೀರಕ್ಷೆಯಾಗಿರುವ ನಮ್ಮ ನೆಚ್ಚಿನ ಪ್ರಧಾನಿಯವರು ಸಮಾಜದ ಸಂಕಷ್ಟದಲ್ಲಿರುವ ಜನತೆಗೆ ನೆರವಾಗುವ ಅನೇಕ ಯೋಜನೆಗಳನ್ನು ಹೊರತಂದಿದ್ದಾರೆ. ಆದರೆ ಈ ಯೋಜನೆಗಳನ್ನು ಕೇರಳ ರಾಜ್ಯದಲ್ಲಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರವು ಹಿಂದೇಟು ಹಾಕುತ್ತಿರುವುದನ್ನು ಮನಗಂಡು ಪಕ್ಷದ ಕಾರ್ಯಕರ್ತರು ಜನತೆಗೆ ತಲುಪಿಸಲಿದ್ದಾರೆ. ದೇಶ ಸೇವೆ, ಜನಸೇವೆ ಬಿಜೆಪಿಯ ಪ್ರಧಾನ ಗುರಿಯಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಎಂ.ಸುಧಾಮ ಗೋಸಾಡ ಅಧ್ಯಕ್ಷತೆಯನ್ನು ವಹಿಸಿದ್ದರು. ನೇತಾರರಾದ ಕೃಷ್ಣ ಮಣಿಯಾಣಿ ಮೊಳೆಯಾರು, ನ್ಯಾಯವಾದಿ ಗಣೇಶ್, ವಿಶ್ವನಾಥ ಪ್ರಭು ಕರಿಂಬಿಲ, ಲಕ್ಷ್ಮೀನಾರಾಯಣ ಪೈ ಬಳ್ಳಂಬೆಟ್ಟು, ಪ್ರೇಮ ಕುಮಾರಿ, ಪುಷ್ಪಾ ಭಾಸ್ಕರ, ಜಯಂತಿ, ಪೆರಡಾಲ ಎಂ.ಜಿ.ಎಲ್.ಸಿ.ಶಾಲೆಯ ಅಧ್ಯಾಪಕ ಬಾಲಕೃಷ್ಣ ಅಚ್ಚಾಯಿ ಉಪಸ್ಥಿತರಿದ್ದರು. ಬಾಲಕೃಷ್ಣ ಶೆಟ್ಟಿ ಕಡಾರು ಸ್ವಾಗತಿಸಿ, ರಾಜೇಶ್ವರಿ ವಂದಿಸಿದರು.


