HEALTH TIPS

ಕೆಂಪುಕಲ್ಲು ಸಾಗಾಟದಿಂದ ಕೆಸರಿನ ಗುಂಡಿಯಾದ ಪಡಿಯತ್ತಡ್ಕ-ಬೆಳ್ಳೂರಡ್ಕ ರಸ್ತೆ; ಊರವರಿಂದ ಪ್ರತಿಭಟನೆ; ರಸ್ತೆ ತಡೆ

 
        ಮುಳ್ಳೇರಿಯ: ಕಾರಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪಡಿಯತ್ತಡ್ಕ-ಬೆಳ್ಳೂರಡ್ಕ ಗ್ರಾಮೀಣ ರಸ್ತೆಯು ಎಡೆಬಿಡದೆ ಕೆಂಪುಕಲ್ಲು ಸಾಗಾಟದ ಪರಿಣಾಮವಾಗಿ ತೀರಾ ಹದಗೆಟ್ಟು ಕೆಸರಿನ ಗದ್ದೆಯಂತಾಗಿದ್ದು ಭಾರೀ ಸಂಚಾರ ಸಮಸ್ಯೆ ಎದುರಾಗಿದೆ. ಇದನ್ನು ಪ್ರತಿಭಟಿಸಿ ಸ್ಥಳೀಯರು ಗುರುವಾರ ಕೆಂಪು ಕಲ್ಲು ಸಾಗಾಟದ ಲಾರಿಗಳನ್ನು ತಡೆದು ಪ್ರತಿಭಟಿಸಿದರು.
 ಕಾರಡ್ಕ ಮತ್ತು ಬೆಳ್ಳೂರು ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಲು ಈ ರಸ್ತೆಯು ಅತೀ ನಿಕಟವಾಗಿದೆ. ಆದೂರು ಗೇರು ಕೃಷಿ ಅಭಿವೃದ್ಧಿ ತೋಟದ ಮಧ್ಯೆ ಸಾಗುವ ಸುಮಾರು ಎರಡು ಕಿಲೋ ಮೀಟರ್ ಈ ಗ್ರಾಮೀಣ ರಸ್ತೆಯು ಈ ಪ್ರದೇಶಗಳ ನೂರಾರು ಕುಟುಂಬಗಳಿಗೆ ಬಲು ಉಪಯೋಗಿಯಾಗಿದೆ. ತಮ್ಮ ನಿತ್ಯ ಸಂಚಾರಕ್ಕೆ ಈ ರಸ್ತೆಯೇ ಏಕೈಕ ರಹದಾರಿ. ಆದರೆ ಈ ರಸ್ತೆಯು ಹದಗೆಟ್ಟು ಕೆಸರಿನ ಗದ್ದೆಯಂತಾಗಿದ್ದು ಇದರಲ್ಲಿ ವಾಹನ ಸಂಚಾರಕ್ಕೂ, ಕಾಲ್ನಡಿಗೆಗೂ ಭಾರೀ ಸಂಕಷ್ಟಪಡುವಂತಾಗಿದೆ.
         ಅನಧಿಕೃತ ಕಲ್ಲು ಸಾಗಾಟ-
 ಬೆಳ್ಳೂರಡ್ಕ, ಮಿಂಚಿಪದವು ಪ್ರದೇಶಗಳಲ್ಲಿ ಖಾಸಗಿ ವ್ಯಕ್ತಿಗಳ ಕೆಂಪುಕಲ್ಲಿನ ಪಣೆಗಳಿವೆ. ಇಲ್ಲಿಂದ ಕಲ್ಲುಗಳನ್ನು ನಾಲ್ಕೈದು ಟೆಂಪೊ ವಾಹನಗಳಲ್ಲಿ ಹೊರ ಪ್ರದೇಶಗಳಿಗೆ ಸಾಗಿಸಲಾಗುತ್ತಿದೆ. ಮಳೆ- ಬಿಸಿಲೆನ್ನದೆ ನಡೆಯುವ ಸಾಗಾಟ ರಸ್ತೆಯನ್ನು ಹದಗೆಡಿಸುತ್ತಿದೆ. ಈಗಂತೂ ಕೆಸರಿನ ಹೊಂಡವಾಗಿದೆ. ಕೆಸರಿನ ಓಕುಳಿಯಲ್ಲಿಯೂ ಕಲ್ಲು ತುಂಬಿದ ಟೆಂಪೋಗಳು ಓಡಾಟವನ್ನು ನಿಲ್ಲಿಸುತ್ತಲೇ ಇಲ್ಲ. ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಇವರಲ್ಲಿ ಹೇಳಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ.  ಪರಿಣಾಮವಾಗಿ ದುಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.  ಆದೂರು ಪೊಲೀಸ್ ಠಾಣೆಯ ಕಣ್ಣು ತಪ್ಪಿಸಿ ರಾತ್ರಿಯೂ ಸಹಾ ನಡೆಯುವ ಅನಧಿಕೃತ ಸಾಗಾಟಗಳೂ ನಡೆಯುತ್ತವೆ.
 ನಿರರ್ಥಕವಾದ ರಸ್ತೆ ದುರಸ್ತಿ-
ರಸ್ತೆಯು ಹದಗೆಟ್ಟ ಸಂದರ್ಭದಲ್ಲಿ ಸ್ಥಳೀಯರೇ ಅನಿವಾರ್ಯವಾಗಿ ಶ್ರಮದಾನದ ಮೂಲಕ ದುರಸ್ತಿ ನಡೆಸುತ್ತಾರೆ. ಆದರೆ ಇದರ ಪ್ರಯೋಜನ ಪಡೆಯುವವರು ಅನಧಿಕೃತ ಸಾಗಾಟಗಾರರೇ. ಬೇಸಗೆಯಲ್ಲಿ ಮಾತ್ರವಲ್ಲದೆ ಮಳೆಗಾಲದಲ್ಲೂ ಭಾರ ಹೇರಿದ ವಾಹನಗಳ ಓಡಾಟ ನಡೆಯುತ್ತದೆ. ಆದರೆ ಇವರು ರಸ್ತೆಯು ಹಾಳಾಗಿ ಸಂಚಾರ ಯೋಗ್ಯವಲ್ಲದಿದ್ದರೂ ಇದರ ದುರಸ್ತಿಗೆ ಮುಂದಾಗುತ್ತಿಲ್ಲ. ಪಡಿಯತ್ತಡ್ಕ-ಬೆಳ್ಳೂರಡ್ಕ ಮೂಲಕ ಕಾನಕ್ಕೋಡು-ಬೆಳ್ಳೂರು ಪ್ರದೇಶಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುವ ಕಾರಣ ಈ ಮೂಲಕ ವಾಹನ ಸಾಗಾಟ ನಡೆಯುತ್ತಲೇ ಇದೆ.
     ರಸ್ತೆ ತಡೆ-
 ಸ್ಥಳೀಯರು ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ಕಲ್ಲು ಸಾಗಾಟವನ್ನು ನಿಲ್ಲಿಸಬೇಕು ಎಂದು ಕಲ್ಲು ಸಾಗಾಟಗಾರರಲ್ಲಿ ಒತ್ತಾಯಿಸಿದರೂ ಅವರು ಅದನ್ನು ಕಿವಿಗೆ ಹಾಕುತ್ತಲ್ಲ. ಇದರಿಂದಾಗಿ ಸ್ಥಳೀಯರು ಈ ರಸ್ತೆಯಲ್ಲಿ ಕಲ್ಲು ಸಾಗಾಟದ ವಾಹನಗಳನ್ನು ಮಹಿಳೆಯರು ಸಹಿತ ತಡೆದು ಪ್ರತಿಭಟಿಸಿದರು. ಈ ರಸ್ತೆಯನ್ನು ದುರಸ್ತಿ ಮಾಡುತ್ತೇವೆ ಎಂಬ ಆಶ್ವಾಸನೆಯ ಹಿನ್ನೆಲೆಯಲ್ಲಿ ವಾಹನಗಳನ್ನು ಬಿಡಲಾಯಿತು. 
            ಸಂಕಷ್ಟಕ್ಕೀಡಾದ ರೋಗಿಗಳು-
 ಮಿಂಚಿಪದವು ಗೇರು ನಿಗಮದ ಗೇರು ತೋಟಕ್ಕೆ ಸೇರಿಕೊಂಡಿರುವ ಕಾರಣ ಮಾಯಿಲಂಕೋಟೆ, ಇಡುವಂಡೆ, ಬೆಳ್ಳೂರಡ್ಕ, ಮಿಂಚಿಪದವು ಮೊದಲಾದ ಪ್ರದೇಶಗಳಲ್ಲಿ ಎಂಡೋಸಲ್ಫಾನ್ ರೋಗ ಬಾಧಿತರು ಸಾಕಷ್ಟಿದ್ದಾರೆ. ಈ ರಸ್ತೆಯ ದುರವಸ್ಥೆಯಿಂದಾಗಿ ಯಾವ ರೋಗಿಯೂ ಔಷಧಿಗಾಗಿ ಹೊರಗಿಳಿಯದ ಸ್ಥಿಯಾಗಿದೆ. ಅನಾರೋಗ್ಯಕ್ಕೆ ತುತ್ತಾದವರಿಗಾಗಿ ತುರ್ತು ಸಂದರ್ಭದಲ್ಲಿ ಬಾಡಿಗೆ ವಾಹನಗಳು ಈ ರಸ್ತೆಯಲ್ಲಿ ಓಡಾಟ ನಡೆಸುತ್ತಿಲ್ಲ.
 ಆದರೆ ಈ ರಸ್ತೆಯು ಪಂಚಾಯಿತಿ ರಸ್ತೆಯಾಗಿದ್ದು ತೋಟಗಾರಿಕೆಯ ಯಾವುದೇ ಅನುಮತಿ ಇದರ ದುರಸ್ತಿಗೆ ಅಗತ್ಯವಿಲ್ಲ ಎಂದು ಪಂಚಾಯಿತಿ ಅಧಿಕೃತರು ಹೇಳುತ್ತಾರೆ. ಈ ರಸ್ತೆಯು ಬೆಳ್ಳೂರಡ್ಕ ಕಾನಕ್ಕೋಡು ಮೂಲಕ ಮುಳ್ಳೇರಿಯವನ್ನು ಸಂಪರ್ಕಿಸುವುದಲ್ಲದೆ, ಮಿಂಚಿಪದವು ಮೂಲಕ ಬೆಳ್ಳೂರು ಮೊದಲಾದ ಪ್ರದೇಶಗಳಿಗೆ ಸಾಗಲು ಅತೀ ನಿಕಟ ರಸ್ತೆಯಾಗಿದ್ದು ಇದನ್ನು ಅಭಿವೃದ್ಧಿಗೊಳಿಸಿ, ಡಾಮರೀಕರಿಸಿದರೆ ಮಾತ್ರಾ ಸಮಸ್ಯೆಗೆ ಶಾಸ್ವತ ಪರಿಹಾರ ಸಾಧ್ಯ. ಇದಕ್ಕಾಗಿ ಕಾರಡ್ಕ ಮತ್ತು ಬೆಳ್ಳೂರು ಪಂಚಾಯಿತಿಗಳು ಮುಂದಾಗಬೇಕು. ಈ ರಸ್ತೆಯ ಅಭಿವೃದ್ಧಿಗೆ ಸಾಕಷ್ಟು ಹಣ ವ್ಯಯ ಮಾಡಬೇಕಾಗಬಹುದು. ಇಷ್ಟೊಂದು ಮೊತ್ತವನ್ನು ಪಂಚಾಯಿತಿಗಳಿಂದ ಹೊಂದಿಸಲು ಅಸಾಧ್ಯ. ಹೀಗಿರುವಾಗ ಶಾಸಕರ ನಿಧಿ ಇಲ್ಲವೇ ಸಂಸದರ ನಿಧಿಯನ್ನು ಉಪಯೋಗಿಸಿ ಮಾತ್ರಾ ದುರಸ್ತಿ ಸಾಧ್ಯ. ಇಲ್ಲವೇ ಪ್ರಧಾನಮಂತ್ರಿಯವರ ಗ್ರಾಮ ಸಡಕ್ ಯೋಜನೆಯಲ್ಲಿ ಒಳಪಡಿಸಿ ಅಭಿವೃದ್ಧಿ ಮಾಡಬಹುದಾಗಿದೆ. ಇದಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳಬೇಕಾಗಿದೆ. ಅಧಿಕೃತರ ಗಮನ ಸೆಳೆಯಲು ಸಂಬಂಧಪಟ್ಟ ಅಧಿಕೃತರಿಗೆ ಮನವಿ ಸಲ್ಲಿಸಲು ಸ್ಥಳೀಯರು ನಿರ್ಧರಿಸಿದ್ದಾರೆ. ಈ ರಸ್ತೆಯ ಶೋಚನೀಯ ಸ್ಥಿತಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
            ಕಲ್ಲು ಸಾಗಾಟದವರಿಂದ ದುರಸ್ತಿ-
    ರಸ್ತೆ ತಡೆಯ ಹಿನ್ನೆಲೆಯಲ್ಲಿ ಗುರುವಾರವೇ ಕಲ್ಲು ಸಾಗಾಟದವರು ರಸ್ತೆಗೆ ಕೆಂಪು ಕಲ್ಲನ್ನು ಹಾಸಿ ಸ್ವಲ್ಪ ಭಾಗವನ್ನು ದುರಸ್ತಿ ಮಾಡಿದ್ದಾರೆ. ಆದರೆ ಸಂಪೂರ್ಣವಾಗಿ ದುರಸ್ತಿ ಮಾಡದಿದ್ದರೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯಬಹುದು. ಮಳೆಗಾಲ ಮರೆಯಾಗದೆ ಈ ರಸ್ತೆಯಲ್ಲಿ ಘನ ವಾಹನ ಓಡಾಟಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries