ಮಂಜೇಶ್ವರ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರಗಳ ಜಂಟಿ ಅಯೋಜನೆಯಲ್ಲಿ ನಿರ್ಮಾಣಗೊಂಡಿರುವ ಮಂಜೇಶ್ವರ ಮೀನುಗಾರಿಕಾ ಬಂದರಿನ ಉದ್ಘಾಟನೆಗೆ ಎಡರಂಗ ಸರ್ಕಾರ ಕಾಮಗಾರಿ ಮುಗಿಯುವ ಮೊದಲೇ ಆತುರ ತೋರುತಿರುವುದು ಉಪಚುನಾವಣೆಯ ರಾಜಕೀಯ ಲಾಭದ ದೃಷ್ಟಿಯಿಂದ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯ ತುರ್ತು ಸಭೆಯಲ್ಲಿ ಆರೋಪಿಸಿದೆ.
ಕೇಂದ್ರ ಸರ್ಕಾರದ ಆರ್ಥಿಕ ಪಾಲು ಶೇ.60 ಕ್ಕೂ ಅಧಿಕವಿರುವಾಗ ಉದ್ಘಾಟನೆಗೆ ಕೇಂದ್ರ ಮಂತ್ರಿಗಳನ್ನು ಅಮಂತ್ರಿಸದೆ ರಾಜ್ಯ ಸರ್ಕಾರದ ಮಂತ್ರಿಗಳು ಮಾತ್ರ ಬಂದು ಉದ್ಘಾಟಿಸಿದರೆ ಬಿಜೆಪಿ ಸೂಕ್ತ ಪ್ರತಿಭಟನೆಗೆ ತೀರ್ಮಾನಿಸಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ತಿಳಿಸಿದೆ.
ಬಂದರಿನ ಕಾಮಗಾರಿ ಪೂರ್ತಿಯಾಗಿಲ್ಲ. ವೈಜ್ಞಾನಿಕ ತಪಾಸಣೆ ನಡೆದಿಲ್ಲ. ಈಗಾಗಲೇ ಅಳಿವೆ ಬಾಗಿಲಲ್ಲಿ ದೋಣಿ ದುರಂತ ಅನೇಕ ಸಂಭವಿಸಿದ ಬಗ್ಗೆ ತನಿಖೆಯಾಗಿಲ್ಲ ಹಾಗೂ ಅದಕ್ಕೆ ನಿರ್ಮಾಣದಲ್ಲಿ ಉಂಟಾಗಿರುವ ಲೋಪವೇ ಎಂಬುದರ ಬಗ್ಗೆ ಮಾಹಿತಿ ಇನ್ನು ಸ್ಪಷ್ಟವಾಗಿಲ್ಲ.
ಬಂದರು ಸಂಪರ್ಕ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಅದನ್ನು ಕೂಡ ಸಂಚಾರ ಯೋಗ್ಯವಾಗಿ ಮಾಡಿಲ್ಲ, ಬಂದರಿನ ಸುತ್ತಮುತ್ತಲಿನ ಪ್ರದೇಶ ಮರಳು ಮಾಫಿಯಗಳ ಹಿಡಿತದಲ್ಲಿದ್ದು ಊರಿನ ಸಾಮಾನ್ಯ ನಾಗರಿಕರೆ ಬಂದರು ಪ್ರದೇಶಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಪ್ರಕೃತಿ ರಮಣೀಯ ಪ್ರದೇಶವಾಗಿದ್ದರು ಪ್ರವಾಸೋದ್ಯಮ ಕ್ಷೇತ್ರವಾಗಿಯೂ ಮಂಜೇಶ್ವರವನ್ನು ಪರಿಗಣಿಸದೆ ಆತುರದಲ್ಲಿ ಬಂದರು ಉದ್ಘಾಟಿಸಿ ಉಳಿದ ಕಾಮಗಾರಿಗಳ ಕೆಲಸ ಸ್ಥಗಿತಗೊಳಿಸುವ ಹುನ್ನಾರವೇ ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಹಿಂದೆ ಮಂಜೇಶ್ವರ ಗೋವಿಂದ ಪೈಗಳ ಗಿಳಿವಿಂಡು ಉದ್ಘಾಟನೆ ಸಮಯದಲ್ಲೂ ಬಿಜೆಪಿ ಪ್ರತಿನಿಧಿಗಳನ್ನು ಆಹ್ವಾನಿಸದೆ ಎಡರಂಗದ ಸರ್ಕಾರ ತಾರತಮ್ಯ ತೋರಿದ ನಿದರ್ಶನಗಳು ಇವೆ ಎಂದು ಬಿಜೆಪಿ ಮಂಡಲ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ಸಚಿವರನ್ನು ಉದ್ಘಾಟನೆಗೆ ಅಮಂತ್ರಿಸಬೇಕೆಂದು ಬಿಜೆಪಿ ಒತ್ತಾಯ ಮಾಡಲಿದೆ ಎಂದು ಬಿಜೆಪಿ ಮಂಡಲ ಸಮಿತಿ ತಿಳಿಸಿದೆ. ಮಂಡಲಾಧ್ಯಕ್ಷ ಸತಿಸ್ಚಂದ್ರ ಭಂಡಾರಿ, ಆದರ್ಶ ಬಿ.ಎಂ, ಪದ್ಮನಾಭ ಕಡಪರ ,ಯಾದವ ಬಡಾಜೆ, ಹರಿಶ್ಚಂದ್ರ ಎಂ, ಅಬ್ದುಲ್ಲಾ ಪಿಎಂ, ರಾಜೇಶ್ ತುಮಿನಾಡ್, ವಿನ್ಸಿ ಡಿಸಿಲ್ವ ಹಾಗೂ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

