ಮಂಜೇಶ್ವರ: ಊಟದಲ್ಲೂ ನಿದ್ದೆಯಲ್ಲೂ ಆ ಅಮ್ಮ ಮಗಳಿಗೆ ಕಾವಲಾಗಿ ನಿಂತದ್ದು ಸುಮಾರು ಐದು ದಶಕ. ಆದರೀಗ ವೃದ್ದೆ ಮಾತೆಗೆ ಮುಪ್ಪಾವರಿಸಿದೆ. ತನ್ನ ಕಾಲಶೇಷ ಹೆತ್ತ ಕರುಳಿನ ಗತಿಯೇನು ಎಂಬ ಚಿಂತೆಯಲ್ಲಿ ತಲೆಯ ಮೇಲಾಕಾಶ ಕೆಳಗೆ ಈ ಭೂಮಿ ಎಂಬ ಸ್ಥಿತಿಯಲ್ಲಿದ್ದ ಅವರತ್ತ ಸ್ನೇಹದ ನೆರಳು ಚಾಚಲ್ಪಟ್ಟಿದೆ. ಯಾರಿಗೂ ಬೇಡವಾದ ಅಮ್ಮ ಹಾಗೂ ಮಗಳು ಇನ್ನು ಸ್ನೇಹದ ಮನೆಯ ಅಕ್ಕರೆಯಲ್ಲಿ ಸುರಕ್ಷಿತರು.
ಮಧೂರು ಗ್ರಾಮ ಪಂಚಾಯತಿನ 17 ನೇ ವಾರ್ಡು ಮನ್ನಿಪ್ಪಾಡಿ ಲಕ್ಷಮನೆ ಕಾಲನಿ ಬಳಿಯ 78 ರ ಹರೆಯದ ವಯೋವೃದ್ದೆ ಪಾರ್ವತಿ ಹಾಗೂ 47 ರ ಹರೆಯಕ್ಕೆ ಬಂದಿದ್ದರೂ ಲೋಕದ ಪರಿವೆಯೇ ಇಲ್ಲದಂತಿರುವ ಪುತ್ರಿ ಸುನೀತಾಳ ಬಾಳಗೋಳು ನಿಜಕ್ಕೂ ಕರುಣಾಜನಕ. ಕುರುಚಲು ಜೋಪಡಿಯಲ್ಲಿ ದಿನದೂಡುವ ಅವರಿಗೆ ನೆಂಟರಿಷ್ಟರು, ಆಸುಪಾಸಿನ ಮಂದಿ ನೀಡುವ ಆಹಾರವೇ ಗತಿ. ನೋಡುಗರ ಕಣ್ಣಿಗೆ ಮರುಕ ಹುಟ್ಟಿದರೂ ಇವರ ಪುನರ್ವಸತಿ ಸಾಧ್ಯವಾಗದ ಮಾತು. ಸ್ಥಳೀಯ ಗ್ರಾ.ಪಂ ಅಧಿಕೃತರು, ಆರೋಗ್ಯ ಇಲಾಖೆ ಅಧಿಕಾರಿಗಳು ಇವರ ಬಗ್ಗೆ ಕಾಳಜಿ ವಹಿಸಿ ತಕ್ಕ ನೆರವು ನೀಡಿತ್ತು. ಆದರೆ, ಸೂಕ್ತ ಸಂರಕ್ಷಣೆ ಇವರಿಗೆ ಅನಿವಾರ್ಯವಾಗಿತ್ತು.
ಸುನೀತಾಳು ಎಳವೆಯಲ್ಲಿ ಸಹಜ ಸ್ಥಿತಿಯಲ್ಲಿದ್ದರೂ ಮುಂದೆ ಮನೋ ವಿಕಲತೆ ಉಂಟಾಯಿತು. ದೈಹಿಕ ಸ್ಥಿತಿಯೂ ಸೊರಗಿ ಹೋಗಿತ್ತು.ಅವರಿವರ ಮನೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಮಗಳನ್ನು ತನ್ನ ತೆಕ್ಕೆಯಲ್ಲಿ ಜೋಪಾನವಾಗಿ ರಕ್ಷಿಸುತ್ತಿದ್ದ ಪಾರ್ವತಿಗೆ ಮುಪ್ಪಾವರಿಸಿತು. ದೇಹ ಸೊರಗಿತು. ಎದ್ದು ನಡೆಯಲಾರದ ಸ್ಥಿತಿಗೆ ಬಂದಿದ್ದರು. ಹಾಗಿರುವಾಗ ಸ್ಥಿಮಿತ ಕಳೆದುಕೊಂಡ ಕುವರಿಯನ್ನು ನೋಡುವುದೆಂತು. ಅವರಿವರಲ್ಲಿ ತಮ್ಮ ಸ್ಥಿತಿಯ ಬಗ್ಗೆ ಅಲವತ್ತುಕೊಂಡರು. ಹೀಗೆ ಪರಿಸ್ಥಿತಿಯ ಗಂಭೀರತೆಯರಿತ ಮಧೂರು ಸಮೂಹ ಆರೋಗ್ಯ ಕೇಂದ್ರದ ಆರೋಗ್ಯಧಿಕಾರಿಯವರು ಮಂಜೇಶ್ವರದ ಸ್ನೇಹಾಲಯಕ್ಕೆ ಸಂಪರ್ಕಿಸಿದ್ದರು.
ವಿಷಯವರಿತದ್ದೇ ತಡ. ಸ್ನೇಹಾಲಯದ ಮುಖ್ಯಸ್ಥ ಜೋಸೆಫ್ ಕ್ರಾಸ್ತಾ ಅವರು ಪಾರ್ವತಿಯವರ ಮನೆಗೆ ಭೇಟಿಯಿರಿಸಿದ್ದರು. "ತಾನು ಊಹಿಸಿದ್ದಕ್ಕಿಂತಲೂ ದೀನ ಅಲ್ಲಿನ ದೃಶ್ಯ" ಎಂದು ಆ ಸ್ಥಿತಿಯನ್ನು ಜೋಸೆಫ್ ವಿವರಿಸಿದ್ದಾರೆ. ವೃದ್ಧೆ ಮಾತೆ ಹಾಗೂ ಪುತ್ರಿಗೆ ಸ್ನೇಹಾಲಯದಲ್ಲಿ ಆಶ್ರಯವೊದಗಿಸುವ ಭರವಸೆಯಿತ್ತರು. ಬುಧವಾರ ಜೋಸೆಫ್ ಕ್ರಾಸ್ತಾ ನೇತೃತ್ವದಲ್ಲಿ ಸ್ನೇಹಾಲಯ ಕಾರ್ಯಕರ್ತರು ತಲುಪಿ ಪಾರ್ವತಿ ಹಾಗೂ ಪುತ್ರಿಯನ್ನು ಕರೆದೊಯ್ದಿದ್ದಾರೆ. ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಮಧೂರು ಗ್ರಾ.ಪಂ. ಅಧ್ಯಕ್ಷೆ ಮಾಲತಿ ಸುರೇಶ್ ಅವರು ಸ್ನೇಹಾಲಯದ ಪುಣ್ಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.


