ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಉಪಚುನಾವಣೆಯಲ್ಲಿ ಎಲ್‍ಡಿಎಫ್, ಯುಡಿಎಫ್ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ಇನ್ನಷ್ಟೇ ಘೋಷಿಸಬೇಕಾಗಿದೆ.
ಯುಡಿಎಫ್ ಅಭ್ಯರ್ಥಿಯಾಗಿ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಎಂ.ಸಿ.ಖಮರುದ್ದೀನ್ ಅವರನ್ನು ಪಕ್ಷದ ಅಧ್ಯಕ್ಷರು ಘೋಷಿಸಿದ್ದರು. ಎಲ್‍ಡಿಎಫ್ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಂಕರ ರೈ ಅವರ ಹೆಸರನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಗುರುವಾರ ಬೆಳಿಗ್ಗೆ ಘೋಷಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಮಂಡಲ ಅಧ್ಯಕ್ಷ ಸತೀಶ್ಚಂದ್ರ ಭಂಡಾರಿ, ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಅವರ ಹೆಸರು ಪರಿಗಣನೆಯಲ್ಲಿದೆ.
ಗುರುವಾರ ಕೊಚ್ಚಿಯಲ್ಲಿ ನಡೆದ ಬಿಜೆಪಿ ರಾಜ್ಯ ಮಟ್ಟದ ಸಭೆಯಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ನಡೆಯಲಿರುವ ಉಪಚುನಾವಣಾ ಹಿನ್ನೆಲೆಯ ಅಭ್ಯರ್ಥಿಗಳ ಆಯ್ಕೆ ಪಟ್ಟಿ ನಿರ್ಮಾಣ ಸಭೆಯಲ್ಲಿ ಮಂಜೇಶ್ವರದಿಂದ ನ್ಯಾಯವಾದಿ ಕೆ.ಶ್ರೀಕಾಂತ್ ಹಾಗೂ ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅವರ ಹೆಸರುಗಳನ್ನು ಗುರುತಿಸಲಾಗಿದ್ದು, ಅಂತಿಮ ನಿರ್ಣಯಕ್ಕೆ ರಾಷ್ಟ್ರೀಯ ಸಮಿತಿಗೆ ಸಮರ್ಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಿಂದ ನಿರ್ಗಮನ:
ಈ ಮಧ್ಯೆ ಕೊಚ್ಚಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಅವರು ಉಪ ಚುನಾವಣೆ ನಡೆಯಲಿರುವ ಕೊನ್ನಿ ಅಥವಾ ಮಂಜೇಶ್ವರ ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧಿಸಬೇಕೆಂಬ ಚರ್ಚೆಯ ಮಧ್ಯೆ ತಾನು ಉಪ ಚುನಾವಣೆಯಲ್ಲಿ ಎಲ್ಲಿಯೂ ಸ್ಪರ್ಧಿಸುತ್ತಿಲ್ಲವೆಂದು ತಿಳಿಸಿ ಕೆ.ಸುರೇಂದ್ರನ್ ಸಭೆ ಮುಗಿಯುವ ಮೊದಲೇ ಸಭೆಯಿಂದ ತೆರಳಿರುವರೆಂದು ಬಲ್ಲಮೂಲಗಳಿಂದ ತಿಳಿಯಲಾಗಿದೆ. ಕೆ.ಸುರೇಂದ್ರನ್ ಅವರು ಈ ಹಿಂದೆಯೇ ತಾನು ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲಾರೆ ಎಂದು ಪಕ್ಷದ ನೇತಾರರಿಗೆ ಸೂಚನೆ ನೀಡಿದ್ದರು. ಜೊತೆಗೆ ಕೊನ್ನಿ ವಿಧಾನ ಸಭಾ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿಲ್ಲವೆಂದೂ ತಿಳಿಸಿದ್ದರು ಈ ಮಧ್ಯೆ ಪಕ್ಷದ ಒತ್ತಡದ ಮಧ್ಯೆಯೂ ಯಾವ ಕಾರಣಕ್ಕೂ ಸ್ಪರ್ಧೆಗಿಳಿಯಲಾರೆನೆಂಬ ಸುರೇಂದ್ರನ್ ಅವರ ವಾದ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.



