HEALTH TIPS

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸಂಸ್ಮರಣೆ-ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ತೋರಿದವರು ಗೋವಿಂದ ಪೈ-ಪ್ರೊ.ಎಸ್.ಶಿವಾಜಿ ಜೋಯಿಸ್


    ಮಂಜೇಶ್ವರ: ಕನ್ನಡ ನಾಡು-ನುಡಿಯ ಅಪ್ರತಿಮ ಸೇವೆಯ ಮೂಲಕ ಅಜರಾಮರರಾದ ಮಂಜೇಶ್ವರ ಗೋವಿಂದ ಪೈಗಳ ಬದುಕು-ಬರಹಗಳು ರಾಷ್ಟ್ರಕ್ಕೇ ಮಾದರಿಯಾದುದು. ತಮ್ಮ ಗೋಲ್ಗಥಾ ಮತ್ತು ವೈಶಾಖಿ ಖಂಡಕಾವ್ಯಗಳ ಮೂಲಕ ಸಂಪೂರ್ಣ ಮೇರುತ್ವವನ್ನು ಪ್ರತಿಬಿಂಬಿಸಿ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ಮೂಡಿಸಿ ರಾಷ್ಟ್ರಕವಿಯೆನಿಸಿದವರು ಎಂದು  ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಶಿವಾಜಿ ಜೋಯಿಸ್ ಮೈಸೂರು ಅವರು ತಿಳಿಸಿದರು.
    ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡು ಆಶ್ರಯದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮøತಿ ದಿನಾಚರಣೆಯ ಅಂಗವಾಗಿ ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳ ಬಳಿಕ ಸಂಜೆ ನಡೆದ ಸಮಾರೋಪದಲ್ಲಿ ಪಂಡಿತವಕ್ಕಿ ಸಂಸ್ಮರಣಾ ಭಾಷಣಗೈದು ಅವರು ಮಾತನಾಡಿದರು.
    ಬಹುಭಾಷಾ ಪಾಂಡಿತ್ಯದ ಪೈಗಳು ಕನ್ನಡ ಭಾಷೆ, ಸಾಂಸ್ಕøತಿಕತೆಗೆ ವಿಶಿಷ್ಟ ಹೊಸತನಗಳ ಮೂಲಕ ಸಂಕ್ರಮಣ ಕಾಲಘಟ್ಟದಲ್ಲಿ ನವದಿಶೆಗೆ ಕಾರಣರಾದವರಾಗಿದ್ದಾರೆ. ಸಾಂಗತ್ಯ-ಸಂಘರ್ಷಗಳನ್ನು ಸಮತೋಲನದಲ್ಲಿ ನಿಭಾಯಿಸಿದ ಪೈಗಳು ಕನ್ನಡ ಭಾಷೆ, ಸಾಹಿತ್ಯಕ್ಕೆ ನೀಡಿರುವ ಅತ್ಯಪೂರ್ವ ಕೊಡುಗೆಗಳು ಗಡಿನಾಡು ಕಾಸರಗೋಡಿನ ಹೆಮ್ಮೆಯೆನಿಸಿ ರಾಷ್ಟ್ರಮಟ್ಟದಲ್ಲಿ ಸದಾ ಹಸಿರಾಗುವಂತೆ ಮಾಡಿದೆ ಎಂದು ತಿಳಿಸಿದರು.
    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಮಾತನಾಡಿ, ಮತ ಸೌಹಾರ್ಧದ ಅವತಾರ ಪುರುಷನಂತಿದ್ದ ಪೈಗಳ ಸಮಗ್ರ ಜೀವನಾಧಾರಿತ ಜೀವನಚಿತ್ರಗಳ ವೀಡಿಯೋ ಸಂಕಲನವೊಂದರ ತಯಾರಿ ನಡೆಯುತ್ತಿದೆ. ಈ ಮೂಲಕ ಇಂದು ಸಮಾಜದಲ್ಲಿ ಹದಗೆಡುತ್ತಿರುವ ಸಂಬಂಧ, ಶಾಂತಿ, ಸೌಹಾರ್ಧತೆಗಳ ಸಂಘರ್ಷಗಳನ್ನು ಮೆಟ್ಟಿನಿಂತು ಸುಂದರ ಸಮಾಜ ನಿರ್ಮಾಣದತ್ತ ದಾಪುಗಾಲಿಡುವ ಚಿಂತನೆ ಸಾಕಾರವಾಗುವ ನಿರೀಕ್ಷೆ ಇರಿಸಲಾಗಿದೆ ಎಂದು ತಿಳಿಸಿದರು. ಜೊತೆಗೆ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನಲ್ಲಿ ಸಂರಕ್ಷಿಸಿಡಲಾಗಿರುವ ಸಾವಿರಾರು ಗ್ರಂಥಗಳ ಅಧ್ಯಯನ, ಓದುವಿಕೆಗೆ ಅವಕಾಶ ನೀಡುವ ಸಾರ್ವಜನಿಕ ಗ್ರಂಥಾಲಯದ ನವೀನ ಯೋಜನೆಯ ಭಾಗವಾಗಿ ಮೊದಲ ಹಂತದಲ್ಲಿ ವಿದ್ಯಾರ್ಥಿಗಳಿಗೆ ಅಂತಹ ಅವಕಾಶವೊದಗಿಸುವ ಉಪಕ್ರಮಕ್ಕೆ ಚಾಲನೆ ನೀಡಿರುವುದಾಗಿ ಈ ಸಂದರ್ಭ ತಿಳಿಸಿದರು.
    ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪಿ.ಎಂ.ಸಲೀಂ ಉಪಸ್ಥಿತರಿದ್ದು ಮಾತನಾಡಿದರು. ಗಿಳಿವಿಂಡಿನ ಸ್ಮಾರಕ ಸಮಿತಿಯ ಕಾರ್ಯದರ್ಶಿ ಕೆ.ಆರ್.ಜಯಾನಂದ ಸ್ವಾಗತಿಸಿ, ಪ್ರಾಧ್ಯಾಪಕಿ ಕೆ.ಲಕ್ಷ್ಮೀ ವಂದಿಸಿದರು. ವಿದ್ಯಾರ್ಥಿ ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.
    ಸ್ಮøತಿ ದಿನಾಚರಣೆಯ ಅಂಗವಾಗಿ ಕಣ್ಣೂರು ವಿವಿ ವ್ಯಾಪ್ತಿಯ ವಿವಿಧ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಆಡಳಿತಾಧಿಕಾರಿ ಡಾ.ಕೆ.ಕಮಲಾಕ್ಷ, ಗೋವಿಂದ ಪೈ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಶಿವಶಂಕರ ಜೋಡುಕಲ್ಲು, ಕೇರಳ ತುಳು ಅಕಾಡೆಮಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿಗಾರ್ ಬಿ., ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ, ನಿವೃತ್ತ ಶಿಕ್ಷಕ ಬಿ.ರಾಮ ಭಟ್ ಮೊದಲಾದವರು ಉಪಸ್ಥಿತರಿದ್ದರು. ಎಂ.ಅನಂತ ಮಲ್ಯ ಮತ್ತು ಬಳಗ, ಶ್ರದ್ದಾ ನಾಯರ್ಪಳ್ಳ ಮತ್ತು ಬಳಗದವರಿಂದ ಭಾವ ಗಾಯನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries