ಕಾಸರಗೋಡು: ನಗರದ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಐದು ದಿನಗಳಿಂದ ನಡೆದ 64 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.6 ರಂದು ರಾತ್ರಿ ಸಂಪನ್ನಗೊಂಡಿತು. ಕಾಸರಗೋಡು ರೈಲು ನಿಲ್ದಾಣ ಬಳಿಯ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಶ್ರೀ ಲಕ್ಷ್ಮೀ ಸರೋವರದಲ್ಲಿ ಶ್ರೀ ಗಣೇಶ ವಿಗ್ರಹವನ್ನು ಶುಕ್ರವಾರ ರಾತ್ರಿ 2.45 ಕ್ಕೆ ವಿಸರ್ಜಿಸುವ ಮೂಲಕ ಉತ್ಸವಕ್ಕೆ ತೆರೆ ಬಿತ್ತು.
ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಗಣೇಶ ವಿಗ್ರಹ ವಿಸರ್ಜನಾ ಶೋಭಾಯಾತ್ರೆ ಹೊರಟು ಬ್ಯಾಂಕ್ ರಸ್ತೆ , ಶಿವಾಜಿನಗರ, ಅಶ್ವಿನಿ ನಗರ, ನೇತಾಜಿ ವೃತ್ತ, ಮಹಾತ್ಮಾಗಾಂ„ ರಸ್ತೆ, ಶ್ರೀ ರಾಮ ಪೇಟೆಯಾಗಿ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಶ್ರೀ ಲಕ್ಷ್ಮೀ ಸರೋವರದಲ್ಲಿ ಶ್ರೀ ಗಣೇಶ ವಿಗ್ರಹವನ್ನು ವಿಸರ್ಜಿಸಲಾಯಿತು. ವಿಗ್ರಹ ವಿಸರ್ಜನೆಗೆ ಮುನ್ನ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಶ್ರೀ ಲಕ್ಷ್ಮೀ ಸರೋವರದ ಕಟ್ಟೆಯಲ್ಲಿ ಭಕ್ತಾದಿಗಳಿಂದ ಭಜನೆ ನಡೆದು, ಪೂಜೆಯ ಬಳಿಕ ಗಣಪತಿಯನ್ನು ಜಲಸ್ತಂಭನಗೊಳಿಸಲಾಯಿತು.
ಶೋಭಾಯಾತ್ರೆ ಸಾಗುವ ದಾರಿಯುದ್ದಕ್ಕೂ ವರ್ಣಮಯ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನಗರದ ಅಲ್ಲಲ್ಲಿ ರಿಕ್ಷಾ ಸ್ಟ್ಯಾಂಡ್‍ಗಳಲ್ಲಿ, ಸಂಘ ಸಂಸ್ಥೆಗಳು, ಸಾರ್ವಜನಿಕರು ಮಂಟಪಗಳನ್ನು ನಿರ್ಮಿಸಿದ್ದರು. ಮಂಟಪಗಳಲ್ಲಿ ಶ್ರೀ ಗಣೇಶನಿಗೆ ಆರತಿಯನ್ನು ಸಲ್ಲಿಸಿದರು. ರಸ್ತೆ ಯುದ್ದಕ್ಕೂ ಭಕ್ತಾದಿಗಳಿಗೆ ಪಾನೀಯಗಳನ್ನು ವಿತರಿಸಲಾಯಿತು. ವಾದ್ಯಘೋಷಗಳೊಂದಿಗೆ ಸಾಗಿದ ಶ್ರೀ ಗಣೇಶನ ಶೋಭಾಯಾತ್ರೆಯನ್ನು ವೀಕ್ಷಿಸಲು ರಸ್ತೆಯುದ್ದಕ್ಕೂ ಸಾವಿರಾರು ಭಕ್ತಾದಿಗಳು ನೆರೆದಿದ್ದರು. ಶೋಭಾಯಾತ್ರೆಯಲ್ಲಿ ಕೋಟೆಕಣಿಯ ಶ್ರೀ ಅನ್ನಪೂರ್ಣೇಶ್ವರಿ ಮಹಾಕಾಳಿ ದೇವಸ್ಥಾನದ ವತಿಯಿಂದ ಕೋಟೆಕಣಿ ಫ್ರೆಂಡ್ಸ್ ಆಟ್ರ್ಸ್ ಆ್ಯಂಡ್ ಸ್ಪೋಟ್ರ್ಸ್ ಕ್ಲಬ್‍ನ ಸಹಕಾರದೊಂದಿಗೆ ವಿಶೇಷ ಶೈಲಿಯ ಸಂಚಾರಿ ಯಕ್ಷಗಾನ ಬಯಲಾಟ `ದೇವಿ ಮಹಾತ್ಮೆ' ಜನಮನ ಸೂರೆಗೊಂಡಿತು. ವಿವಿಧ ಭಜನಾ ತಂಡಗಳಿಂದ ಭಜನೆ ಕಾರ್ಯಕ್ರಮವೂ ಜರಗಿತು.
ಸೆ.6 ರಂದು ಬೆಳಗ್ಗೆ ಗಣಹೋಮ, ಮಧ್ಯಾಹ್ನ ಪೂಜೆ, ಸಂಜೆ ಸಮಾರೋಪ ಸಭೆ ನಡೆಯಿತು. ಸಭೆಯಲ್ಲಿ ಡಾ|ಪ್ರಸಾದ್ ಮೆನೋನ್ ಅಧ್ಯಕ್ಷತೆ ವಹಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಡಾ|ಉಷಾ ಮೆನೋನ್ ಬಹುಮಾನಗಳನ್ನು ವಿತರಿಸಿದರು. ಸಭೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಂ.ಟಿ.ದಿನೇಶ್ ಉಪಸ್ಥಿತರಿದ್ದರು. ಸಭೆಯ ಬಳಿಕ ಧ್ವಜಾವತರಣ, ಮಹಾಪೂಜೆ ಜರಗಿತು.


