ಬದಿಯಡ್ಕ: ಪುರಾತನ ಕಾಲದಿಂದಲೂ ಒದಗಿಬಂದ ನಮ್ಮ ಸಂಸ್ಕಾರವನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸತ್ಕರ್ಮಗಳಿಂದ ಜೀವನವು ಪಾವನವಾಗುತ್ತದೆ. ತನ್ಮೂಲಕ ದೇವರ ಸೇವೆಯನ್ನು ಮಾಡುವ ಭಾಗ್ಯ ನಮ್ಮದಾಗುತ್ತದೆ. ಸದಾ ದೇವತಾ ಸೇವೆಯಿಂದ ನಮ್ಮ ಬದುಕನ್ನು ಸಾರ್ಥಕಗೊಳಿಸೋಣ ಎಂದು ಕುಕ್ಕಂಗೋಡ್ಲು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ ಅಭಿಪ್ರಾಯಪಟ್ಟರು.
ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಅಂತಿಮ ಹಂತದಲ್ಲಿದ್ದು, 2020 ಮಾರ್ಚ್ 20ರಿಂದ 28ರ ತನಕ ಬ್ರಹ್ಮಕಲಶಮಹೋತ್ಸವವು ಜರಗಲಿದ್ದು ಪೂರ್ವಭಾವಿಯಾಗಿ ಭಾನುವಾರ ಶ್ರೀ ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮಕ್ಕೆ ದೇವರ ಅನುಗ್ರಹವಿರುತ್ತದೆ. ಭಕ್ತ್ಯಾದರಗಳೊಂದಿಗೆ ಶ್ರೀದೇವರ ಸೇವೆಯನ್ನು ಮಾಡೋಣ ಎಂದರು.
ಸೇವಾ ಸಮಿತಿ ಅಧ್ಯಕ್ಷ, ಮೊಕ್ತೇಸರ ಹೈಕೋರ್ಟ್ ವಕೀಲ ಗೌರಿಶಂಕರ ರೈ ಮಾತನಾಡಿ ದೇವಸ್ಥಾನದ ಇತಿಹಾಸವನ್ನು ಸವಿವರಾಗಿ ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ದೇವಳದ ಮೂಲ ಮೊಕ್ತೇಸರರಾಗಿದ್ದ ಕೊಳತ್ತಾಯ ಕುಟುಂಬದ ಆಡಿ. ಕೃಷ್ಣ ಕೊಳತ್ತಾಯ, ಬಾರಿಕ್ಕಾಡು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ ಚಿತ್ತಾರಿ, ಧರ್ಮ ಚಿಂತಕ ವೆಂಕಟ್ರಮಣ ಹೊಳ್ಳ ಕಾಸರಗೋಡು, ಪ್ರೊ. ಶ್ರೀನಾಥ ಎ., ಜೀರ್ಣೋದ್ಧಾರ ಸಮಿತಿಯ ಕಾರ್ರ್ಯಾಧ್ಯಕ್ಷ ಶ್ಯಾಮ ಭಟ್ ಏವುಂಜೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಯಿತು. ಗೌರವ ರಕ್ಷಾಧಿಕಾರಿಯಾಗಿ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು, ಗೌರವಾಧ್ಯಕ್ಷರಾಗಿ ವಸಂತ ಪೈ ಬದಿಯಡ್ಕ, ಅಧ್ಯಕ್ಷರಾಗಿ ಆಡಿ. ನರೇಶ ರೈ ಕಾಸರಗೋಡು, ಕಾರ್ಯಾಧ್ಯಕ್ಷರಾಗಿ ಶ್ಯಾಮ ಭಟ್ ಏವುಂಜೆ, ಗೌರವ ಕಾರ್ಯದರ್ಶಿ ಮಹೇಶ ಭಟ್ ಪಡಿಯಡ್ಪು, ಪ್ರಧಾನ ಕಾರ್ಯದರ್ಶಿ ಸುಂದರ ಶೆಟ್ಟಿ ಕೊಲ್ಲಂಗಾನ, ಕೋಶಾಧಿಕಾರಿ ಸುರೇಶ್ ಏವುಂಜೆ ಹಾಗೂ ರಕ್ಷಾಧಿಕಾರಿಗಳು, ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ 101 ಸದಸ್ಯರನ್ನೊಳಗೊಂಡ ಉಪ ಸಮಿತಿಗಳನ್ನೂ ರಚಿಸಲಾಯಿತು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ಪಡಿಯಡ್ಪು ಅವರು ಕಾಮಗಾರಿ ಕೆಲಸಗಳ ಬಗ್ಗೆ ವಿವರವನ್ನು ನೀಡಿ ಸ್ವಾಗತಿಸಿದರು. ಚಂದ್ರಹಾಸ ರೈ ಏವುಂಜೆ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ಮಧ್ಯಾಹ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಬಲಿವಾಡು ಕೂಟದೊಂದಿಗೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನದಲ್ಲಿ ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.


