ಬದಿಯಡ್ಕ: ವಿಶ್ವದಲ್ಲಿಯೇ ಭಾರತವು ಪ್ರಜ್ವಲಿಸಲು ಇಲ್ಲಿನ ಸನಾತನ ಸಂಸ್ಕøತಿಯ ಜೀವನಶೈಲಿಯೇ ಪ್ರಧಾನ ಕಾರಣವಾಗಿದೆ. ನಮ್ಮ ಸಂಸ್ಕಾರ, ಆಚಾರ, ಪರಂಪರೆಗಳಿಂದ ಹಿಂದೂ ಧರ್ಮವು ಸುಭದ್ರವಾಗಿದೆ ಎಂದು ಸಹಕಾರ ಭಾರತಿಯ ಅಖಿಲ ಭಾರತ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಅಭಿಪ್ರಾಯಪಟ್ಟರು.
ಗುರುವಾರ ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರದ ಪುನಃಪ್ರತಿಷ್ಠೆ ಹಾಗೂ 38ನೇ ವಾರ್ಷಿಕೋತ್ಸವದ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಒಂದು ಕ್ಷೇತ್ರದ ಪ್ರತಿಷ್ಠೆ ನಡೆಯುವಾಗ ತಂತ್ರಿವರ್ಯರು ಆಚಾರ ಅನುಷ್ಠಾನಗಳನ್ನು ತೀರ್ಮಾನಿಸುತ್ತಾರೆ. ಪ್ರತಿಯೊಂದು ಕ್ಷೇತ್ರಕ್ಕೂ ಅಲ್ಲಿನ ಪ್ರತಿಷ್ಠೆಗನುಗುಣವಾಗಿ ಆಚಾರಗಳನ್ನು ತೀರ್ಮಾನಿಸಲಾಗುತ್ತದೆ. ಆಚಾರ ಅನುಷ್ಠಾನಗಳು ಸರಿಯಾಗಿದ್ದರೆ ಮಾತ್ರ ಅಲ್ಲಿನ ಸಾನ್ನಿಧ್ಯ ನೆಲೆನಿಲ್ಲಲು ಸಾಧ್ಯವಿದೆ. ಅದರ ಬದಲಾವಣೆ ಮಾಡಬೇಕಾಗಿರುವುದು ಆಡಳಿತ ನಡೆಸುವ ಸರ್ಕಾರವಲ್ಲ. ಕಾಲಕ್ಕೆ ತಕ್ಕ ಬದಲಾವಣೆ ನಡೆಯಬೇಕು ಆದರೆ ನಂಬಿಕೆಯ ಮೇಲಿನ ಬದಲಾವಣೆ ಸಲ್ಲದು. ಸಂದಿಗ್ಧ ಕಾಲಘಟ್ಟದಲ್ಲಿ ನಮ್ಮ ಆಚಾರಗಳನ್ನು ಉಳಿಸಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದ ಅವರು ಶಬರಿಮಲೆ ಅಯ್ಯಪ್ಪನ ಸಾನ್ನಿಧ್ಯವು ತನ್ನ ಪ್ರತ್ಯೇಕತೆಯಿಂದ ವಿಶ್ವದ ಗಮನ ಸೆಳೆದಿದೆ. ಭಗವಾನ್ ಅಯ್ಯಪ್ಪನ ದರ್ಶನಕ್ಕಾಗಿ ಎಷ್ಟೋ ಕಷ್ಟಗಳನ್ನು ಸಹಿಸಬೇಕಾಗಿದೆ. ತತ್ವಮಸಿ ಎಂದರೆ ನೀನು ನಾನೇ ಆಗಿದ್ದಿ ಎಂದಾಗಿದೆ. ಸ್ವಾಮಿಯ ದರ್ಶನಗೈಯಬೇಕಾದರೆ ನಾವೂ ಸ್ವಾಮಿಯಾಗಬೇಕು ಎಂದರು.
ಶ್ರೀಮಂದಿರದ ಸೇವಾಸಮಿತಿಯ ಅಧ್ಯಕ್ಷ ದಿವಾಕರ ಮಾವಿನಕಟ್ಟೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಂಚಿ ಕಾಮಕೋಟಿ ಆಸ್ಥಾನ ವಿದ್ವಾನ್ ಗಾನ ಪ್ರವೀಣ ಯೋಗೀಶ್ ಶರ್ಮ ಬಳ್ಳಪದವು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ 48 ದಿನಗಳ ವ್ರತಾನುಷ್ಠಾನಗಳಿಂದ ನಮ್ಮಲ್ಲಿ ಸಾತ್ವಿಕ ಚೈತನ್ಯ ವೃದ್ಧಿಸುತ್ತದೆ ಎಂದು ತಿಳಿಸಿ ಸುಶ್ರಾವ್ಯವಾಗಿ ಹಾಡಿ ಸಭಿಕರನ್ನು ಮಂತ್ರಮುಗ್ದರನ್ನಾಗಿಸಿದರು.
ಈ ಸಂದರ್ಭದಲ್ಲಿ ದಾರುಶಿಲ್ಪಿ ಪಿಲಾಂಕಟ್ಟೆ ರಾಮಕೃಷ್ಣ ಆಚಾರ್ಯ ಹಾಗೂ ಶ್ರೀಮಂದಿರದ ಸ್ಥಾಪಕ ಸದಸ್ಯ ಬೀಜಂತಡ್ಕ ಗೋಪಾಲಕೃಷ್ಣ ಭಟ್ ಅವರಿಗೆ ಕೃತಜ್ಞತಾ ಸಮರ್ಪಣೆ ನಡೆಯಿತು. ಶ್ರೀಮಂದಿರದ ಕೋಶಾಧಿಕಾರಿ ರಾಜೇಶ್ ನೆಕ್ರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ ಸ್ವಾಗತಿಸಿ, ಬಾಲಕೃಷ್ಣ ಕೋಳಾರಿ ವಂದಿಸಿದರು. ವಿಶ್ವನಾಥ ನಿರೂಪಿಸಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯಲ್ಲಿ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡರು. ಅಪರಾಹ್ನ ಬದಿಯಡ್ಕ ದಾಸ ಸಂಕೀರ್ತನಾ ಬಳಗದಿಂದ ಭಜನೆ, ಸಂಜೆ ಮನುಪಣಿಕ್ಕರ್ ಮತ್ತು ಬಳಗ ಶ್ರೀಶೈಲಂ ನಾರಂಪಾಡಿ ಇವರಿಂದ ತಾಯಂಬಕ ಜರಗಿತು.


