ಕಾಸರಗೋಡು: ವಯನಾಡ್ ಜಿಲ್ಲೆಯ ಬತ್ತೇರಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿನಿ ಶೆಹಲಾ ಶೆರಿನ್ ಹಾವುಕಡಿದು ಮೃತಪಟ್ಟ ಘಟನೆ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ವಿದ್ಯಾರ್ಥಿ ಸಂಘಟನೆಗಳಾದ ಎಸ್‍ಎಫ್‍ಐ, ಕೆಎಸ್‍ಯು, ಎಬಿವಿಪಿ, ಎಐಎಸ್‍ಎಫ್, ಎಂಎಸ್‍ಎಫ್ ಸಹಿತ ನಾನಾ ಸಂಘಟನೆ ಸದಸ್ಯರು ವಯನಾಡ್ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಎಸ್‍ಎಫ್‍ಐ ಹಾಗೂ ಕೆಎಸ್‍ಯು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಪೊಲೀಸರು ಲಾಟಿಪ್ರಹಾರ ನಡೆಸಬೇಕಾಯಿತು. ಮಹಿಳೆಯರ ಸಹಿತ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯ ಎರಡನೇ ಗೇಟ್ ಮೂಲಕ ಒಳ ಪ್ರವೇಶಿಸಿ ತಮ್ಮ ಪ್ರತಿಭಟನೆ ಸೂಚಿಸಿದರು. ಆದರೆ, ಇವರನ್ನು ತಡೆಗಟ್ಟಲು ಅಗತ್ಯ ಪೊಲೀಸ್ ಸಿಬ್ಬಂದಿಗಳಿಲ್ಲದ ಹಿನ್ನೆಲೆಯಲ್ಲಿ ಪೊಲೀಸರು ಮೂಕಪ್ರೇಕ್ಷಕರಾಗಬೇಕಾಯಿತು.
ವಿದ್ಯಾರ್ಥಿನಿ ಸಾವಿನಿಂದ ಕುಪಿತಗೊಂಡ ಬಿಜೆಪಿ ಕಾರ್ಯಕರ್ತರು ತಿರುವನಂತಪುರ ಸೆಕ್ರೆಟೇರಿಯೆಟ್ ಎದುರು ಯುವಮೋರ್ಚಾ ಕಾರ್ಯಕರ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆಎಸ್‍ಯು ಕಾರ್ಯಕರ್ತರು ರಾಜ್ಯ ಶಿಕ್ಷಣ ಖಾತೆ ಸಚಿವ ಪ್ರೊ. ಸಿ.ರವೀಂದ್ರನಾಥ್ ಅವರ ಕಚೇರಿ ಎದುರು ಧರಣಿ ನಡೆಸಿದರು.
ಈ ಮಧ್ಯೆ ಶಾಲೆಯ ಮುಖ್ಯ ಶಿಕ್ಷಕ ಕೆ.ಕೆ ಮೋಹನನ್, ಪ್ರಾಂಶುಪಾಲ ಎ.ಕೆ ಕರುಣಾಕರನ್ ಅವರನ್ನೂ ಸೇವೆಯಿಂದ ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜತೆಗೆ ರಕ್ಷಕ ಶಿಕ್ಷಕ ಸಂಘವನ್ನೂ ಬರ್ಕಾಸ್ತುಗೊಳಿಸಲಾಗಿದೆ. ಪ್ರಕರಣದ ಬಗ್ಗೆ ಹೈಕೋರ್ಟು ಮಧ್ಯ ಪ್ರವೇಶಿಸಿದ್ದು, ಜಿಲ್ಲಾ ನ್ಯಾಯಾಧೀಶರನ್ನು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದೆ. ಇನ್ನೊಂದೆಡೆ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಸರ್ಕಾರದಿಂದ ಸ್ಪಷ್ಟೀಕರಣ ಕೇಳಿದೆ. ವಿದ್ಯಾರ್ಥಿನಿ ಸಾವಿನ ಬಗ್ಗೆ ಶಿಕ್ಷಕರನ್ನು ಅಮಾನತುಗೊಳಿಸಿ, ಶಾಲಾ ರಕ್ಷಕ ಶಿಕ್ಷಕ ಸಂಘವನ್ನು ಬರ್ಖಾಸ್ತುಗೊಳಿಸಿ ಕೈಚೆಲ್ಲುವ ಬದಲು ಸಮಗ್ರ ತನಿಖೆ ನಡೆಸುವಂತೆ ಸರ್ಕಾರದ ಪ್ರಮುಖ ಮಿತ್ರಪಕ್ಷ ಸಿಪಿಐ ಮುಖಂಡ ಕಾನಂ ರಾಜೇಂದ್ರನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

